
ಬಿಗ್‌ಬಾಸ್ ಶೋಗೆ (Bigg Boss) ಬರುವ ಸ್ಪರ್ಧಿಗಳದ್ದು ಒಬ್ಬೊಬ್ಬರದ್ದು ಒಂದೊಂದು ಸ್ವಾರ್ಥವಿರುತ್ತದೆ. ಕೆಲವರು ಗೆಲ್ಲಲು ಬರುತ್ತಾರೆ, ಇನ್ನು ಕೆಲವರು ಜನಪ್ರಿಯತೆ ಪಡೆಯಲು ಬರುತ್ತಾರೆ, ಇನ್ನು ಕೆಲವರು ತಮ್ಮ ವೃತ್ತಿಗೆ ಸಹಾಯ ಆಗುತ್ತದೆ ಎಂದು ಬರುತ್ತಾರೆ, ಇನ್ನು ಕೆಲವರು ಹೊರಗಿನ ಪ್ರಪಂಚದಲ್ಲಿ ತಮಗೆ ಅಂಟಿದ ಕಳಂಕವನ್ನು ತೊಡೆದುಕೊಳ್ಳಲು ಬರುತ್ತಾರೆ. ಹೊರಗೆ ಹೇಗೋ ಕಂಡಿದ್ದ ಜನ ಒಳಗೆ ಬಂದ ಬಳಿಕ ನಿಜವಾದ ಮುಖವನ್ನು ಪ್ರದರ್ಶಿಸಿದ್ದೂ ಇದೆ. ಆದರೆ ಯಾರೂ ಸಹ ತಾವು ಶೋಗಿಂತಲೂ ದೊಡ್ಡವರು ಎಂದವರಿಲ್ಲ, ಸ್ವತಃ ಸುದೀಪ್ ಸಹ ಆ ಅಹಂಕಾರ ಪ್ರದರ್ಶಿಸಿದ್ದಿಲ್ಲ.
ಆದರೆ ಧ್ರುವಂತ್, ಮಾತನಾಡುವ ಭರದಲ್ಲಿ, ‘ನನಗೆ ಈ ಶೋ ಬೇಡ, ನನಗೆ ಪ್ರತ್ಯೇಕ ಐಡೆಂಟಿಟಿ ಇದೆ, ಈ ಶೋಗೆ ಬರುವ ಮುಂಚೆಯೇ ನನ್ನ ಐಡೆಂಟಿಟಿ ಇತ್ತು, ನನಗೆ ಫೇಮ್ ಇತ್ತು, ಶೋ ಇಂದ ನನಗೆ ಐಡೆಂಟಿಟಿ ಬೇಕಿಲ್ಲ ಇನ್ನಿತರೆ ಮಾತುಗಳನ್ನು ಆಡಿದ್ದರು. ಅದಕ್ಕೆ ಕಾರಣವೂ ಇತ್ತು. ಮನೆಗೆ ಬಂದ ವೈಲ್ಡ್ ಕಾರ್ಡ್ ಸ್ಪರ್ಧಿಗಳು, ಧ್ರುವಂತ್ ಅವರನ್ನು ಮುಖವಾಡ ಹಾಕಿದ್ದೀರಿ, ನಕಲಿ ವ್ಯಕ್ತಿತ್ವ ತೋರಿಸುತ್ತಿದ್ದೀರಿ ಎಂದಿದ್ದರು. ಇದು ಧ್ರುವಂತ್ಗೆ ಬೇಸರ ತರಿಸಿತ್ತು, ಬಿಗ್‌ಬಾಸ್ ನವರು ನನ್ನನ್ನು ಕೆಟ್ಟದಾಗಿ ತೋರಿಸುತ್ತಿದ್ದಾರೆ ಎಂಬ ಅನುಮಾನ ಅವರಲ್ಲಿ ಸುಳಿದಾಡಿತ್ತು. ಇದರಿಂದ ಬೇಸರಗೊಂಡಿದ್ದ ಧ್ರುವಂತ್ ಮೇಲಿನಂತೆ ಮಾತನಾಡಿದ್ದರು.
ವೀಕೆಂಡ್ ಎಪಿಸೋಡ್ನಲ್ಲಿ ಧ್ರುವಂತ್ ಅವರ ಈ ವಿಡಿಯೋ ಅನ್ನು ಪ್ರದರ್ಶಿಸಿದ ಸುದೀಪ್, ಶಾಂತವಾಗಿಯೇ ಧ್ರುವಂತ್ ಅವರಿಗೆ ವಿಷಯವನ್ನು ಎರಡು ರೀತಿಯಾಗಿ ಅರ್ಥ ಮಾಡಿಸಿದರು. ಶೋನ ಉದ್ದೇಶವನ್ನು ಮತ್ತು ಅದರ ಬೃಹತ್ತತೆಯನ್ನು ಅರ್ಥ ಮಾಡಿಸಿದರು. ಬಳಿಕ ಯಾರಿಂದ ಅವರಿಗೆ ನಕಲಿ ಅಥವಾ ಮುಖವಾಡದ ಮನುಷ್ಯ ಎಂದು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಕರೆದರೊ, ಅವರೇ ಅದನ್ನು ನಂಬಿಲ್ಲ ಎಂಬುದನ್ನು ಅರ್ಥ ಮಾಡಿಸಿದರು.
ಇದನ್ನೂ ಓದಿ:ಎಲ್ಲಾ ಸ್ಪರ್ಧಿಗಳು ಹೊರಕ್ಕೆ: ಖಾಲಿ ಖಾಲಿಯಾಗಿರುವ ಬಿಗ್‌ಬಾಸ್ ಮನೆ ಹೇಗಿದೆ ನೋಡಿ
‘ನೀವು ಈ ಶೋಗಿಂತಲೂ ದೊಡ್ಡವರಾಗಲಿ ಎಂಬುದೇ ಈ ಶೋನ ಬಯಕೆ ಮತ್ತು ಉದ್ದೇಶ’ ಎಂದರು ಸುದೀಪ್. ಪ್ರತಿದಿನ ಕೋಟ್ಯಂತರ ಜನ ಈ ಶೋ ಅನ್ನು ನಿತ್ಯಕಾಯಕದಂತೆ ನೋಡುತ್ತಿದ್ದಾರೆ ಎಂದರೆ ಜನರಿಗೆ ಈ ಶೋ ಏನೋ ನೀಡಿದೆ ಎಂದೇ ಅರ್ಥ, ಆದರೆ ನಿಜಕ್ಕೂ ಈ ಶೋ, ಜನರಿಗೆ ಕೊಟ್ಟಿದ್ದಕ್ಕಿಂತಲೂ ಸ್ಪರ್ಧಿಗಳಿಗೆ ಕೊಟ್ಟಿದ್ದೇ ಹೆಚ್ಚು’ ಎಂದರು. ಆ ಮೂಲಕ ಶೋ ಇಂದಾಗಿ ಸ್ಪರ್ಧಿಗಳಿಗೆ ಒಳಿತಾಗಿದೆಯೇ ಹೊರತು, ಸ್ಪರ್ಧಿಗಳಿಂದ ಶೋ ಅಲ್ಲ’ ಎಂಬುದನ್ನು ಹೇಳಿದರು.
ವೈಲ್ಡ್ ಕಾರ್ಡ್ ಸ್ಪರ್ಧಿಗಳು ಧ್ರುವಂತ್ ಬಗ್ಗೆ ಆಡಿದ ಮಾತುಗಳಿಗೆ ರಕ್ಷಿತಾ ಮತ್ತು ಮಲ್ಲಮ್ಮನವರೇ ಆಕ್ಷೇಪಣೆ ಮಾಡಿದ ವಿಡಿಯೋವನ್ನು ಸಹ ತೋರಿಸಿದ ಸುದೀಪ್, ಅವರು ಹೇಳಿದ ಮಾತನ್ನು ಇವರೇ ಒಪ್ಪುತ್ತಿಲ್ಲ ಆದರೆ ಅದನ್ನು ಗಂಭೀರವಾಗಿ ಪರಿಗಣಿಸುವ ಮೂಲಕ ನೀವೇ ಒಪ್ಪಿಕೊಳ್ಳುತ್ತಿದ್ದೀರಿ. ಅಲ್ಲದೆ ನಿಮ್ಮನ್ನು ನೆಗೆಟಿವ್ ಆಗಿ ಅಥವಾ ಪಾಸಿಟಿವ್ ಆಗಿ ತೋರಿಸುವ ಯಾವ ಕಾರ್ಯವನ್ನು ಬಿಗ್‌ಬಾಸ್ ಮಾಡುವುದಿಲ್ಲ ಬದಲಾಗಿ ನೀವು ಹೇಗಿದ್ದೀರೋ ಹಾಗೆ ತೋರಿಸುತ್ತದೆ ಅಷ್ಟೆ ಎಂದರು. ಕೊನೆಯಲ್ಲಿ, ‘ಈ ಶೋಗೆ ಬರಲು ನೀವೆಷ್ಟು ಕಷ್ಟ ಪಟ್ಟಿದ್ದೀರಿ ಎಂಬುದನ್ನು ನಾವಿನ್ನೂ ತೋರಿಸಿಲ್ಲ’ ಎಂದು ಪರೋಕ್ಷವಾಗಿ, ನೀವೇ ಬಯಸಿ ಈ ಶೋಗೆ ಬಂದಿದ್ದು ಎಂಬುದನ್ನು ನೆನಪು ಮಾಡಿಸಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ