ಚೈತ್ರಾ ಕುತಂತ್ರಕ್ಕೆ ಬಲಿ ಆಗಲಿಲ್ಲ ಹನುಮ; ಹಳ್ಳಿ ಪ್ರತಿಭೆಗೆ ಮತ್ತೆ ಕಿಚ್ಚನ ಹೊಗಳಿಕೆ

ಮಾತಿನಿಂದಲೇ ಚೈತ್ರಾ ಅವರ ನಿಜವಾದ ಬಣ್ಣ ಬಯಲಾಗಿದೆ. ಅವರಿವರ ಬಗ್ಗೆ ಇಲ್ಲಸಲ್ಲದ ವಿಚಾರಗಳನ್ನು ಹೇಳಿದ್ದರಿಂದ ಚೈತ್ರಾ ಅವರಿಗೆ ಕಿಚ್ಚ ಸುದೀಪ್​ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡಿದ್ದಾರೆ. ಎಲ್ಲರ ಎದುರು ಕಣ್ಣೀರು ಹಾಕುತ್ತಾ ಕ್ಷಮೆ ಕೇಳುವುದು ಬಿಟ್ಟು ಚೈತ್ರಾಗೆ ಬೇರೆ ಯಾವುದೇ ಆಯ್ಕೆ ಉಳಿಯಲಿಲ್ಲ. ಈ ನಡುವೆ ನಿಜಕ್ಕೂ ಶೈನ್ ಆಗಿದ್ದು ಹನುಮಂತ!

ಚೈತ್ರಾ ಕುತಂತ್ರಕ್ಕೆ ಬಲಿ ಆಗಲಿಲ್ಲ ಹನುಮ; ಹಳ್ಳಿ ಪ್ರತಿಭೆಗೆ ಮತ್ತೆ ಕಿಚ್ಚನ ಹೊಗಳಿಕೆ
ಹನುಮಂತ, ಚೈತ್ರಾ ಕುಂದಾಪುರ, ಸುದೀಪ್

Updated on: Nov 17, 2024 | 2:58 PM

ಹಳ್ಳಿ ಪ್ರತಿಭೆ ಹನುಮಂತ ಅವರು ಬಿಗ್ ಬಾಸ್ ಮನೆಯಲ್ಲಿ ಯಾರ ಪ್ರಭಾವಕ್ಕೂ ಒಳಗಾಗುತ್ತಿಲ್ಲ. ಅವರ ಮೇಲೆ ಹೊಗಳಿಕೆ ಮತ್ತು ತೆಗಳಿಕೆ ಎರಡೂ ಕೂಡ ಪ್ರಭಾವ ಬೀರುತ್ತಿಲ್ಲ. ಯಾರೋ ಹೊಗಳಿದರು ಎಂಬ ಕಾರಣಕ್ಕೆ ಅವರ ಆಟ ಡಲ್ ಆಗುತ್ತಿಲ್ಲ. ಅದೇ ರೀತಿ, ಬೇರೆಯವರ ಕುತಂತ್ರಕ್ಕೂ ಹನುಮಂತ ಬಲಿಯಾಗುತ್ತಿಲ್ಲ. ಇದರಿಂದಾಗಿ ಅವರಿಗೆ ಕಿಚ್ಚ ಸುದೀಪ್ ಕಡೆಯಿಂದ ಮೆಚ್ಚುಗೆ ಸಿಕ್ಕಿದೆ. ಶನಿವಾರದ (ನವೆಂಬರ್​ 16) ಸಂಚಿಕೆಯಲ್ಲಿ ಚೈತ್ರಾ ಕುಂದಾಪುರ ಅವರು ವಿಲನ್ ಆಗಿದ್ದಾರೆ. ಅವರ ನಿಜವಾದ ಬಣ್ಣ ಬಯಲಾಗಿದೆ.

ಕಳೆದ ವಾರ ಬಿಗ್ ಬಾಸ್ ಮನೆಯಲ್ಲಿ ಚೈತ್ರಾ ಕುಂದಾಪುರ ಅವರು ಕುಸಿದು ಬಿದ್ದಿದ್ದರು. ನಂತರ ಚಿಕಿತ್ಸೆ ಕೊಡಿಸಲು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆಸ್ಪತ್ರೆಗೆ ಹೋಗಿ ಬಂದ ಬಳಿಕ ದೊಡ್ಮನೆಯ ಒಳಗೆ ಚೈತ್ರಾ ಅವರು ಮಾಡಿದ ಮಾತುಗಳು ಸುದೀಪ್​ ಅವರ ಕೋಪಕ್ಕೆ ಕಾರಣ ಆಗಿದೆ. ಹೊರ ಜಗತ್ತಿನಿಂದ ಕೆಲವು ವಿಷಯಗಳನ್ನು ಕೇಳಿಸಿಕೊಂಡು ಬಂದ ಚೈತ್ರಾ ಅವರು ಬಿಗ್ ಬಾಸ್ ಮನೆಯ ಸ್ಪರ್ಧಿಗಳ ತಲೆ ಕೆಡಿಸುವ ಪ್ರಯತ್ನ ಮಾಡಿದ್ದಾರೆ.

ಧನರಾಜ್ ಆಟ ಡಲ್ ಆಗಿದೆ, ತ್ರಿವಿಕ್ರಮ್ ಗಮನ ಬೇರೆ ಕಡೆ ಹೋಗುತ್ತಿದೆ, ಹನುಮಂತ ಸೂಪರ್ ಆಗಿದ್ದಾರೆ, ಮೋಕ್ಷಿತಾ ಅವರು ಟಪೋರಿ ಆಗಿದ್ದಾರೆ ಎಂಬಿತ್ಯಾದಿ ಮಾತುಗಳನ್ನು ಚೈತ್ರಾ ಕುಂದಾಪುರ ಅವರು ಹೇಳಿದ್ದರು. ಅಲ್ಲದೇ ಪಿಸುದನಿ ಮತ್ತು ಸನ್ಹೆಯ ಮೂಲಕವೂ ಅವರು ಸಂವಹನ ಮಾಡಿದ್ದರು. ಇದರಿಂದ ಉಗ್ರಂ ಮಂಜು, ಶಿಶಿರ್, ತ್ರಿವಿಕ್ರಮ್ ಮುಂತಾದವರ ತಲೆಗೆ ಹುಳ ಬಿಟ್ಟಂತೆ ಆಗಿತ್ತು. ಆದರೆ ಹನುಮಂತ? ‘ನಾನು ತಲೆಗೆ ಹುಳ ಬಿಟ್ಟುಕೊಂಡಿಲ್ಲ’ ಎಂದು ನೇರವಾಗಿ ಹೇಳಿ ಚೈತ್ರಾಗೆ ತಿರುಗೇಟು ನೀಡಿದರು.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಪ್ರಜ್ಞೆ ತಪ್ಪಿ ಕುಸಿದು ಬಿದ್ದ ಚೈತ್ರಾ; ಪರಿಸ್ಥಿತಿ ಗಂಭೀರ

ವಾರಾಂತ್ಯದ ಪಂಚಾಯ್ತಿಯಲ್ಲಿ ಹನುಮಂತ ಅವರು ನೀಡಿದ ಈ ಪ್ರತಿಕ್ರಿಯೆ ಕಂಡು ಸುದೀಪ್ ಅವರಿಗೆ ಮೆಚ್ಚುಗೆ ಆಯಿತು. ಈ ಮೊದಲು ಹನುಮಂತ ಅವರು ಕಿಚ್ಚನ ಚಪ್ಪಾಳೆ ಕೂಡ ಪಡೆದಿದ್ದರು. ಪ್ರತಿ ಪ್ರೋಮೋದಲ್ಲಿ ಕೂಡ ಹನುಮಂತ ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟರಮಟ್ಟಿಗೆ ಅವರ ಆಟ ಇಂಟರೆಸ್ಟಿಂಗ್ ಆಗುತ್ತಿದೆ. ಅವರ ಜೊತೆ ಧನರಾಜ್ ಹೆಚ್ಚು ಕಾಲ ಕಳೆಯುತ್ತಾರೆ. ಧನರಾಜ್ ಹಾಗೂ ಹನುಮಂತನ ನಡುವಿನ ಸ್ನೇಹ ಗಟ್ಟಿಯಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.