
ತಮಗೆ ಎಲ್ಲರೂ ಗೌರವ ಕೊಡಬೇಕು ಎಂಬುದು ಅಶ್ವಿನಿ ಗೌಡ (Ashwini Gowda) ಅವರ ಹಂಬಲ. ಆದರೆ ಎಲ್ಲ ಸಂದರ್ಭದಲ್ಲೂ ಅದು ಸಾಧ್ಯವಾಗುತ್ತಿಲ್ಲ. ಬಿಗ್ ಬಾಸ್ (Bigg Boss Kannada Season 12) ಮನೆಯಲ್ಲಿ ಜಗಳ ನಡೆಯುವಾಗ ಕೆಲವರು ಅಶ್ವಿನಿ ಗೌಡಗೆ ಏಕವಚನದಲ್ಲೇ ಮಾತನಾಡಿದ್ದಾರೆ. ಅದರಿಂದಾಗಿ ಅವರಿಗೆ ನೋವಾಗಿದೆ. ಇನ್ನು, ಗಿಲ್ಲಿ ನಟ (Gilli Nata) ಮತ್ತು ಅಶ್ವಿನಿ ಗೌಡ ನಡುವೆ ಭಾರಿ ಜಿದ್ದಾಜಿದ್ದಿ ಏರ್ಪಟ್ಟಿದೆ. ಕ್ಯಾಪ್ಟೆನ್ಸಿ ಟಾಸ್ಕ್ ಆಡುವಾಗ ಗಿಲ್ಲಿ ನಟ ಖಾರವಾಗಿ ತಿರುಗೇಟು ನೀಡಿದ್ದಾರೆ. ಏಕವಚನದ ಬಗ್ಗೆ ಭಾರಿ ಅಸಮಾಧಾನ ಹೊಂದಿದ್ದ ಅಶ್ವಿನಿ ಗೌಡ ಅವರಿಗೆ ಅದೇ ತಂತ್ರವನ್ನು ಬಳಸಿ ಗಿಲ್ಲಿ ನಟ ಸೋಲುಣಿಸಿದ್ದಾರೆ.
ಈ ವಾರ ಕ್ಯಾಪ್ಟೆನ್ಸಿ ಟಾಸ್ಕ್ ಆಡಲು ಅಭಿಷೇಕ್ ಮತ್ತು ಅಶ್ವಿನಿ ಗೌಡ ಅವರು ಆಯ್ಕೆ ಆಗಿದ್ದರು. 12 ನಿಮಿಷಗಳನ್ನು ಮನಸ್ಸಿನಲ್ಲಿಯೇ ಎಣಿಸಿಕೊಳ್ಳಬೇಕು. ಅವರ ಗಮನವನ್ನು ಬೇರೆಡೆಗೆ ಸೆಳೆಯಲು ಇನ್ನುಳಿದ ಸ್ಪರ್ಧಿಗಳು ಪ್ರಯತ್ನಿಸಬೇಕು. ಅಶ್ವಿನಿ ಗೌಡ ಅವರ ಗಮನ ಕೆಡಿಸಲು ಗಿಲ್ಲಿ ನಟ ಮತ್ತು ಕಾವ್ಯ ಅವರು ಪ್ರಯತ್ನಿಸಿದರು. ಅದಕ್ಕೆ ಅವರು ಏಕವಚನದ ದಾರಿ ಆಯ್ಕೆ ಮಾಡಿಕೊಂಡರು.
ಅಶ್ವಿನಿ ಗೌಡ ಅವರ ಗಮನವನ್ನು ಬೇರೆಡೆಗೆ ಸೆಳೆಯಲು, ಅವರನ್ನು ಪ್ರಚೋದಿಸಲು ಏಕವಚನದ ವಿಷಯಕ್ಕಿಂತ ತೀವ್ರವಾದ ವಿಷಯ ಬೇರೊಂದಿಲ್ಲ ಎಂಬುದು ಗಿಲ್ಲಿಗೆ ಚೆನ್ನಾಗಿ ಗೊತ್ತಿತ್ತು. ಇಷ್ಟು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಏಕವಚನದ ಕಾರಣದಿಂದ ನಡೆದ ಎಲ್ಲ ಜಗಳಗಳನ್ನು ಇಟ್ಟುಕೊಂಡು ಗಿಲ್ಲಿ ಅವರು ಅಶ್ವಿನಿಯನ್ನು ಟಾರ್ಗೆಟ್ ಮಾಡಿದರು. ಅದರಲ್ಲಿ ಅವರು ಯಶಸ್ವಿ ಕೂಡ ಆದರು.
ಏಕವಚನದ ವಿಷಯವನ್ನು ಇಟ್ಟುಕೊಂಡು ಗಿಲ್ಲಿ ನಟ ಪ್ರಚೋದಿಸಿದ್ದರಿಂದ ಅಶ್ವಿನಿ ಗೌಡ ಅವರ ಗಮನ ಕದಲಿತು. ನಿಮಿಷಗಳನ್ನು ಸರಿಯಾಗಿ ಮನಸ್ಸಿನಲ್ಲಿ ಎಣಿಸಿಕೊಳ್ಳಲು ಅವರು ಸೋತರು. ಖಾರದ ಮಾತುಗಳನ್ನು ಕೇಳಿಸಿಕೊಳ್ಳುವಲ್ಲಿ ಮುಳುಗಿದ್ದ ಅವರು 29 ನಿಮಿಷ 10 ಸೆಕೆಂಡ್ಗಳ ಕಾಲ ಮುಂದುವರಿದರು. ಅವರ ಎದರಾಳಿ ಅಭಿಷೇಕ್ ಅವರು 11 ನಿಮಿಷ 49 ಸೆಕೆಂಡ್ಗೆ ಆಟ ಮುಗಿಸುವ ಮೂಲಕ ಕ್ಯಾಪ್ಟನ್ ಆಗಿ ಆಯ್ಕೆ ಆದರು.
ಇದನ್ನೂ ಓದಿ: ರಾಜಮಾತೆ.. ನೀನು ಇವತ್ತು ಸತ್ತೆ: ಗಿಲ್ಲಿ ನಟ ಎದುರು ಅಶ್ವಿನಿ ಗೌಡ ಗಪ್ ಚುಪ್
ಈ ಟಾಸ್ಕ್ ಆಡುವುದಕ್ಕೂ ಮುನ್ನ ಕನ್ಫೆಷನ್ ರೂಮ್ನಲ್ಲಿ ಬಿಗ್ ಬಾಸ್ ಎದುರು ಅಶ್ವಿನಿ ಗೌಡ ತಮ್ಮ ಅಸಮಾಧಾನ ಹೊರಹಾಕಿದ್ದರು. ‘ನಿನ್ನೆ ನಡೆದ ಘಟನೆ ನನಗೆ ಹರ್ಟ್ ಆಗಿದೆ. ಅದಕ್ಕೆ ಪರಿಹಾರ ಸಿಗಬೇಕು. ತೇಜೋವಧೆ ಆಗಿದೆ. ಗಿಲ್ಲಿಯಿಂದ ವಾತಾವರಣ ತುಂಬಾ ಹದಗೆಟ್ಟಿದೆ. ಬಂದ ದಿನದಿಂದ ಇಲ್ಲಿಯ ತನಕ ಹಲವು ಹೆಸರು ಇಟ್ಟಿದ್ದಾರೆ. ಅದು ಚೀಪ್ ಎನಿಸುತ್ತಿದೆ. ಎಲ್ಲದರಲ್ಲೂ ಮಾತನಾಡುತ್ತಾರೆ. ಅದೆಲ್ಲ ಈ ಮನೆಯಲ್ಲಿ ಸರಿಯಾದ ವಾತಾವರಣ ಅನಿಸುತ್ತಿಲ್ಲ. ರಘು ಜೊತೆ ಆಗಿದ್ದು ಕೂಡ ನೀವು ನೋಡಿದ್ದೀರಿ. ಯಾರಿಂದಲೂ ಬೆರಳು ತೋರಿಸಿಕೊಳ್ಳಬಾರದು ಅಂತ ಈ ಮನೆಯಲ್ಲಿ ಸಾಧ್ಯವಾದಷ್ಟು ಕೆಲಸ ಮಾಡಿದ್ದೇನೆ. ರಘು ಅವರು ಏಕವಚನ ಬಳಸಿದ್ದಾರೆ. ದಿನದಿನವೂ ಅದು ಚೆನ್ನಾಗುತ್ತಿದೆ. ಇದು ನನಗೆ ಸರಿ ಎನಿಸುತ್ತಿಲ್ಲ’ ಎಂದು ಅಶ್ವಿನಿ ಗೌಡ ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.