
ಕನ್ನಡದ ಅನೇಕ ಕಲಾವಿದರು ಬೇರೆ ಭಾಷೆಯ ಧಾರಾವಾಹಿಗಳಲ್ಲಿ ಬೇಡಿಕೆ ಹೊಂದಿದ್ದಾರೆ. ಬಾಲ ಕಲಾವಿದರು ಕೂಡ ತೆಲುಗು ಭಾಷೆಯ ಸೀರಿಯಲ್ಗಳಲ್ಲಿ ನಟಿಸುತ್ತಿದ್ದಾರೆ. ಕನ್ನಡದ ಬಾಲ ನಟಿ ನಿಶಿತಾ (Nishitha) ತೆಲುಗಿನ ‘ಲಕ್ಷ್ಮಿ ನಿವಾಸಂ’ ಧಾರಾವಾಹಿಯಲ್ಲಿ ಒಂದು ಪಾತ್ರ ಮಾಡಿದ್ದಾಳೆ. ಆದರೆ ಆಕೆಗೆ ‘ಲಕ್ಷ್ಮಿ ನಿವಾಸಂ’ (Lakshmi Nivasam) ಸೀರಿಯಲ್ ತಂಡದಿಂದ ವಂಚನೆ ಆಗಿದೆ ಎಂದು ತಾಯಿ ಪ್ರಿಯಾ ಅವರು ಆರೋಪ ಮಾಡಿದ್ದಾರೆ. ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾರೆ. ತಮಗೆ ಆದ ಅನ್ಯಾಯದ ಬಗ್ಗೆ ವಿಡಿಯೋದಲ್ಲಿ ವಿವರಿಸಿದ್ದಾರೆ.
ಕನ್ನಡದ ಲಕ್ಷ್ಮಿ ನಿವಾಸ ಸೀರಿಯಲ್ನಲ್ಲೂ ಬಾಲಕಿ ನಿಶಿತಾ ನಟಿಸಿದ್ದಾಳೆ. ತೆಲುಗಿನ ‘ಲಕ್ಷ್ಮಿ ನಿವಾಸ’ ಧಾರಾವಾಹಿಯಲ್ಲಿ ಆಕೆ ತುಂಬಾ ಕಷ್ಟಪಟ್ಟು ಕೆಲಸ ಮಾಡಿದ್ದಾಳೆ. ಎಷ್ಟೇ ತಡವಾದರೂ, ಕಷ್ಟವಾದರೂ ನಟನೆ ಮುಂದುವರಿಸಿದ್ದ ನಿಶಾತಾಳನ್ನು ಈಗ ಸೀರಿಯಲ್ನಿಂದ ತೆಗೆದು ಹಾಕಲಾಗಿದೆ. ಆಕೆಯ ಬದಲಿಗೆ ಬೇರೆ ಬಾಲ ನಟಿಗೆ ಅವಕಾಶ ನೀಡಲಾಗಿದೆ.
ನಿಶಿತಾ ನಟನೆ ಮಾಡುವಾಗ ಕರೆಂಟ್ ಶಾಕ್ ತಗುಲಿತ್ತು. ಸ್ವಿಮ್ಮಿಂಗ್ ಪೂಲ್ನಲ್ಲಿ ಕೂಡ ಶೂಟ್ ಮಾಡಿಸಿದ್ದರು. ತಡರಾತ್ರಿ ಶೂಟಿಂಗ್ ಮಾಡಿಸಿ, ನಿದ್ದೆ ಬರುತ್ತಿದೆ ಎಂದರೂ ನಿಶಿತಾಳನ್ನು ಬಿಟ್ಟಿರಲಿಲ್ಲ. ಹುಶಾರಿಲ್ಲದೇ ಇದ್ದಾಗಲೂ ಚಿತ್ರೀಕರಣ ಮಾಡಿಸಿದ್ದರು. ಮಧ್ಯ ರಾತ್ರಿ ಕ್ಯಾಬ್ ನೀಡಿರಲಿಲ್ಲ. ಹೀಗೆ ಹಲವು ಆರೋಪಗಳನ್ನು ನಿಶಿತಾ ಅವರ ತಾಯಿ ಪ್ರಿಯಾ ಮಾಡಿದ್ದಾರೆ.
‘ಲಕ್ಷ್ಮಿ ನಿವಾಸಂ’ ಧಾರಾವಾಹಿ ನಿರ್ಮಾಪಕಿ ಪ್ರಶಾಂತಿ ಮೇಲೆ ಪ್ರಿಯಾ ಅವರು ಆರೋಪ ಹೊರಿಸಿದ್ದಾರೆ. ನಿಶಿತಾಳಿಂದ ಇಷ್ಟೆಲ್ಲ ಕೆಲಸ ಮಾಡಿಸಿಕೊಂಡು, ಬಳಿಕ ಯಾವುದೇ ಮಾಹಿತಿ ನೀಡದೇ ಆಕೆಯ ಬದಲಿಗೆ ಬೇರೆ ಬಾಲನಟಿಯನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ಪ್ರಿಯಾ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ಏಪ್ರಿಲ್ ತಿಂಗಳಿಂದ ನಿಶಿತಾಗೆ ಸಂಭಾವನೆ ಕೂಡ ನೀಡಿಲ್ಲ ಎಂದು ಪ್ರಿಯಾ ಹೇಳಿದ್ದಾರೆ.
ಇದನ್ನೂ ಓದಿ: ಉದಯ ವಾಹಿನಿಯಲ್ಲಿ ಮತ್ತೆ ಬರುತ್ತಿದೆ ‘ಮಾಂಗಲ್ಯ’ ಧಾರಾವಾಹಿ: ಈ ಬಾರಿ ಹೊಸ ಕಥೆ
‘ಇದು ಕೇವಲ ಸ್ಯಾಂಪಲ್ ಅಷ್ಟೇ. ತುಂಬಾ ಟಾರ್ಚರ್ ಕೊಟ್ಟಿದ್ದಾರೆ. ಎಲ್ಲದನ್ನೂ ಒಂದು ವಾರ ಬಿಟ್ಟು ಮಾತಾಡ್ತೀನಿ. ಸದ್ಯ ಶೂಟಿಂಗ್ ಇದೇ ಹೀಗಾಗಿ ಈಗ ಮಾತಾಡೋಕೆ ಆಗಲ್ಲ’ ಎಂದು ನಿಶಿತಾ ತಾಯಿ ಪ್ರಿಯಾ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:34 pm, Thu, 28 August 25