
ಗಿಲ್ಲಿ ನಟ (Gilli Nata) ಅವರು ಬಿಗ್ ಬಾಸ್ಗೆ ಬಂದ ದಿನದಿಂದಲೂ ಒಳ್ಳೆಯ ರೀತಿಯಲ್ಲಿ ಆಟ ಆಡುತ್ತಿದ್ದಾರೆ. ಹಾಸ್ಯ ಮಾಡುತ್ತಾ, ಮನೆಯವರಿಗೆ ಹಾಗೂ ವೀಕ್ಷಕರಿಗೆ ಮನರಂಜನೆ ನೀಡುತ್ತಾ ಇದ್ದಾರೆ. ಅವರಿಗೆ ಮೂರನೇ ವಾರದಲ್ಲಿ ಕಿಚ್ಚನ ಚಪ್ಪಾಳೆ ಸಿಕ್ಕಿತ್ತು. ಬೇಸರದ ಸಂಗತಿ ಎಂದರೆ ಗಿಲ್ಲಿ ಅವರು ಅಲ್ಲಿಯೇ ಸ್ಟ್ರಕ್ ಆಗಿ ಹೋಗಿದ್ದಾರೆ. ‘ನನಗೆ ಕಿಚ್ಚನ ಚಪ್ಪಾಳೆ ಸಿಕ್ಕಿತ್ತು’ ಎಂಬುದನ್ನು ಈಗಲೂ ನೆನಪಿಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ಅಶ್ವಿನಿ ಗೌಡ ಅವರು ಪ್ರಶ್ನೆ ಮಾಡಿದ್ದಾರೆ.
ಮೂರನೇ ವಾರದಲ್ಲಿ ಅಶ್ವಿನಿ, ಜಾನ್ವಿ ಮೊದಲಾದವರು ರಕ್ಷಿತಾ ಶೆಟ್ಟಿ ವಿರುದ್ಧ ಟೊಂಕ ಕಟ್ಟಿ ನಿಂತಿದ್ದರು. ಮಾಡದ ತಪ್ಪಿಗೆ ರಕ್ಷಿತಾ ಹಿಂಸೆ ಅನುಭವಿಸಬೇಕಾಯಿತು. ಈ ವಿಚಾರದಲ್ಲಿ ರಕ್ಷಿತಾ ಪರ ನಿಂತಿದ್ದು ಗಿಲ್ಲಿ ಮಾತ್ರ. ಈ ವಿಚಾರಕ್ಕೆ ಗಿಲ್ಲಿಗೆ ಕಿಚ್ಚನ ಚಪ್ಪಾಳೆ ಸಿಕ್ಕಿತ್ತು. ಗಿಲ್ಲಿ ಈಗಲೂ ಅದನ್ನೇ ಹೇಳಿಕೊಂಡು ಓಡಾಡುತ್ತಿದ್ದಾರೆ. ‘ನೀವು ಮಾಡಿದ ಸಾಧನೆ ಏನು’ ಎಂದು ಯಾರಾದರೂ ಪ್ರಶ್ನೆ ಕೇಳಿದರೆ ಅವರ ಕೈ ನೇರವಾಗಿ ಕಿಚ್ಚನ ಚಪ್ಪಾಳೆ ಪಡೆದ ಬೋರ್ಡ್ನತ್ತ ಹೋಗುತ್ತದೆ. ಅದಾದ ಬಳಿಕ ಮಾಡಿದ್ದೇನು ಎಂಬ ಪ್ರಶ್ನೆಗೆ ಅವರ ಬಳಿ ಉತ್ತರವಿಲ್ಲ.
ಗಿಲ್ಲಿ ಸಾಕಷ್ಟು ಮನರಂಜನೆ ನೀಡುತ್ತಾರೆ ನಿಜ. ಆದರೆ, ಟಾಸ್ಕ್ ವಿಚಾರದಲ್ಲಿ ಗಿಲ್ಲಿ ಗಂಭೀರವಾಗಿ ನಡೆದುಕೊಂಡಿದ್ದೇ ಇಲ್ಲ. ಇದುವೇ ಅವರಿಗೆ ಮುಳುವಾಗುವ ಸಾಧ್ಯತೆ ಇದೆ. ಇಡೀ ದಿನ ಮಾತು ಮಾತು ಎನ್ನುವ ಗಿಲ್ಲಿ, ಟಾಸ್ಕ್ ಸಂದರ್ಭದಲ್ಲೂ ಏನಾದರೂ ಒಂದು ಕಿತಾಪತಿ ಮಾಡಲು ಹೋಗುತ್ತಾರೆ. ಈ ವಿಚಾರ ಅನೇಕರಿಗೆ ಬೇಸರ ಮೂಡಿಸಿದೆ. ಅಶ್ವಿನಿ ಗೌಡ ಇದೇ ವಿಚಾರದಲ್ಲಿ ಗಿಲ್ಲಿಗೆ ಕ್ಲಾಸ್ ತೆಗೆದುಕೊಂಡಿದ್ದರು. ಸುದೀಪ್ ಅವರಿಂದಲೇ ಗಿಲ್ಲಿಗೆ ಈ ವಿಚಾರದಲ್ಲಿ ಪಾಠ ಹೇಳಿಸಬೇಕು ಎಂಬುದು ಅನೇಕರ ಅಭಿಪ್ರಾಯ.
ಇದನ್ನೂ ಓದಿ: ‘ಇನ್ಮುಂದೆ ನಿನ್ನ ಬಳಿ ಮಾತನಾಡಲ್ಲ’; ಕಾವ್ಯಾ ಎದುರು ಶಪಥ ಮಾಡಿದ ಗಿಲ್ಲಿ ನಟ
‘ರಘು ಅವರು ಮೂರನೇ ವಾರಕ್ಕೆ ಬಂದು ಕ್ಯಾಪ್ಟನ್ ಆದರು, ಪ್ರಿನ್ಸಿಪಲ್ ಆದರು. ನೀನೇನು ಮಾಡಿದ್ದೀಯಾ ಎಂಬುದನ್ನು ಹೇಳು’ ಎಂದು ಅಶ್ವಿನಿ ಪ್ರಶ್ನೆ ಮಾಡಿದರು. ಆಗ ಗಿಲ್ಲಿ ಅವರು, ಕಿಚ್ಚನ ಚಪ್ಪಾಳೆ ಬೋರ್ಡ್ ತೋರಿಸಿದರು. ‘ಅದನ್ನು ಬಿಟ್ಟು ಇನ್ನೇನು ಮಾಡಿದ್ದೀಯಾ ಹೇಳು? ಕ್ಯಾಪ್ಟನ್ಸಿ ರೇಸ್ಗೆ ಒಮ್ಮೆಯಾದರೂ ಇದ್ಯಾ? ಕ್ಯಾಪ್ಟನ್ ಕೈ ಹಿಡಿದುಕೊಂಡು ವೈಸ್ ಕ್ಯಾಪ್ಟನ್ ಆಗೋದು’ ಎಂದರು ಅಶ್ವಿನಿ. ಈ ವಿಚಾರ ಅನೇಕರಿಗೆ ಹೌದು ಎನಿಸಿದೆ. ‘ನಾನು ವೈಸ್ ಕ್ಯಾಪ್ಟನ್’ ಎಂದು ಹೇಳೋದು ಕ್ಯಾಪ್ಟನ್ಗೆ ಬಕೆಟ್ ಹಿಡಿದು ಓಡಾಡುವಂತೆ ಭಾಸವಾಗುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:02 am, Fri, 14 November 25