ಸೂರ್ಯಕಾಂತ್ ಅವರು ಕಲಬುರಗಿ ಜಿಲ್ಲೆಯ ಗಡಿಲಿಂಗದಹಳ್ಳಿಯವರು. ವೃತ್ತಿಯಲ್ಲಿ ಗಾಯಕ. ‘ಎದೆ ತುಂಬಿ ಹಾಡುವೆನು’ ವೇದಿಕೆ ಮೇಲೆ ರವೀಂದ್ರ ಹಂದಿಗನೂರು ಅವರು ಸಂಗೀತ ಸಂಯೋಜನೆ ಮಾಡಿದ ‘ಮೂಕನಾಗಬೇಕು ಜಗದೊಳು..’ ತತ್ವಪದವನ್ನು ಸೂರ್ಯಕಾಂತ್ ಹಾಡಿದ್ದಾರೆ. ಸೂರ್ಯಕಾಂತ್ ಸಾಮಾನ್ಯರಂತೆ ಇದ್ದಿದ್ದರೆ ಬಹುಶಃ ವೀಕ್ಷಕರಿಗೆ ಇಷ್ಟರ ಮಟ್ಟಿಗೆ ಹತ್ತಿರವಾಗುತ್ತಿರಲಿಲ್ಲವೇನೋ. ಆದರೆ, ಅವರು ಮಾತನಾಡುವಾಗ ತೊದಲುತ್ತಾರೆ. ಈ ಸಮಸ್ಯೆ ಮಧ್ಯೆಯೂ ಅವರಲ್ಲಿ ಹಾಡಬೇಕು ಎನ್ನುವ ಛಲ ಅದಮ್ಯವಾಗಿದೆ. ಹೀಗಾಗಿ, ಅದು ಸಮಸ್ಯೆ ಎಂದೇ ಅವರಿಗೆ ಅನಿಸಿಲ್ಲ. ಈ ಉಗ್ಗು ಸಮಸ್ಯೆಯನ್ನು ಅದಮಿಟ್ಟು ಸೂರ್ಯಕಾಂತ್ ಅದ್ಭುತವಾಗಿ ಹಾಡಿದ್ದಾರೆ.
‘ರವೀಂದ್ರ ಹಂದಿಗನೂರು ಅವರು ಅದ್ಭುತ ಗಾಯಕರು, ಸಂಗೀತ ಸಂಯೋಜಕರು. ಅವರ ಹಾಡನ್ನು ಹಾಡಬೇಕು ಎಂದರೆ ಒಂದು ವಾರ ವಾರ್ಮ್ಅಪ್ ಬೇಕು. ನೀವು ಹಾಡಿ ಕೇಳೋಣ’ ಎಂದರು ರಾಜೇಶ್ ಕೃಷ್ಣನ್. ‘ಮೂಕನಾಗಬೇಕು ಜಗದೊಳು..’ ಎಂದು ಅದ್ಭುತವಾಗಿ ಹಾಡುವ ಮೂಲಕ ಸೂರ್ಯಕಾಂತ್ ಎಲ್ಲರ ಗಮನಸೆಳೆದರು.
ಸೂರ್ಯಕಾಂತ್ ಹಾಡಿದ ಹಾಡು ಕೇಳಿ ರಾಜೇಶ್ ಕೃಷ್ಣನ್ ಭಾವುಕರಾದರು. ‘ಸೂರ್ಯಕಾಂತ್ ಗೆಲ್ಲೋಕೂ ಮುಂಚೆನೇ ಗೆದ್ದಾಯ್ತು. ಸೂರ್ಯಕಾಂತ್ ಪ್ರತಿಭೆ ಎದೆ ತುಂಬಿ ಹಾಡುವೆನು ಅಷ್ಟೇ ಅಲ್ಲಾ ಇಡೀ ಕರ್ನಾಟಕಕ್ಕೇ ಹೆಮ್ಮೆ’ ಎನ್ನುವ ಕ್ಯಾಪ್ಶನ್ ಅಡಿಯಲ್ಲಿ ಈ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ.
ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ಅಭಿಮಾನಿ ಬಳಗದ ಜತೆಗೆ ದೊಡ್ಡ ಶಿಷ್ಯವರ್ಗವನ್ನೂ ಹೊಂದಿದ್ದಾರೆ. ನೇರವಾಗಿ ಹಾಗೂ ಪರೋಕ್ಷವಾಗಿ ಸಾಕಷ್ಟು ಮಂದಿ ಅವರಿಂದ ಹಲವು ವಿಚಾರಗಳನ್ನು ಕಲಿತಿದ್ದಾರೆ. ಈ ಕಾರಣಕ್ಕೆ ಎಸ್ಪಿಬಿ ಎಂದರೆ ಎಲ್ಲರಿಗೂ ಅಪಾರ ಗೌರವ. ಅವರು ನಡೆಸಿಕೊಡುತ್ತಿದ್ದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದ ಎರಡನೇ ಇನ್ನಿಂಗ್ಸ್ ಮತ್ತೆ ಆರಂಭಿಸಲಾಗಿದೆ. ಈ ವೇದಿಕೆ ಸಾಕಷ್ಟು ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ. ಇದರ ಜತೆಗೆ ಎಸ್ಪಿಬಿ ಅವರನ್ನು ನೆನಪಿಸಿಕೊಳ್ಳುವ ಕೆಲಸ ಕೂಡ ಆಗುತ್ತಿದೆ. ಜಡ್ಜ್ಗಳು ಎಸ್ಪಿಬಿ ಅವರನ್ನು ನೆನೆನೆನೆದು ಕಣ್ಣೀರು ಹಾಕುತ್ತಿದ್ದಾರೆ.
ಇದನ್ನೂ ಓದಿ: ಎಸ್.ಪಿ. ಬಾಲಸುಬ್ರಹ್ಮಣ್ಯಂ ನೆನೆದು ಹಾಡುವಾಗಲೇ ಕಣ್ಣೀರಿಟ್ಟ ರಾಜೇಶ್ ಕೃಷ್ಣನ್
‘ಎದೆ ತುಂಬಿ ಹಾಡುವೆನು’ ವೇದಿಕೆ ಮೇಲೆ ಎಸ್ಪಿಬಿ ಧ್ವನಿ; ಭಾವುಕರಾದ ಪುತ್ರ ಚರಣ್