
ಹಾಸ್ಯ ಕಲಾವಿದ ಗಿಲ್ಲಿ ನಟ (Gilli Nata) ಅವರು ಪ್ರಾಪರ್ಟಿ ಕಾಮಿಡಿ ಮೂಲಕ ಜನಮನ ಗೆದ್ದಿದ್ದಾರೆ. ಈಗ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋ ಸ್ಪರ್ಧಿ ಆಗಿದ್ದಾರೆ. ಆದರೆ ಕಾಮಿಡಿಯೇ ಅವರಿಗೆ ಮುಳುವಾಗುವ ಸಾಧ್ಯತೆ ಇದೆ! ಹೌದು, ಯಾವ ಸಮಯದಲ್ಲಿ ಕಾಮಿಡಿ ಮಾಡಬೇಕು? ಯಾವ ಸಮಯದಲ್ಲಿ ಗಂಭೀರವಾಗಿ ಇರಬೇಕು ಎಂಬುದು ಅವರಿಗೆ ಅರ್ಥವಾದಂತಿಲ್ಲ. ಇದರಿಂದ ಅವರು ಕೆಲವು ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ನಿಯಮ ಉಲ್ಲಂಘನೆಯನ್ನು ಬಿಗ್ ಬಾಸ್ ಸಹಿಸುವುದಿಲ್ಲ. ಎರಡನೇ ದಿನವೇ ಈ ಬಗ್ಗೆ ಎಚ್ಚರಿಕೆ ನೀಡಲಾಗಿದೆ. ಆದರೂ ಕೂಡ ಗಿಲ್ಲಿ ನಟ ಅರ್ಥ ಮಾಡಿಕೊಂಡಂತೆ ಕಾಣುತ್ತಿಲ್ಲ.
2ನೇ ದಿನ ಬಿಗ್ ಬಾಸ್ ಒಂದು ಮುಖ್ಯವಾದ ಸಂದೇಶ ನೀಡಿದರು. ‘ನಿಯಮಗಳ ಉಲ್ಲಂಘನೆ ಮಾತ್ರವಲ್ಲ, ನಿಯಮಗಳನ್ನು ಸ್ವಲ್ಪ ತಿರುವಿದರೂ ಸಹಿಸಲ್ಲ. ಸಣ್ಣ ತಪ್ಪು, ದೊಡ್ಡ ತಪ್ಪು ಎಂಬ ಭೇದ ಎಲ್ಲ. ಎಲ್ಲದಕ್ಕೂ ಶಿಕ್ಷೆ ಕಟ್ಟಿಟ್ಟ ಬುತ್ತಿ. ಕಳೆದ 24 ಗಂಟೆಯಿಂದ ನಿಮ್ಮ ನಡೆ-ನುಡಿ ತೀಷ್ಣವಾಗಿ ಗಮನಿಸಲಾಗಿದೆ’ ಎಂದು ಬಿಗ್ ಬಾಸ್ ಹೇಳಿದ್ದಾರೆ.
‘ಮಲಗುವಾಗ ಮತ್ತು ಶೌಚಾಲಯ ಬಳಸುವಾಗ ಹೊರತುಪಡಿಸಿ ಬೇರೆ ಎಲ್ಲ ಸಮಯದಲ್ಲೂ ಜಂಟಿಗಳು ಜೊತೆಯಲ್ಲೇ ಇರಬೇಕು. ಆದರೆ ಅದನ್ನು ಪಾಲಿಸಿಲ್ಲ. ಒಂಟಿಗಳು ಈ ತಪ್ಪನ್ನು ಕಣ್ಣಾರೆ ಕಂಡರೂ ಅದರ ಬಗ್ಗೆ ಚರ್ಚಿಸಿಲ್ಲ. ಜಂಟಿಗಳು ತಪ್ಪು ಮಾಡಿದ್ದರೂ ಕೂಡ ಒಂಟಿಗಳು ನಿರ್ಲಕ್ಷ್ಯ ತೋರಿದ್ದು ಕೂಡ ಅಪರಾಧ. ಹಾಗಾಗಿ ನಿನ್ನೆ ಒಂಟಿಗಳು ಗಳಿಸಿದ 14 ದಿನಸಿ ಸಾಮಾಗ್ರಿಗಳ ಪೈಕಿ 3 ಮಾತ್ರ ಉಳಿಸಿಕೊಂಡು ಬಾಕಿ ಎಲ್ಲವನ್ನೂ ವಾಪಸ್ ತಂದು ಇರಿಸಿ’ ಎಂದು ಬಿಗ್ ಬಾಸ್ ಆದೇಶ ನೀಡಿದರು.
ಇಂಥ ಗಂಭೀರ ಸಂದರ್ಭದಲ್ಲಿ ಕೂಡ ಗಿಲ್ಲಿ ನಟ ಕಾಮಿಡಿ ಮಾಡಲು ಪ್ರಯತ್ನಿಸುತ್ತಿದ್ದರು. ಬಿಗ್ ಬಾಸ್ ಸೀರಿಯಸ್ ಆಗಿ ಎಚ್ಚರಿಕೆ ನೀಡುತ್ತಿರುವಾಗಲೇ ಗಿಲ್ಲಿ ನಟ ನಗುತ್ತಿದ್ದರು. ಒಂಟಿಗಳಿಗೆ ಉರಿಸಬೇಕು ಎಂಬ ಕಾರಣಕ್ಕೆ ತಾವು ಈ ರೀತಿ ಮಾಡಿದ್ದಾಗಿ ತಿಳಿಸಿದರು. ಪಕ್ಕದಲ್ಲೇ ಇದ್ದ ಕಾವ್ಯಾ ಶೈವ ಅವರು ಈ ಬಗ್ಗೆ ಗಿಲ್ಲಿಗೆ ಎಚ್ಚರಿಕೆ ನೀಡಿದರು. ಆದರೂ ಸುಧಾರಿಸುವ ಲಕ್ಷಣ ಕಾಣಿಸಲಿಲ್ಲ.
ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿ ಅಶ್ವಿನಿ ಗೌಡ ಡಿವೋರ್ಸ್ ಪಡೆದಿದ್ದಕ್ಕೆ ಇದೆ ಪ್ರಮುಖ ಕಾರಣ
‘ಎಲ್ಲ ಸಮಯವೂ ತಮಾಷೆ ಅಲ್ಲ. ಬಿಗ್ ಬಾಸ್ ಮಾತನಾಡುವಾಗ ಬೇರೆಯವರಿಗೆ ಉರಿಸುವುದು ಸರಿಯಲ್ಲ. ತೀರಾ ಅತಿಯಾಗಿ ಮಾಡಬೇಡ. ಬೇರೆಯವರಿಗೆ ತೊಂದರೆ ಕೊಡಲು ಹೋಗಿ ತಮಗೆ ತೊಂದರೆ ಆಗಬಾರದು’ ಕಾವ್ಯಾ ಅವರು ಗಿಲ್ಲಿಗೆ ಬುದ್ಧಿಮಾತು ಹೇಳಿದ್ದಾರೆ. ತಮಾಷೆ ಮಾಡುವ ನೆಪದಲ್ಲಿ ಗಿಲ್ಲಿ ನಟ ಪದೇ ಪದೇ ಎಡವುತ್ತಿದ್ದಾರೆ. ಇದರಿಂದ ಅವರನ್ನು ಎಲ್ಲರೂ ನಾಮಿನೇಟ್ ಮಾಡುವ ಸಾಧ್ಯತೆ ಹೆಚ್ಚಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.