ಭಾರತದ ಭಕ್ತಿ ಪಂಥದಲ್ಲಿ ಇತಿಹಾಸ ಸೃಷ್ಟಿಸಿದ ಅತ್ಯದ್ಭುತ ಕೀರ್ತನಕಾರರು ಪುರಂದರ ದಾಸರು(Purandara Dasa). ಈ ಮಹಾನ್ ಶಕ್ತಿಯ ಜೀವನ ಕಥೆ ದೃಶ್ಯರೂಪ ಪಡೆದು ಇದೇ ಫೆ.28ರಿಂದ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಅದುವೇ ದಾಸ ಪುರಂದರ(Dasa Purandara Serial). ಧಾರ್ಮಿಕ ನೆಲೆಗಟ್ಟಿನಲ್ಲಿ ಹೊಸ ಕ್ರಾಂತಿ ಹುಟ್ಟುಹಾಕುವ ಧಾರಾವಾಹಿಯಾಗಿ ಕರ್ನಾಟಕ ಸಂಗೀತ ಪಿತಾಮಹ ಪುರಂದರ ದಾಸರ ಜೀವನ ಚರಿತ್ರೆ ಮೂಡಿಬರುತ್ತಿದೆ. ಕೆಲವು ದಿನಗಳ ಹಿಂದೆ ರಿಲೀಸ್ ಆದ ಪ್ರೋಮೋ ಕೂಡ ಎಲ್ಲೆಡೆ ಸದ್ದು ಮಾಡಿದ್ದು, ಇದೀಗ ಧಾರಾವಾಹಿ ವೀಕ್ಷಣೆಗೆ ವೀಕ್ಷಕರು ಕಾತರದಿಂದ ಕಾಯುತ್ತಿದ್ದಾರೆ.
ದಾಸ ಪುರಂದರ ಧಾರಾವಾಹಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿರುವವರಲ್ಲಿ ಲಾವಣ್ಯ ಕೂಡ ಒಬ್ಬರು. ಈಗಾಗಲೇ ಹಲವು ಧಾರಾವಾಹಿಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡ ಅವರು ದಾಸ ಪುರಂದರದಲ್ಲಿ ಖಳನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡ ಮಾತ್ರವಲ್ಲದೆ ಈಹಿಂದೆ ತೆಲುಗಿನ ಧಾರಾವಾಹಿಯಲ್ಲಿಯೂ ಲಾವಣ್ಯ ನಟಿಸಿದ್ದರು. ಅದ್ಭುತ ನಟನಾ ಶೈಲಿಯ ಮೂಲಕ, ಅಪ್ಪಟ ದೇಸಿ ಹೆಣ್ಣುಮಗಳಾಗಿ ಫೆ.28ರಿಂದ ಸಂಜೆ 6ಕ್ಕೆ ನವಕೋಟಿ ನಾರಾಯಣ ಪುರಂದರ ದಾಸರ ಜೀವನ ಕಥೆ ದಾಸ ಪುರಂದರದಲ್ಲಿ ಕನ್ನಡಿಗರ ಮುಂದೆ ಲಾವಣ್ಯ ಕಾಣಿಸಿಕೊಳ್ಳಲಿದ್ದಾರೆ.
ಟಿವಿ9 ಡಿಜಿಟಲ್ ಜತೆ ಮಾತನಾಡಿದ ಲಾವಣ್ಯ ಅವರು ತಮ್ಮ ಪಾತ್ರದ ಬಗ್ಗೆ ಹೇಳಿಕೊಂಡಿದ್ದು ಹೀಗೆ…
ವರ್ಷದ ಹಿಂದೆಯೇ ಈ ಧಾರಾವಾಹಿಯ ತಯಾರಿ ನಡೆದಿತ್ತು. ದಾಸ ಪುರಂದರರಾಗಿ ರಂಗಭೂಮಿ ಕಲಾವಿದ, ನಟ ದೀಪಕ್ ಸುಬ್ರಹ್ಮಣ್ಯ ಕಾಣಿಸಿಕೊಂಡಿದ್ದಾರೆ. ದಾಸ ಪುರಂದರ ಧಾರಾವಾಹಿಯನ್ನು ಹಂಪಿ, ಮೈಸೂರಿನ ಪಾಂಡವಪುರದಲ್ಲಿ ಶೂಟಿಂಗ್ ಮಾಡಲಾಗಿದೆ. ಅಲ್ಲದೆ ಬೆಂಗಳೂರಿನಲ್ಲಿ ಸೆಟ್ ಹಾಕಿ ಚಿತ್ರೀಕರಿಸಲಾಗಿದೆ. ಸದ್ಯ ಪದ್ಮಾ ಪಾತ್ರದ ಮದುವೆಯ ಮುಂಚಿನ ದಿನಗಳ ಅಂದರೆ ಆಕೆ 14 ವರ್ಷದ ವಯಸ್ಸಿನ ಹುಡುಗಿಯಾಗಿದ್ದಾಗಿನ ದಿನಗಳ ಶೂಟಿಂಗ್ ನಡೆಯುತ್ತಿದೆ. ಇದೇ ಫೆ.28ರಿಂದ ಅಂದರೆ ನಾಳೆಯಿಂದ ಜನರ ಎದುರು ಬರಲು ನಾವೂ ಕಾತರರಾಗಿದ್ದೇವೆ.
ದಾಸ ಪುರಂದರ ಧಾರಾವಾಹಿಯಲ್ಲಿ ನಾನು ಪದ್ಮಾ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಒಟ್ಟು ಮೂರು ಪೀಳಿಗೆಯ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಒಂದು ಪದ್ಮಾ ಎನ್ನುವ ಬಾಲಕಿಯ ಪಾತ್ರ, ಮದುವೆಯಾದ ಹೆಣ್ಣು ಹಾಗೂ ಮಗುವಿನ ತಾಯಿಯಾಗಿಯೂ ಕಾಣಿಸಿಕೊಳ್ಳುತ್ತಿದ್ದೇನೆ. ಹೀಗಾಗಿ ದಾಸ ಪುರಂದರ ನನ್ನ ವೃತ್ತಿ ಜೀವನದ ವಿಭಿನ್ನ ಮತ್ತು ಹೊಸ ಆಯಾಮವನ್ನು ನೀಡಿದ ಧಾರಾವಾಹಿಯಾಗಿದೆ. ವಯಸ್ಸಿಗಿಂತ ಕಿರಿಯ ಮತ್ತು ಅನುಭವವೇ ಇಲ್ಲದ ವಯಸ್ಸಿನ ಪಾತ್ರವನ್ನೂ ಮಾಡುತ್ತಿದ್ದೇನೆ. ಹೀಗಾಗಿ ಸವಾಲಿನ ಪಾತ್ರವಾಗಿತ್ತು. ಈ ರೀತಿ ಮೊದಲ ಬಾರಿ ನಟಿಸುತ್ತಿದ್ದೇನೆ.
ಸಾಕಷ್ಟು ವರ್ಷಗಳ ರಂಗಭೂಮಿಯಲ್ಲಿ ನಟಿಸಿ ಅನುಭವವುಳ್ಳ ಕಲಾವಿದರೊಂದಿಗೆ ನಟಿಸುತ್ತಿರುವುದು ಖುಷಿಯ ವಿಚಾರ. ಮೊದಲ ದಿನ ಶೂಟಿಂಗ್ನಲ್ಲಿ ಭಯ ಕಾಡಿತ್ತು. ನಾರ್ಮಲ್ ಸೀರಿಯಲ್ಗಳಿಗಿಂತ ಭಿನ್ನವಾಗಿರುವ ಪಾತ್ರ ಅಲ್ಲದೆ ಪುಟಗಟ್ಟಲೇ ಇರುವ ಡೈಲಾಗ್ಗಳನ್ನು ಹೇಳುವುದು ಕಷ್ಟ ಎನಿಸಿತ್ತು. ಆದರೆ ದಿನಕಳೆದಂತೆ ಪಾತ್ರದ ಬಗ್ಗೆ ಒಂದಷ್ಟು ಒಲವು ಮೂಡಿತ್ತು. ಹೀಗಾಗಿ ಸುಲಭವಾಗಿ ನಟಿಸುತ್ತಿದ್ದೇನೆ. ರಂಗಭೂಮಿ ಕಲಾವಿದ ಅಶೋಕ್ ಅದೇ ರೀತಿ ಅಜ್ಜಮ್ಮ ಖ್ಯಾತಿಯ ಚಂದ್ರಕಲಾ ಅವರೂ ಇದ್ದಾರೆ. ಇಂತಹ ಅನುಭವಸ್ಥ ಕಲಾವಿದರೊಂದಿಗೆ ನಟಿಸುವುದು ಅಷ್ಟು ಸುಲಭವಲ್ಲ. ಆರಂಭದ ದಿನಗಳಲ್ಲಿ ಭಯ ಆವರಿಸಿತ್ತು. ಎಲ್ಲಾ ಕಲಾವಿದರೂ ಪ್ರೋತ್ಸಾಹಿಸುತ್ತಾರೆ. ಹೀಗಾಗಿ ನಟನೆ, ಪಾತ್ರದ ಬಗ್ಗೆ ಹೊಸ ಹೊಸ ವಿಷಯಗಳನ್ನು ಕಲಿಯುತ್ತಿದ್ದೇನೆ. ಹೊಸ ಪಾತ್ರ, ಪೌರಾಣಿಕ ಪಾತ್ರ ಮಾಡಲು ಪ್ರೋತ್ಸಾಹಿಸಿದ್ದು ನಮ್ಮ ಪ್ರೊಡ್ಯೂಸರ್, ಡೈರೆಕ್ಟರ್ ಕಾರ್ತಿಕ್ ಹಾಗೂ ನಂದಿನಿ ಅವರಿಗೆ ಧನ್ಯವಾದ ಹೇಳುತ್ತೇನೆ.
ಪದ್ಮಾ ವೈಯಕ್ತಿಕವಾಗಿ ಒಳ್ಳೆಯ ಹುಡುಗಿ. ವರದನಾಯಕ ಅವರನ್ನು ನೋಡಿದ ಮೇಲೆ ಅವರ ಮೇಲೆ ಮನಸಾಗಿ ಅವರನ್ನು ಪಡೆದುಕೊಳ್ಳಲೇಬೇಕು ಎನ್ನುವ ಹಠಕ್ಕೆ ಬೀಳುತ್ತಾಳೆ. ಅವಳು ಮಾಡುವ ಪ್ರತೀ ಕೆಲಸವೂ ನಾಯಕರಿಗಾಗಿಯೇ ಆಗಿರತ್ತೆ. ಒಟ್ಟಿನಲ್ಲಿ ನಾಯಕರಿಗಾಗಿ ಏನನ್ನು ಬೇಕಾದರೂ ಮಾಡುವ ಹುಡುಗಿ ಪದ್ಮಾ. ನಾಯಕರನ್ನು ಮದುವೆಯಾಗಲು ವರ್ಷಗಟ್ಟಕೆ ಕಾದು ಎರಡನೇ ಹೆಂಡತಿಯಾಗುತ್ತಾಳೆ, ನಂತರ ದಾಸರ ಮಲತಾಯಿಯಾಗುತ್ತಾಳೆ.
ಈ ಪಾತ್ರದ ಮಾಡುತ್ತಿರುವುದಕ್ಕೆ ನನಗೆ ತುಂಬಾ ಖುಷಿ ಇದೆ. ವೃತ್ತಿ ಜೀವನದ ಹೊಸ ಅನುಭವವಾಗಿದೆ. ಧರ್ಮಾಧಾರಿತ ಭಕ್ತಿ ಪ್ರಧಾನ ಧಾರಾವಾಹಿಯಲ್ಲಿ ಖಳನಾಯಕಿ ಪಾತ್ರ ನಿರ್ವಹಿಸುವುದು ಕಷ್ಟ, ಇಂಥ ಧಾರಾವಾಹಿಗಳ ವೀಕ್ಷಕರು ಅಷ್ಟು ಬೇಗ ವಿಲನ್ ಪಾತ್ರವನ್ನು ಒಪ್ಪಿಕೊಳ್ಳುವುದಿಲ್ಲ. ವೀಕ್ಷಕರ ಈ ಮನಸ್ಥಿತಿ ನನ್ನ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ.
Published On - 12:24 pm, Sun, 27 February 22