‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮವನ್ನು ಅನೇಕ ವೀಕ್ಷಕರು ಮೆಚ್ಚಿಕೊಂಡಿದ್ದಾರೆ. ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ನಡೆಸಿಕೊಡುತ್ತಿದ್ದ ಈ ಕಾರ್ಯಕ್ರಮದ ಮುಂದುವರಿದ ಭಾಗವಾಗಿ ಈ ಶೋ ಆರಂಭವಾಗಿದೆ. ಸಾಕಷ್ಟು ಗಾಯಕರಿಗೆ ಈ ಶೋ ವೇದಿಕೆ ಕಲ್ಪಿಸಿಕೊಡುತ್ತಿದೆ. ಅದರಲ್ಲೂ ವಿಶೇಷವಾಗಿ ಗಮನ ಸೆಳೆದಿದ್ದು ಕಲಬುರಗಿ ಜಿಲ್ಲೆಯ ಸೂರ್ಯಕಾಂತ್ ಅವರು.
ಸೂರ್ಯಕಾಂತ್ ವೃತ್ತಿಯಲ್ಲಿ ಗಾಯಕರು. ಅವರು ತೊದಲು ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಈ ಕಾರಣಕ್ಕೆ ಅವರ ಬಾಯಿಯಿಂದ ಶಬ್ದಗಳನ್ನು ಹೊರ ಹಾಕುವಾಗ ಕಷ್ಟಪಡಬೇಕಾಗುತ್ತದೆ. ಆದರೆ, ಹಾಡನ್ನು ಮಾತ್ರ ಅವರು ಅದ್ಭುತವಾಗಿ ಹಾಡುತ್ತಾರೆ. ಕಳೆದ ವಾರ ‘ಎದೆ ತುಂಬಿ ಹಾಡುವೆನು’ ವೇದಿಕೆ ಮೇಲೆ ರವೀಂದ್ರ ಹಂದಿಗನೂರು ಅವರು ಸಂಗೀತ ಸಂಯೋಜನೆ ಮಾಡಿದ ‘ಮೂಕನಾಗಬೇಕು ಜಗದೊಳು..’ ತತ್ವಪದವನ್ನು ಸೂರ್ಯಕಾಂತ್ ಹಾಡಿದ್ದರು. ಹಾಡು ಹೇಳಿದ ರೀತಿಗೆ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಹುಟ್ಟಿಕೊಂಡಿದೆ.
ಈ ಕುರಿತಂತೆ ಕಲರ್ಸ್ ಕನ್ನಡ ವಾಹಿನಿ ವೀಕ್ಷಕರ ಬಳಿ ಹೋಗಿ ಅಭಿಪ್ರಾಯ ಕೇಳಿದೆ. ಈ ವೇಳೆ ಅನೇಕರು ಸೂರ್ಯಕಾಂತ್ ಅವರ ಹಾಡು ಹೇಳಿದ ರೀತಿಯನ್ನು ಮನಃಪೂರ್ವಕವಾಗಿ ಹೊಗಳಿದ್ದಾರೆ.
ಇನ್ನು, ವೇದಿಕೆ ಮೇಲೆ ಸೂರ್ಯಕಾಂತ್ ತಮ್ಮ ಕಷ್ಟಗಳನ್ನು ಹೇಳಿಕೊಂಡಿದ್ದಾರೆ. ‘ನಾನು ಇಲ್ಲಿಗೆ ಬರೋಕೆ ಕಾರಣ ನನ್ನ ತಾಯಿ. ಅವರು ಕೂಲಿನಾಲಿ ಮಾಡಿ ನನ್ನನ್ನು ಸಾಕಿದ್ದಾರೆ. ನನ್ನ ತಾಯಿ ಎಂದೆಂದಿಗೂ ಹೃದಯದಲ್ಲೇ ಇದ್ದಾಳೆ. ಅವಳೇ ನನಗೆ ಮೆಡಲ್’ ಎನ್ನುತ್ತಲೇ ಸೂರ್ಯಕಾಂತ್ ಕಣ್ಣೀರು ಹಾಕಿದರು.
ಕಳೆದ ಎಪಿಸೋಡ್ನಲ್ಲಿ ಸೂರ್ಯಕಾಂತ್ ಹಾಡಿದ ಹಾಡು ಕೇಳಿ ರಾಜೇಶ್ ಕೃಷ್ಣನ್ ಭಾವುಕರಾದರು. ‘ಸೂರ್ಯಕಾಂತ್ ಗೆಲ್ಲೋಕೂ ಮುಂಚೆನೇ ಗೆದ್ದಾಯ್ತು. ಸೂರ್ಯಕಾಂತ್ ಪ್ರತಿಭೆ ಎದೆ ತುಂಬಿ ಹಾಡುವೆನು ಅಷ್ಟೇ ಅಲ್ಲಾ ಇಡೀ ಕರ್ನಾಟಕಕ್ಕೇ ಹೆಮ್ಮೆ’ ಎಂದಿದ್ದರು.
ಎಸ್.ಪಿ ಬಾಲಸುಬ್ರಹ್ಮಣ್ಯಂ ನಡೆಸಿಕೊಡುತ್ತಿದ್ದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದ ಎರಡನೇ ಇನ್ನಿಂಗ್ಸ್ ಇದಾಗಿದೆ. ಈ ವೇದಿಕೆ ಸಾಕಷ್ಟು ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ. ಇದರ ಜತೆಗೆ ಎಸ್ಪಿಬಿ ಅವರನ್ನು ನೆನಪಿಸಿಕೊಳ್ಳುವ ಕೆಲಸ ಕೂಡ ಆಗುತ್ತಿದೆ. ಜಡ್ಜ್ಗಳು ಎಸ್ಪಿಬಿ ಅವರನ್ನು ನೆನೆನೆನೆದು ಕಣ್ಣೀರು ಹಾಕುತ್ತಿದ್ದಾರೆ.
ಇದನ್ನೂ ಓದಿ: ಸಮಸ್ಯೆಯನ್ನು ಮೆಟ್ಟಿ ನಿಂತ ಪ್ರತಿಭೆ; ‘ಎದೆ ತುಂಬಿ ಹಾಡುವೆನು’ ವೇದಿಕೆ ಮೇಲೆ ಎಲ್ಲರ ಮನಗೆದ್ದ ಸೂರ್ಯಕಾಂತ್
Published On - 2:39 pm, Fri, 27 August 21