
ಬಿಗ್‌ಬಾಸ್ (Bigg Boss) ಮನೆಯಲ್ಲಿ ಕ್ಯಾಪ್ಟೆನ್ಸಿ ಟಾಸ್ಕ್ ನಡೆಯುತ್ತಿದೆ. ಬಿಗ್‌ಬಾಸ್ ಮನೆಯ ಮೊದಲ ಕ್ಯಾಪ್ಟನ್ ಆಯ್ಕೆ ಮಾಡಲು ಬಿಗ್‌ಬಾಸ್ ನಿನ್ನೆಯೇ ಒಂದು ಟಾಸ್ಕ್ ಆರಂಭಿಸಿದ್ದರು, ಅದುವೇ ನಾಣ್ಯಗಳ ಸುರಿಮಳೆ. ಮನೆಯ ಸದಸ್ಯರನ್ನು ಮೂರು ತಂಡಗಳನ್ನಾಗಿ ಮಾಡಿ, ವಿವಿಧ ಮುಖಬೆಲೆಯ ನಕಲಿ ನಾಣ್ಯಗಳನ್ನು ಬಿಗ್‌ಬಾಸ್ ಸುರಿಸಿದ್ದರು. ಯಾರು ಹೆಚ್ಚು ನಾಣ್ಯಗಳನ್ನು ಟಾಸ್ಕ್ನ ಅಂತ್ಯಕ್ಕೆ ಹೊಂದಿರುತ್ತಾರೆಯೋ ಆ ತಂಡ ಕ್ಯಾಪ್ಟೆನ್ಸಿ ಓಟದ ಫೈನಲ್ ಟಾಸ್ಕ್ಗೆ ಆಯ್ಕೆ ಆಗುತ್ತಾರೆ ಎಂಬುದು ನಿಯಮ.
ಆದರೆ ಗುರುವಾರದ ಎಪಿಸೋಡ್ನಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಗಳಾದ ಸೂರಜ್, ರಿಶಾ ಮತ್ತು ರಘು ಅವರನ್ನು ಕನ್ಫೆಷನ್ ರೂಂಗೆ ಕರೆಸಿ ಮೂವರಿಗೂ ಸಹ ವಿಶೇಷ ಆಫರ್ ಅನ್ನು ನೀಡಿದರು. ಮೂವರಿಗೂ ವಿಶೇಷ ನಾಣ್ಯ ನೀಡಿ, ಆ ನಾಣ್ಯವನ್ನು ತೆಗೆದುಕೊಂಡವರು ನೇರವಾಗಿ ಕ್ಯಾಪ್ಟನ್ಸಿ ಟಾಸ್ಕ್ಗೆ ಆಯ್ಕೆ ಆಗುತ್ತಾರೆ. ಆದರೆ ಅವರ ತಂಡ ಕ್ಯಾಪ್ಟೆನ್ಸಿ ಟಾಸ್ಕ್ನಿಂದ ಹೊರಗೆ ಉಳಿಯುತ್ತದೆ ಎಂಬ ನಿಯಮ ಹಾಕಿದರು. ಆ ಆಫರ್ ಅನ್ನು ರಘು ಮತ್ತು ರಿಶಾ ಪಡೆದುಕೊಂಡರು. ಆದರೆ ಸೂರಜ್ ತೆಗೆದುಕೊಳ್ಳಲಿಲ್ಲ. ಬದಲಿಗೆ ನನ್ನ ತಂಡದ ಜೊತೆಗೆ ಆಡುತ್ತೇನೆ, ಗೆದ್ದು ಎಲ್ಲರೂ ಟಾಸ್ಕ್ಗೆ ಆಯ್ಕೆ ಆಗುತ್ತೇವೆ ಎಂದರು.
ಆದರೆ ಸೀಕ್ರೆಟ್ ರೂಂನಲ್ಲಿ ನಡೆದಿದ್ದೆಲ್ಲವನ್ನೂ ಹೊರಗೆ ಸ್ಪರ್ಧಿಗಳು ನೋಡಿಬಿಟ್ಟರು. ತಮ್ಮ ತಂಡವನ್ನು ಕ್ಯಾಪ್ಟನ್ಸಿ ಟಾಸ್ಕ್ನಿಂದ ಹೊರಗೆ ಹಾಕಿದ ರಘು ಮತ್ತು ರಿಶಾ ಅವರಿಗೆ ಎಲ್ಲರೂ ಸೇರಿ ಕ್ಲಾಸ್ ತೆಗೆದುಕೊಂಡರು. ರಿಶಾ ಹಾಗೂ ರಘು ಮೇಲೆ ಇಡೀ ಮನೆಯೇ ಮುಗಿಬಿತ್ತು. ಧನುಶ್ ಅವರು ರಘು ಅವರನ್ನು ಸ್ವಾರ್ಥಿ ಎಂದು ಬೈದರೆ, ಜಾನ್ವಿ, ರಿಶಾ ಅನ್ನು ಛತ್ರಿ ಎಂದು ಕರೆದರು. ಮನೆ ಮಂದಿ ಎಲ್ಲ ಸೇರಿ ಇಬ್ಬರನ್ನೂ ಸ್ವಾರ್ಥಿಗಳೆಂದು ಕರೆದು ಛೀಮಾರಿ ಹಾಕಿದರು.
ಇದನ್ನೂ ಓದಿ:ಎಲ್ಲಾ ಸ್ಪರ್ಧಿಗಳು ಹೊರಕ್ಕೆ: ಖಾಲಿ ಖಾಲಿಯಾಗಿರುವ ಬಿಗ್‌ಬಾಸ್ ಮನೆ ಹೇಗಿದೆ ನೋಡಿ
ಆದರೆ ತಮ್ಮ ತಂಡವನ್ನು ಬಿಟ್ಟುಕೊಡದ ಸೂರಜ್ ಹೀರೋ ಆದರು. ಎಲ್ಲರೂ ಸಹ ಸೂರಜ್ ಅವರನ್ನು ಅಭಿನಂದಿಸಿದರು. ಅಂತಿಮವಾಗಿ ನಾಣ್ಯಗಳ ಟಾಸ್ಕ್ ಮುಗಿದಾಗ ಸೂರಜ್ ತಂಡ ಸೋತು, ಸೂರಜ್ ಅವರು ಕ್ಯಾಪ್ಟೆನ್ಸಿ ಟಾಸ್ಕ್ಗೆ ಆಯ್ಕೆ ಆಗಲಿಲ್ಲ. ರಘು ಅವರ ತಂಡ ಗೆದ್ದಿತಾದರೂ ರಘು, ಆಫರ್ ಸ್ವೀಕಾರ ಮಾಡಿದ್ದರಿಂದ ಅವರ ತಂಡ, ಕ್ಯಾಪ್ಟೆನ್ಸಿ ಟಾಸ್ಕ್ಗೆ ಹೋಗಲಿಲ್ಲ. ಅತ್ಯಂತ ಕಡಿಮೆ ನಾಣ್ಯಗಳನ್ನು ಸಂಗ್ರಹಿಸಿದ್ದ ರಿಶಾ ಸಹ ಕ್ಯಾಪ್ಟೆನ್ಸಿ ಟಾಸ್ಕ್ಗೆ ಆಯ್ಕೆ ಆದರು. ಈಗ ರಘು ಮತ್ತು ರಿಶಾ ಮಾತ್ರವೇ ಕ್ಯಾಪ್ಟೆನ್ಸಿ ಫೈನಲ್ ಟಾಸ್ಕ್ನಲ್ಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ