‘ನಮ್ಮದು ಗೌಪ್ಯ ಮದುವೆ ಅಲ್ಲ’: ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ದೀಪಿಕಾ ದಾಸ್​

ಕೆಲವೇ ದಿನಗಳ ಹಿಂದೆ ನಟಿ ದೀಪಿಕಾ ದಾಸ್​ ಅವರು ಮದುವೆಯ ಫೋಟೋ ಹಂಚಿಕೊಳ್ಳುವ ಮೂಲಕ ಎಲ್ಲರಿಗೂ ಅಚ್ಚರಿ ನೀಡಿದರು. ಗೋವಾದಲ್ಲಿ ದೀಪಕ್​ ಜೊತೆ ಅವರ ಮದುವೆ ನಡೆಯಿತು. ಈಗ ಸ್ನೇಹಿತರು ಮತ್ತು ಆಪ್ತರನ್ನು ಆಹ್ವಾನಿಸಿ ಆರತಕ್ಷತೆ ಸಮಾರಂಭ ಮಾಡಲಾಗಿದೆ. ಈ ವೇಳೆ ಮೊದಲ ಬಾರಿಗೆ ದೀಪಿಕಾ ದಾಸ್​ ಅವರು ಮದುವೆ ಬಗ್ಗೆ ಮಾತನಾಡಿದ್ದಾರೆ.

‘ನಮ್ಮದು ಗೌಪ್ಯ ಮದುವೆ ಅಲ್ಲ’: ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ ದೀಪಿಕಾ ದಾಸ್​
ದೀಪಕ್​, ದೀಪಿಕಾ ದಾಸ್​

Updated on: Mar 10, 2024 | 9:25 PM

ಕಿರುತೆರೆ ನಟಿ ದೀಪಿಕಾ ದಾಸ್​ (Deepika Das) ಅವರು ಸಡನ್​ ಆಗಿ ಮದುವೆ ಆಗಿದ್ದು ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿತ್ತು. ಉದ್ಯಮಿ ದೀಪಕ್​ ಜೊತೆ ಅವರ ವೈವಾಹಿಕ ಜೀವನ ಆರಂಭಿಸಿರುವುದು ಕೆಲವೇ ದಿನಗಳ ಹಿಂದೆ ಗೊತ್ತಾಯಿತು. ಈಗ ಅವರ ಆರತಕ್ಷತೆ (Deepika Das Reception) ಸಮಾರಂಭ ನಡೆದಿದೆ. ಈ ವೇಳೆ ಅವರು ಮಾಧ್ಯಮಗಳ ಎದುರು ಮಾತನಾಡಿದ್ದಾರೆ. ಇದೇ ಮೊದಲ ಬಾರಿಗೆ ತಮ್ಮ ಮದುವೆಯ ಬಗ್ಗೆ ದೀಪಿಕಾ ದಾಸ್​ ಅವರು ಪ್ರತಿಕ್ರಿಯೆ ನೀಡಿದ್ದಾರೆ. ಈ ಮದುವೆ (Deepika Das Marriage) ಯಾವ ರೀತಿ ನಡೆಯಿತು ಎಂಬುದನ್ನು ಅವರು ವಿವರಿಸಿದ್ದಾರೆ. ಅಂದಹಾಗೆ, ಇದು ಸಡನ್​ ಆಗಿ ನಡೆದ ಮದುವೆ ಅಲ್ಲ ಎಂದು ಕೂಡ ದೀಪಿಕಾ ದಾಸ್​ ಅವರು ಸ್ಪಷ್ಟನೆ ನೀಡಿದ್ದಾರೆ.

‘ಇಂದು ನನ್ನ ಆರತಕ್ಷತೆಗೆ ಪ್ರೀತಿಯಿಂದ ಎಲ್ಲರೂ ಬಂದಿದ್ದಕ್ಕೆ ಧನ್ಯವಾದ. ಈ ಮದುವೆ ಗೌಪ್ಯವಾಗಿ ಇರಲಿಲ್ಲ. ಕೆಲವು ತಿಂಗಳಿಂದ ಇದಕ್ಕೆ ತಯಾರಿ ಮಾಡಿದ್ದೆವು. ಸರ್ಪ್ರೈಸಿಂಗ್​ ಆಗಿರಲಿ ಅಂತ ನಾವು ಅಂದುಕೊಂಡೆವು. ಹಾಗಾಗಿ ಪ್ರಚಾರ ಮಾಡಿಲ್ಲ. ಚಿಕ್ಕ ಸಮಾರಂಭದಲ್ಲಿ ನಮ್ಮದು ಡೆಸ್ಟಿನೇಷನ್​ ವೆಡ್ಡಿಂಗ್​ ಆಗಿರಬೇಕು ಎಂಬ ಆಸೆ ನನಗೆ ಇತ್ತು. ಕೇವಲ ಫ್ಯಾಮಿಲಿಯವರ ಎದುರು ನಾನು ಅಂದುಕೊಂಡ ರೀತಿಯಲ್ಲಿ ಮದುವೆ ಆಗಬೇಕು ಎಂಬ ಆಸೆ ನನ್ನದಾಗಿತ್ತು’ ಎಂದು ದೀಪಿಕಾ ದಾಸ್​ ಹೇಳಿದ್ದಾರೆ.

‘ನನ್ನ ಆಸೆಯನ್ನು ನಾನು ದೀಪಕ್​ ಅವರಿಗೆ ಹೇಳಿದೆ. ಇದೆಲ್ಲ ಸಾಧ್ಯನಾ ಅಂತ ಅವರು ಕೇಳಿದರು. ಯಾಕೆಂದರೆ ಅವರದ್ದು ದೊಡ್ಡ ಫ್ಯಾಮಿಲಿ. ಹಾಗಿದ್ದರೂ ಕೂಡ ನನ್ನ ಆಸೆಗೆ ಅವರು ಸಪೋರ್ಟ್​ ಮಾಡಿದರು. ಅದಕ್ಕಾಗಿ ಅವರಿಗೆ ಧನ್ಯವಾದಗಳು ಗೋವಾದಲ್ಲಿ ಮದುವೆ ಎಂದಾಗ ನಾಲ್ಕರಿಂದ ಐದು ತಿಂಗಳಿಂದ ಅವರೇ ಮುಂದಾಳತ್ವ ವಹಿಸಿಕೊಂಡರು. ನಾನು ಕೂಡ ತಿಂಗಳಲ್ಲಿ ಎರಡು ಬಾರಿ ಗೋವಾಗೆ ಹೋಗಿಬಂದು ಎಲ್ಲವನ್ನೂ ತಯಾರಿ ಮಾಡಿಕೊಂಡೆ’ ಎಂದಿದ್ದಾರೆ ದೀಪಿಕಾ ದಾಸ್​.

ಮದುವೆ ಫೋಟೋ ಹಂಚಿಕೊಂಡು ಕಮೆಂಟ್ ಆಯ್ಕೆ ಆಫ್ ಮಾಡಿದ ದೀಪಿಕಾ ದಾಸ್

‘ನಮಗೆ ಮತ್ತು ನಮ್ಮ ಕುಟುಂಬದವರಿಗೆ ಈ ಮದುವೆ ಬಗ್ಗೆ ಯಾವುದೂ ಸೀಕ್ರೆಟ್​ ಆಗಿರಲಿಲ್ಲ. ಸಡನ್​ ಆಗಿ ನಾವು ಮದುವೆ ಆಗಿಲ್ಲ. ಸಾಕಷ್ಟು ಸಮಯ ತೆಗೆದುಕೊಂಡಿದ್ದೇವೆ. ನಾಲ್ಕು-ಐದು ವರ್ಷದಿಂದ ನಾವು ಪರಿಚಯದಲ್ಲಿ ಇದ್ದೆವು. ಮದುವೆಯ ಪ್ಲ್ಯಾನ್​ ಇರಲಿಲ್ಲ. ಆದರೆ ಕಳೆದ ವರ್ಷ ಮದುವೆ ಬಗ್ಗೆ ವಿಚಾರ ಬಂತು. ಒಂದು ವರ್ಷ ಡೇಟ್​ ಮಾಡಿ, ಹೊಂದಾಣಿಕೆ ಬರುತ್ತಾ ಅಂತ ನೋಡಿಕೊಂಡು ನಂತರ ಮದುವೆಯ ನಿರ್ಧಾರ ಮಾಡಿದೆವು’ ಎಂದು ದೀಪಿಕಾ ದಾಸ್​ ಅವರು ಹೇಳಿದ್ದಾರೆ.

ಆರತಕ್ಷತೆಯಲ್ಲಿ ಮಾತನಾಡಿದ ದೀಪಿಕಾ ದಾಸ್​:

‘ನಾಗಿಣಿ’ ಸೀರಿಯಲ್​ ಮೂಲಕ ಫೇಮಸ್​ ಆಗಿದ್ದ ದೀಪಿಕಾ ದಾಸ್​ ಅವರಿಗೆ ನಂತರ ಬಿಗ್​ ಬಾಸ್​ನಲ್ಲಿ ಸ್ಪರ್ಧಿಸುವ ಅವಕಾಶ ಸಿಕ್ಕಿತು. ಆ ಬಳಿಕ ಅವರ ಜನಪ್ರಿಯತೆ ಇನ್ನಷ್ಟು ಹೆಚ್ಚಾಯಿತು. ದೀಪಿಕಾ ದಾಸ್​ ಹಾಗೂ ದೀಪಕ್​ ದಂಪತಿಯ ಆರತಕ್ಷತೆ ಸಮಾರಂಭಕ್ಕೆ ಬಿಗ್​ ಬಾಸ್​ ಮಾಜಿ ಸ್ಪರ್ಧಿಗಳು ಆಗಮಿಸಿ ಅಭಿನಂದನೆ ತಿಳಿಸಿದ್ದಾರೆ. ಸೋಶಿಯಲ್​ ಮೀಡಿಯಾ ಮೂಲಕ ಅಭಿಮಾನಿಗಳು ಕೂಡ ವಿಶ್​ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us