ಮತ್ತೆ ಬಿಗ್ಬಾಸ್ ಋತು ಪ್ರಾರಂಭವಾಗಿದೆ. ಮೊದಲನೆಯದಾಗಿ ತೆಲುಗು ಬಿಗ್ಬಾಸ್ ಆರಂಭವಾಗಿದ್ದು, ತೆಲುಗು ಬಿಗ್ಬಾಸ್ ಸೀಸನ್ 8ರ ಪ್ರೋಮೊ ಬಿಡುಗಡೆ ಆಗಿದ್ದು, ಕಳೆದ ವರ್ಷಕ್ಕಿಂತಲೂ ಭಿನ್ನವಾಗಿ ಈ ವರ್ಷದ ಬಿಗ್ಬಾಸ್ ತೆಲುಗು ಮೂಡಿಬರಲಿದೆ ಎಂಬುದು ಪ್ರೋಮೊದಿಂದ ತಿಳಿದು ಬರುತ್ತಿದೆ. ಮತ್ತೊಂದು ವಿಶೇಷವೆಂದರೆ ಪ್ರೋಮೋ ನಲ್ಲಿ ತೋರಿಸಿರುವಂತೆ ತೆಲುಗಿನ ಕೆಲವು ಸ್ಟಾರ್ ನಟ-ನಟಿಯರು ಸಹ ಬಿಗ್ಬಾಸ್ ಮನೆಯೊಳಗೆ ಹೋಗಿದ್ದಾರೆ. ಮಾತ್ರವಲ್ಲದೆ ಬಿಗ್ಬಾಸ್ ಪ್ರಾರಂಭವಾದ ಮೊದಲ ದಿನವೇ ಎಲಿಮಿನೇಷನ್ ಸಹ ನಡೆದಿದೆ.
ತೆಲುಗು ಬಿಗ್ಬಾಸ್ ಸೀಸನ್ 8 ರ ಪ್ರೋಮೊ ಇದೀಗ ಬಿಡುಗಡೆ ಆಗಿದೆ. ಈ ಹಿಂದಿನ ಕೆಲ ಸೀಸನ್ಗಳಂತೆ ಈ ಸೀಸನ್ ಅನ್ನೂ ಸಹ ಅಕ್ಕಿನೇನಿ ನಾಗಾರ್ಜುನ ಅವರೇ ನಿರೂಪಣೆ ಮಾಡಲಿದ್ದಾರೆ. ಕಳೆದ ಸೀಸನ್ ಭಾರಿ ಯಶಸ್ಸು ಗಳಿಸಿತ್ತು. ಬಿಗ್ಬಾಸ್ ಟಿಆರ್ಪಿಯ ಹಳೆಯ ದಾಖಲೆಗಳನ್ನು ಮುರಿದು ಹಾಕಿತ್ತು. ಅದೇ ಕಾರಣಕ್ಕೆ ಈ ಬಾರಿ ಇನ್ನಷ್ಟು ವಿಶೇಷವಾಗಿ ಹಾಗೂ ಭಿನ್ನ-ಭಿನ್ನ ಕ್ಷೇತ್ರಗಳಿಂದ ಸ್ಪರ್ಧಿಗಳನ್ನು ಆಯ್ದು ತರಲಾಗಿದೆ. ಈಗ ಬಿಡುಗಡೆ ಆಗಿರುವ ಪ್ರೋಮೋನಲ್ಲಿ ಸ್ಪರ್ಧಿಗಳ ಮುಖವನ್ನು ತೋರಿಸಿಲ್ಲವಾದರು. ಉದ್ಘಾಟನೆ ದಿನ ಬಂದಿರುವ ಕೆಲವು ಸ್ಟಾರ್ ನಟ-ನಟಿಯರನ್ನು ತೋರಿಸಲಾಗಿದೆ.
ಪ್ರೋಮೋನಲ್ಲಿ ಸ್ಪರ್ಧಿಗಳ ಕಾಲುಗಳನ್ನು ಮಾತ್ರವೇ ತೋರಿಸಲಾಗಿದೆ. ಆದರೆ ನಾಗಾರ್ಜುನ ಹೇಳಿರುವಂತೆ ಈ ಬಾರಿ ಯಾವುದೇ ಸ್ಪರ್ಧಿ ಒಂಟಿಯಾಗಿ ಮನೆಯ ಒಳಗೆ ಹೋಗುವಂತಿಲ್ಲ ಬದಲಿಗೆ ಎಲ್ಲರೂ ಜಂಟಿಯಾಗಿಯೇ ಹೋಗಬೇಕಿದೆ. ಇದರಿಂದಾಗಿ ಕೆಲವರಿಗೆ ಸಮಸ್ಯೆ ಆಗಲಿದೆ. ಒಂಟಿಯಾಗಿ ಒಳಗೆ ಹೋಗಲು ಯತ್ನಿಸಿದ ಕೆಲವರನ್ನು ನಾಗಾರ್ಜುನ ತಡೆದಿದ್ದಾರೆ ಸಹ.
ಇದನ್ನೂ ಓದಿ:Bigg Boss OTT: ಬಿಗ್ಬಾಸ್ 3 ಗೆದ್ದ ಸನಾ, ಸಹ ಸ್ಪರ್ಧಿಗಳಿಂದ ವಿರೋಧ
ಮತ್ತೊಂದು ವಿಶೇಷತೆಯೆಂದರೆ ಮೊದಲ ದಿನ ದೊಡ್ಡ ತಾರಾಗಣವೇ ಬಿಗ್ಬಾಸ್ ಮನೆ ಸೇರಿಕೊಂಡಿದೆ. ನಟ ನಾನಿ, ಪ್ರಿಯಾಂಕಾ ಮೋಹನ್ ಅವರುಗಳು ಬಿಗ್ಬಾಸ್ ಶೋಗೆ ಆಗಮಿಸಿದ್ದಾರೆ. ಅವರಿಬ್ಬರನ್ನೂ ಒಂದು ವಾರ ಮನೆಯೊಳಗೆ ಇರುವಂತೆ ನಾಗಾರ್ಜುನ ಮನವಿ ಮಾಡಿದ್ದಾರೆ. ಕೊನೆಗೆ ಇಬ್ಬರೂ ಸಹ ಕೊರಳಿಗೆ ಮೈಕ್ ನೇತು ಹಾಕಿಕೊಂಡು ಬಿಗ್ಬಾಸ್ ಮನೆ ಒಳಗೆ ಹೋಗಿದ್ದಾರೆ. ಅದಾದ ಬಳಿಕ ನಟ, ನಿರ್ಮಾಪಕ ರಾಣಾ ದಗ್ಗುಬಾಟಿ ಬಂದಿದ್ದಾರೆ. ಅವರ ಹಿಂದೆಯೇ ನಟಿ ನಿವೇತಾ ಥಾಮಸ್ ಅವರುಗಳನ್ನು ಸಹ ಬಿಗ್ಬಾಸ್ ಮನೆಯ ಒಳಗೆ ಕಳಿಸಲಾಗಿದೆ.
ರಾಣಾ ದಗ್ಗುಬಾಟಿಯನ್ನು ಆರು ದಿನಕ್ಕೆ ನಿವೇತಾ ಅನ್ನು ಐದಿ ದಿನಕ್ಕೆ ಬಿಗ್ಬಾಸ್ ಮನೆಯ ಒಳಗೆ ನಾಗಾರ್ಜುನ ಕಳಿಸಿದ್ದಾರೆ. ಆದರೆ ನಿಜಕ್ಕೂ ಅವರು ಅಷ್ಟು ದಿನಗಳ ಕಾಲ ಒಳಗೆ ಇರಲಿದ್ದಾರೆಯೇ ತಿಳಿಯದು. ಒಳಗೆ ಹೋಗಿರುವ ನಟ ರಾಣಾ ದಗ್ಗುಬಾಟಿ ಮತ್ತು ನಟ ನಾನಿ ಹಾಗೂ ನಿವೇತಾ ಅವರುಗಳು ಸ್ಪರ್ಧಿಗಳನ್ನು ಚೆನ್ನಾಗಿ ಕಾಲೆಳೆದಿದ್ದಾರೆ. ‘ಈಗ ನಗುತ್ತಿದ್ದೀರಿ ಮುಂದೆ ಏನಾಗುತ್ತೀರೋ’ ಎಂದು ನಾನಿ ತಮಾಷೆ ಮಾಡಿದ್ದಾರೆ. ಬಳಿಕ ಪ್ರೋಮೋದ ಕೊನೆಯಲ್ಲಿ ನಿರ್ದೇಶಕರೊಬ್ಬರು ಬಿಗ್ಬಾಸ್ ಮನೆ ಒಳಗೆ ಹೋಗಿ ಮೊದಲ ದಿನದಿಂದಲೇ ಎಲಿಮಿನೇಷನ್ ಪ್ರಾರಂಭವಾಗಿದೆ ಒಬ್ಬರನ್ನು ಹೊರಗೆ ಕರೆದುಕೊಂಡು ಹೋಗಲಿದ್ದೇನೆ ಎಂದು ಶಾಕ್ ನೀಡಿದ್ದಾರೆ. ಅಂದಹಾಗೆ ಇಂದು (ಸೆಪ್ಟೆಂಬರ್ 1) ರಂದು ಸಂಜೆ ಏಳು ಗಂಟೆಗೆ ಬಿಗ್ಬಾಸ್ ತೆಲುಗು ಸೀಸನ್ 8 ಪ್ರಾರಂಭವಾಗಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 12:55 pm, Sun, 1 September 24