‘ಸತ್ಯ’ ಸೀರಿಯಲ್ ಮೂಲಕ ಭಾರಿ ಜನಪ್ರಿಯತೆ ಗಳಿಸಿದ ನಟಿ ಗೌತಮಿ ಜಾದವ್ ಅವರು ಬಿಗ್ ಬಾಸ್ ಮನೆಯಲ್ಲಿ ತಮ್ಮ ಪಾಸಿಟಿವ್ ಮನಸ್ಥಿತಿಯಿಂದ ಗಮನ ಸೆಳೆದಿದ್ದಾರೆ. ಆದರೆ ವಿವಾದಗಳೇ ತುಂಬಿರುವ ದೊಡ್ಮನೆಯಲ್ಲಿ ಪಾಸಿಟಿವಿಟಿ ಕಾಯ್ದುಕೊಳ್ಳುವುದು ಕಷ್ಟದ ಕೆಲಸ. ಕೆಲವೊಮ್ಮೆ ಕೂಗಾಡಬೇಕಾಗುತ್ತದೆ. ಕಿರಿಕಿರಿ ಆದಾಗ ನಗು ಬದಿಗಿಟ್ಟು ಜಗಳ ಮಾಡಲೇಬೇಕಾಗುತ್ತದೆ. 31ನೇ ದಿನ ಬೆಳ್ಳಂಬೆಳಗ್ಗೆಯೇ ಗೌತಮಿ ಅವರಿಗೆ ಕೋಪ ಬಂದಿದೆ. ಅದಕ್ಕೆ ಕಾರಣ ಆಗಿರುವುದು ಧನರಾಜ್. ಹೌದು, ಧನರಾಜ್ ಅವರ ಒಂದು ವರ್ತನೆಯನ್ನು ಗೌತಮಿ ಖಂಡಿಸಿದ್ದಾರೆ.
ಬಿಗ್ ಬಾಸ್ ಮನೆಯ ನಿಯಮದ ಪ್ರಕಾರ, ಬೆಳಗ್ಗೆ ಹಾಡು ಪ್ಲೇ ಆದ ತಕ್ಷಣ ಎಲ್ಲ ಸ್ಪರ್ಧಿಗಳು ಏಳಬೇಕು. ಸಾಮಾನ್ಯವಾಗಿ ಈ ರೀತಿ ಹಾಡು ಹಾಕಿದಾಗ ಎಲ್ಲರೂ ಎದ್ದು ಡ್ಯಾನ್ಸ್ ಮಾಡುತ್ತಾರೆ. ಆದರೆ 31ನೇ ದಿನ ಹಾಡು ಪ್ಲೇ ಆದಾಗ ಗೌತಮಿ ಅವರು ಇನ್ನೂ ಬೆಡ್ ಬಿಟ್ಟು ಎದ್ದಿರಲಿಲ್ಲ. ಇನ್ನೇನು ಅವರು ಏಳಬೇಕು ಎಂಬಷ್ಟರಲ್ಲಿ ಧನರಾಜ್ ಅವರು ದಿಂಬಿನಿಂದ ಗೌತಮಿಗೆ ಹೊಡೆದರು. ಅದು ಗೌತಮಿ ಅವರಿಗೆ ಕಿರಿಕಿರಿ ಉಂಟು ಮಾಡಿತು.
‘ನನಗೆ ಇದು ಇಷ್ಟ ಆಗಲಿಲ್ಲ. ಮೊದಲ ದಿನ ಅಂತ ಸುಮ್ಮನಿದ್ದೇನೆ. ದಯವಿಟ್ಟು ನನ್ನನ್ನು ಈ ರೀತಿ ಎಬ್ಬಿಸಬೇಡಿ. ಸಾಂಗ್ ಬಂದಾಗ ಏಳಬೇಕು ಎಂಬುದು ನನಗೆ ಕೂಡ ಗೊತ್ತು’ ಎಂದು ಗೌತಮಿ ಅವರು ಗರಂ ಆಗಿ ಹೇಳಿದ್ದಾರೆ. ಯಾವಾಗಲೂ ಪಾಸಿಟಿವಿಟಿ ಜಪ ಮಾಡುವ ಗೌತಮಿ ಅವರು ಇಷ್ಟು ಖಡಕ್ ಆಗಿ ವಾರ್ನಿಂಗ್ ನೀಡಿದ್ದು ಕಂಡು ಧನರಾಜ್ ಅವರಿಗೆ ಅಚ್ಚರಿ ಆಯಿತು. ಕೆಲವು ನಿಮಿಷಗಳ ಕಾಲ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಈ ಘಟನೆ ಬಳಿಕ ಧನರಾಜ್ ಮತ್ತು ಗೌತಮಿ ನಡುವೆ ಮೊದಲಿನ ಆತ್ಮೀಯತೆ ಉಳಿಯದೇ ಇರಬಹುದು.
ಇದನ್ನೂ ಓದಿ: ಪಾಳುಬಿದ್ದ ಬಿಗ್ ಬಾಸ್ ಮನೆಗೆ ಮಾಸ್ಟರ್ ಆನಂದ್ ಎಂಟ್ರಿ
ಈ ವಾರ ಹನುಮಂತ ಅವರು ಕ್ಯಾಪ್ಟನ್ ಆಗಿದ್ದಾರೆ. ಅವರು ತಮ್ಮ ಆಟದ ಅಸಲಿ ವರಸೆಯನ್ನು ತೋರಿಸುತ್ತಿದ್ದಾರೆ. ಅವರ ಬುದ್ಧಿವಂತಿಕೆಯನ್ನು ನೋಡಿ ಎಲ್ಲರಿಗೂ ಅಚ್ಚರಿ ಆಗಿದೆ. ಬಿಗ್ ಬಾಸ್ ಆಟವನ್ನು ಅವರು ನಿಧಾನಕ್ಕೆ ಅರ್ಥ ಮಾಡಿಕೊಳ್ಳುತ್ತಿದ್ದಾರೆ. ಎಲ್ಲರನ್ನು ಅವರು ನಗಿಸುತ್ತಿದ್ದಾರೆ. ಹಾಗಂತ ಅವರು ಅಸಲಿ ಆಟವನ್ನು ಮರೆತಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.