ಉದಯ ವಾಹಿನಿಯಲ್ಲಿ ಮತ್ತೆ ಬರುತ್ತಿದೆ ‘ಮಾಂಗಲ್ಯ’ ಧಾರಾವಾಹಿ: ಈ ಬಾರಿ ಹೊಸ ಕಥೆ
ಶ್ರೀಮಂತರ ಮನೆತನದ ಹುಡುಗ ಒಂದು ಸಂದರ್ಭದಲ್ಲಿ ತನ್ನ ಅಮ್ಮನ ಅಹಂಕಾರ ಮುರಿಯಲು ಬಡ ಕುಟುಂಬದ ಹುಡುಗಿಗೆ ಮಾಂಗಲ್ಯ ಕಟ್ಟಿಬಿಡುತ್ತಾನೆ. ಅಲ್ಲಿಂದ ಅವರ ಜೀವನದ ಹೊಸ ಪಯಣ ಶುರುವಾಗುತ್ತದೆ. ಈ ರೀತಿಯ ಕಥಾಹಂದರ ‘ಮಾಂಗಲ್ಯ’ ಧಾರಾವಾಹಿಯಲ್ಲಿ ಇದೆ. ಸೆಪ್ಟೆಂಬರ್ 2ರಿಂದ ಉದಯ ವಾಹಿನಿಯಲ್ಲಿ ಈ ಸೀರಿಯಲ್ ಪ್ರಸಾರ ಆರಂಭವಾಗಲಿದೆ.

ಜನಪ್ರಿಯ ‘ಉದಯ ಟಿವಿ’ಯಲ್ಲಿ (Udaya TV) ಅನೇಕ ಸೀರಿಯಲ್ಗಳು ಜನರ ಮನಗೆದ್ದಿವೆ. ಆ ಪೈಕಿ ಹಲವು ವರ್ಷಗಳ ಹಿಂದೆ ಪ್ರಸಾರ ಆಗಿದ್ದ ‘ಮಾಂಗಲ್ಯ’ ಧಾರಾವಾಹಿ (Mangalya Serial) ತನ್ನದೇ ಛಾಪು ಮೂಡಿಸಿತ್ತು. ಅದು ಅತಿ ದೀರ್ಘ ಧಾರಾವಾಹಿಗಳಲ್ಲಿ ಒಂದೆಂಬ ಹೆಗ್ಗಳಿಕೆ ಹೊಂದಿತ್ತು. ಬರೋಬ್ಬರಿ ಎಂಟು ವರ್ಷ ಕಾಲ ಪ್ರಸಾರವಾಗಿ ವೀಕ್ಷಕರನ್ನು ರಂಜಿಸಿತ್ತು. ವಿಶೇಷ ಏನೆಂದರೆ, ಈಗ ‘ಮಾಂಗಲ್ಯ’ ಶೀರ್ಷಿಕೆಯಲ್ಲಿ ಹೊಸ ಧಾರಾವಾಹಿ (Serial) ಬರುತ್ತಿದೆ. ಸೆಪ್ಟೆಂಬರ್ 2ರ ಮಂಗಳವಾರದಿಂದ ಈ ಸೀರಿಯಲ್ ಆರಂಭ ಆಗಲಿದೆ. ಬಳಿಕ ಪ್ರತಿ ಸೋಮವಾರದಿಂದ ಶನಿವಾರದ ತನಕ ಸಂಜೆ 7 ಗಂಟೆಗೆ ಈ ಧಾರಾವಾಹಿ ಪ್ರಸಾರ ಆಗಲಿದೆ.
‘ಮಂಗಳವಾರ ಮಾಂಗಲ್ಯವಾರ’ ಎಂಬ ಘೋಷವಾಕ್ಯದೊಂದಿಗೆ ಈ ಸೀರಿಯಲ್ ಶುರುವಾಗುತ್ತಿದೆ. ಈ ರೀತಿ ಮಂಗಳವಾರ ಪ್ರಸಾರ ಆರಂಭಿಸುತ್ತಿರುವ ಕನ್ನಡದ ಮೊದಲ ಸೀರಿಯಲ್ ‘ಮಾಂಗಲ್ಯ’. ಜಗನ್, ಐಶ್ವರ್ಯಾ ಪಿಸ್ಸೆ ಅವರು ಈ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ಮಾಡುತ್ತಿದ್ದಾರೆ. ಜಾನ್ಸಿ, ಬಿ.ಎಂ. ವೆಂಕಟೇಶ್, ಇಂಚರಾ, ದಿಶಾ, ಹನುಮಂತು, ಜಯಬಾಲು, ಚಿತ್ರಾ, ರೂಪೇಶ್, ದಾಮಿನಿ ಮುಂತಾದವರು ಪಾತ್ರವರ್ಗದಲ್ಲಿ ಇದ್ದಾರೆ.
‘ಬಿಗ್ಬಾಸ್’, ‘ಗಾಂಧಾರಿ’, ‘ಲಕ್ಷಣ’, ‘ಶ್ರೀಗೌರಿ’ ಖ್ಯಾತಿಯ ನಟ ಜಗನ್ ಅವರು ‘ಮಾಂಗಲ್ಯ’ ಧಾರಾವಾಹಿಯಲ್ಲಿ ಒಳ್ಳೇ ಕುಡುಕ ಗಂಡನ ಪಾತ್ರ ಮಾಡುತ್ತಿದ್ದಾರೆ. ಅಲ್ಲದೇ ಅವರೇ ನಿರ್ಮಾಣ ಮತ್ತು ಪ್ರಧಾನ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ‘ಅನುರೂಪ’, ‘ಗಿರಿಜಾ ಕಲ್ಯಾಣ’, ‘ಸರ್ವಮಂಗಳ ಮಾಂಗಲ್ಯೆ’, ‘ಸುಂದರಿ’ ಮುಂತಾದ ಧಾರಾವಾಹಿಗಳಲ್ಲಿ ನಟಿಸಿರುವ ಐಶ್ವರ್ಯಾ ಪಿಸ್ಸೆ ಅವರು ‘ಮಾಂಗಲ್ಯ’ ಸೀರಿಯಲ್ ನಾಯಕಿ.
‘ಉದಯ ಟಿವಿ’ಯಲ್ಲಿ ಗಗನ್ ಅವರಿಗೆ ಇದು ಮೊದಲ ಸೀರಿಯಲ್. ‘ಇದರಲ್ಲಿ ನಟ, ನಿರ್ದೇಶಕ, ನಿರ್ಮಾಪಕನ ಜವಾಬ್ದಾರಿ ನಿಭಾಯಿಸುತ್ತಿದ್ದೇನೆ. ಈ ಪಾತ್ರ ಬಹಳ ಸವಾಲಿನದ್ದಾಗಿದೆ. ಇದಕ್ಕಾಗಿ ತುಂಬಾ ಪೂರ್ವತಯಾರಿ ಮಾಡಿಕೊಳ್ಳುತ್ತಿದ್ದೇನೆ. ನಿರ್ದೇಶಕನಾಗಿ ಬಹಳ ದೊಡ್ಡ ಜವಾಬ್ದಾರಿ ಇದೆ. ಮಾಂಗಲ್ಯ ಎಂಬುದು ಉದಯ ಟಿವಿಯ ಪ್ರತಿಷ್ಠಿತ ಶೀರ್ಷಿಕೆ . ಅದೇ ಶೀರ್ಷಿಕೆಯಲ್ಲಿ ಮತ್ತೆ ಧಾರಾವಾಹಿ ಮಾಡುತ್ತಿರುದು ನನ್ನ ಅದೃಷ್ಟ. ಸನ್ಟಿವಿ ನೆಟ್ವರ್ಕ್ ನನಗೆ ಇಂಥ ಅವಕಾಶ ಒದಗಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು’ ಎಂದು ಜಗನ್ ಹೇಳಿದ್ದಾರೆ.
ಇದನ್ನೂ ಓದಿ: ಗಗನಾಗೆ ಹೊಸ ಧಾರಾವಾಹಿಯಲ್ಲಿ ನಟಿಸೋ ಅವಕಾಶ
‘ಸುಂದರಿ’ ಸೀರಿಯಲ್ ಬಳಿಕ ನನ್ನನ್ನು ಈ ‘ಮಾಂಗಲ್ಯ’ ಧಾರಾವಾಹಿಯ ಪಾತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದು ಖುಷಿಯ ವಿಚಾರ. ಮಯೂರಿ ಎಂಬ ಜವಾಬ್ದಾರಿಯುತ ಮೃದು ಸ್ವಭಾವದ ಹುಡುಗಿಯ ಪಾತ್ರಕ್ಕೆ ನ್ಯಾಯ ಸಲ್ಲಿಸುವ ವಿಶ್ವಾಸ ಹೊಂದಿದ್ದೇನೆ’ ಎಂದು ಐಶ್ವರ್ಯಾ ಅವರು ಹೇಳಿದ್ದಾರೆ. ಕುಡುಕ ಗಂಡನನ್ನು ಸರಿದಾರಿಗೆ ತರುವ ಹೆಂಡತಿಯ ಪಾತ್ರದಲ್ಲಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




