ಬಿಗ್ಬಾಸ್: ರಕ್ಷಿತಾ ಕುರಿತು ಅವಾಚ್ಯ ಪದ ಬಳಕೆ, ಅಶ್ವಿನಿ ಗೌಡ ವಿರುದ್ಧ ದೂರು ದಾಖಲು
Bigg Boss Kannada season 12: ಬಿಗ್ಬಾಸ್ ಮನೆಯಲ್ಲಿ ಕಳೆದ ವಾರ ಅಶ್ವಿನಿ ಗೌಡ ಮತ್ತು ರಕ್ಷಿತಾ ಶೆಟ್ಟಿ ನಡುವೆ ಜಗಳ ನಡೆದಿತ್ತು. ಈ ವೇಳೆ ಅಶ್ವಿನಿ ಗೌಡ ರಕ್ಷಿತಾರ ಉಡುಗೆ, ಇರುವ ರೀತಿ, ವ್ಯಕ್ತಿತ್ವವನ್ನು ಉಲ್ಲೇಖಿಸುತ್ತಾ ಬೈಗುಳದ ಪದವೊಂದನ್ನು ಬಳಸಿದ್ದರು. ಇದೀಗ ಇದೇ ವಿಷಯಕ್ಕೆ ಹೈಕೋರ್ಟ್ ವಕೀಲರೊಬ್ಬರು ಅಶ್ವಿನಿ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಬಿಗ್ಬಾಸ್ ಸೀಸನ್ 12 (Bigg Boss Kannada) ವಾರಗಳು ಕಳೆದಂತೆ ನಿಧಾನಕ್ಕೆ ರಂಗೇರುತ್ತಿದೆ. ಮನೆಯಲ್ಲಿ ಸ್ಪರ್ಧಿಗಳ ನಡುವೆ, ಗೆಳೆತನದ ಜೊತೆಗೆ ಜಗಳ-ಮನಸ್ಥಾಪಗಳು ಸಹ ಹೆಚ್ಚಾಗುತ್ತಿವೆ. ಈ ಮೂರು ವಾರಗಳಲ್ಲಿ ಅಶ್ವಿನಿ ಗೌಡ, ಬಿಗ್ಬಾಸ್ ಮನೆಯ ಗಟ್ಟಿ ಸ್ಪರ್ಧಿ ಎನಿಸಿಕೊಂಡಿದ್ದರು. ಮನೆಯ ಇತರೆ ಸದಸ್ಯರ ಮೇಲೆ ಪ್ರಭಾವ ಬೀರಿದ್ದರು. ಆದರೆ ಕಳೆದ ವಾರ ಅಶ್ವಿನಿ ಮತ್ತು ಜಾನ್ವಿ, ಪುಟ್ಟ ಹುಡುಗಿ ರಕ್ಷಿತ ಶೆಟ್ಟಿ ಕುರಿತಾಗಿ ನಡೆದುಕೊಂಡ ರೀತಿ, ರಕ್ಷಿತಾಗೆ ಕೊಟ್ಟ ಹಿಂಸೆಗೆ ಮನೆಯವರಿಂದಲೇ ವಿರೋಧ ವ್ಯಕ್ತವಾಯ್ತು. ವಯಸ್ಸಿನಲ್ಲಿ ಕಿರಿವಳೆಂದು ಸಹ ನೋಡದೆ ರಕ್ಷಿತಾ ವಿರುದ್ಧ ಕಟು ವಾಗ್ದಾಳಿ ಮಾಡಿದ್ದರು.
ಆದರೆ ಈಗ ಅದೇ ಅಶ್ವಿನಿ ಗೌಡಗೆ ಮುಳುವಾಗಿದೆ. ರಕ್ಷಿತಾ ಮೇಲೆ ಜಗಳ ಮಾಡಿದ ಬಳಿಕ ಅಶ್ವಿನಿ ಗೌಡ ಬೇರೊಬ್ಬ ಸ್ಪರ್ಧಿಯೊಟ್ಟಿಗೆ ರಕ್ಷಿತಾ ಬಗ್ಗೆ ಮಾತನಾಡುತ್ತಾ ಪದವೊಂದನ್ನು ಬಳಕೆ ಮಾಡಿದ್ದರು. ಇದೀಗ ಆ ಕುರಿತಾಗಿ ಬಿಡದಿ ಪೊಲೀಸ್ ಠಾಣೆಯಲ್ಲಿ ಅಶ್ವಿನಿ ವಿರುದ್ಧ ದೂರು ದಾಖಲಾಗಿದೆ. ಹೈಕೋರ್ಟ್ನ ವಕೀಲರೊಬ್ಬರು ಅಶ್ವಿನಿ ಗೌಡ ವಿರುದ್ಧ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾರೆ. ಹೈಕೋರ್ಟ್ ವಕೀಲ ಪ್ರಶಾಂತ್ ಮೆಹ್ತಾಲ್ ಎಂಬುವರು ಅಶ್ವಿನಿ ಗೌಡ ಹಾಗೂ ಬಿಗ್ಬಾಸ್ಗೆ ಸಂಬಂಧಿಸಿದ ಸಿನೆಸ್ ಹೆಡ್ ಪ್ರಶಾಂತ್ ನಾಯ್ಕ್, ಸುಷ್ಮಾ, ಪ್ರಕಾಶ್ ಸೇರಿ ನಾಲ್ವರ ವಿರುದ್ಧ ದೂರು ದಾಖಲಿಸಿದ್ದಾರೆ.
ರಕ್ಷಿತಾ ಕುರಿತಾಗಿ ‘ಶಿ ಈಸ್ ಎ ಎಸ್’ (She is a S) ಎಂದು ಅಶ್ವಿನಿ ಗೌಡ ಹೇಳಿದ್ದರು. ರಕ್ಷಿತಾರ ಉಡುಗೆ, ಆಕೆ ಇರುವ ರೀತಿ ಇದನ್ನೆಲ್ಲ ಉಲ್ಲೇಖಿಸಿ ‘ಶಿ ಈಸ್ ಎ ಎಸ್’ ಎಂದು ಅಶ್ವಿನಿ ಹೇಳಿದ್ದರು. ವೀಕೆಂಡ್ ಎಪಿಸೋಡ್ನಲ್ಲಿ ಸುದೀಪ್ ಸಹ ಅಶ್ವಿನಿ ಅವರ ಈ ಪದ ಬಳಕೆಯನ್ನು ಖಂಡಿಸಿದ್ದರು. ಅಶ್ವಿನಿ ಯಾವ ಅರ್ಥದಲ್ಲಿ ‘ಎಸ್’ ಎಂದಿದ್ದರು ಎಂಬುದು ಸ್ಪಷ್ಟವಿಲ್ಲ. ಆದರೆ ಸಾಮಾಜಿಕ ಜಾಲತಾಣದಲ್ಲಿ ‘ಎಸ್’ ಎಂಬುದನ್ನು ಬೇರೆ ಬೇರೆ ರೀತಿಯ ಅರ್ಥಗಳನ್ನು ಕೊಡಲಾಗುತ್ತಿದೆ.
ಇದನ್ನೂ ಓದಿ:ಅಶ್ವಿನಿಯನ್ನು ಟಾರ್ಗೆಟ್ ಮಾಡಿದ ವೈಲ್ಡ್ ಕಾರ್ಡ್ ಸ್ಪರ್ಧಿಗಳು: ಆಗಿದ್ದೇನು?
ವೀಕೆಂಡ್ ಎಪಿಸೋಡ್ನಲ್ಲಿ, ಅಶ್ವಿನಿ ಅವರು ರಕ್ಷಿತಾ ಬಗ್ಗೆ ಆಡಿದ ಮಾತುಗಳಿಗೆ ಸುದೀಪ್ ಟೀಕಿಸಿದ ಬಳಿಕ ಅಲ್ಲಿಯೇ ಅಶ್ವಿನಿ ಅವರು ರಕ್ಷಿತಾ ಬಳಿ ಕ್ಷಮೆ ಕೇಳಿದರು. ರಕ್ಷಿತಾ ಸಹ ಅಶ್ವಿನಿ ಅವರನ್ನು ಕ್ಷಮಿಸಿದರು. ಆದರೆ ಈಗ ಆ ಘಟನೆ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಂದಹಾಗೆ ಅಶ್ವಿನಿ ಗೌಡ, ನಟಿಯಾಗಿರುವ ಜೊತೆಗೆ ಕರವೇ ಸಂಘಟನೆಯ ಸಕ್ರಿಯ ಸದಸ್ಯೆ ಆಗಿದ್ದು, ಅವರೇ ಹೇಳಿಕೊಂಡಿರುವಂತೆ ಅವರ ಮೇಲೆ ಈಗಾಗಲೇ ಸಾಕಷ್ಟು ಪ್ರಕರಣಗಳು ದಾಖಲಾಗಿವೆ. ಈಗ ಈ ಒಂದು ಹೊಸ ಪ್ರಕರಣವೂ ಅವರ ಮೇಲೆ ಬಂದಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




