ಸಿನಿಮಾ ಮತ್ತು ಕ್ರಿಕೆಟ್ ನಡುವೆ ಒಳ್ಳೆಯ ನಂಟು ಇದೆ. ಈ ಎರಡೂ ಕ್ಷೇತ್ರದ ಸೆಲೆಬ್ರಿಟಿಗಳು ಪರಸ್ಪರ ಬಾಂಧವ್ಯ ಹೊಂದಿದ್ದಾರೆ. ಅಮಿತಾಭ್ ಬಚ್ಚನ್ (Amitabh Bachchan) ನಡೆಸಿಕೊಡುತ್ತಿರುವ ‘ಕೌನ್ ಬನೇಗಾ ಕರೋಡ್ಪತಿ’ (Kaun Banega Crorepati) ಕಾರ್ಯಕ್ರಮಕ್ಕೆ ಇತ್ತೀಚೆಗೆ ಕ್ರಿಕೆಟ್ ಆಟಗಾರರಾದ ಹರ್ಭಜನ್ ಸಿಂಗ್ (Harbhajan Singh) ಮತ್ತು ಇರ್ಫಾನ್ ಪಠಾಣ್ (Irfan Pathan) ಅವರು ಅತಿಥಿಗಳಾಗಿ ಆಗಮಿಸಿದ್ದರು. ಈ ವೇಳೆ ಅದೇ ವೇದಿಕೆಯಲ್ಲಿ ಈ ಮೂವರೂ ಸೇರಿಕೊಂಡು ಕ್ರಿಕೆಟ್ ಆಡಿದ್ದಾರೆ. ಹರ್ಭಜನ್ ಸಿಂಗ್ ಬೌಲಿಂಗ್ ಮಾಡಿದರೆ, ಅಮಿತಾಭ್ ಬಚ್ಚನ್ ಅತ್ಯುತ್ತಮವಾಗಿ ಬ್ಯಾಟಿಂಗ್ ಮಾಡಿದ್ದಾರೆ. ಅವರಿಬ್ಬರ ಆಟವನ್ನು ತಮ್ಮ ಕಾಮೆಂಟರಿ ಮೂಲಕ ಇರ್ಫಾನ್ ಪಠಾಣ್ ಅವರು ಸೊಗಸಾಗಿ ವಿವರಿಸಿದ್ದಾರೆ.
ಅಮಿತಾಭ್ ಬಚ್ಚನ್ ಅವರಿಗೆ ಕ್ರಿಕೆಟ್ ಬಗ್ಗೆ ಸಖತ್ ಆಸಕ್ತಿ ಇದೆ. ಅಂತಾರಾಷ್ಟ್ರೀಯ ಪಂದ್ಯಗಳನ್ನು ವೀಕ್ಷಿಸಿದ ಬಳಿಕ ಅವರು ತಮ್ಮ ಅಭಿಪ್ರಾಯಗಳನ್ನು ಸೋಶಿಯಲ್ ಮೀಡಿಯಾ ಮೂಲಕ ಹಂಚಿಕೊಳ್ಳುತ್ತಾರೆ. ಅನೇಕ ಕ್ರಿಕೆಟ್ ಪಟುಗಳು ಅವರ ‘ಕೌನ್ ಬನೇಗಾ ಕರೋಡ್ಪತಿ’ ಕಾರ್ಯಕ್ರಮಕ್ಕೆ ಬಂದುಹೋಗಿದ್ದಾರೆ. ಈಗ ಇರ್ಫಾನ್ ಪಠಾಣ್ ಮತ್ತು ಹರ್ಭಜನ್ ಸಿಂಗ್ ಅವರು ಆಗಮಿಸಿದ್ದಾರೆ.
‘ನಾವು ಮಹಾನ್ ಲೆಜೆಂಡ್ಗಳ ಜತೆ ಕ್ರಿಕೆಟ್ ಆಡಿದ್ದೇವೆ. ಆದರೆ ಒಬ್ಬ ಲೆಜೆಂಡ್ ಬಾಕಿ ಉಳಿದಿದ್ದಾರೆ’ ಎನ್ನುವ ಮೂಲಕ ಅಮಿತಾಭ್ ಜತೆ ತಾವು ಕ್ರಿಕೆಟ್ ಆಡಬೇಕು ಎಂದು ಇರ್ಫಾನ್ ಪಠಾಣ್ ಆಸೆ ವ್ಯಕ್ತಪಡಿಸಿದರು. ಅವರ ಆಸೆ ಕೇಳಿ ಅಮಿತಾಭ್ ಒಂದು ಕ್ಷಣ ಅಚ್ಚರಿಪಟ್ಟರು. ಮರುಕ್ಷಣವೇ ಅವರು ಕ್ರಿಕೆಟ್ ಆಡಲು ಸಜ್ಜಾದರು. ಕೌನ್ ಬನೇಗಾ ಕರೋಡ್ಪತಿ ವೇದಿಕೆಯೇ ಕ್ರಿಕೆಟ್ ಮೈದಾನವಾಗಿ ಬದಲಾಯಿತು. ಹರ್ಭಜನ್ ಸಿಂಗ್ ಚೆಂಡು ಹಿಡಿದು ಸಜ್ಜಾದರು. ಇರ್ಫಾನ್ ಪಠಾಣ್ ಕಾಮೆಂಟರಿ ಆರಂಭಿಸಿದರು.
ಹರ್ಭಜನ್ ಅವರ ಎಸೆತಕ್ಕೆ ಅಮಿತಾಭ್ ಬಚ್ಚನ್ ಅವರು ಸಿಕ್ಸ್, ಫೋರ್ ಬಾರಿಸಿ ಎಲ್ಲರಿಂದ ಚಪ್ಪಾಳೆ ಗಿಟ್ಟಿಸಿಕೊಂಡರು. ಅವರನ್ನು ಔಟ್ ಮಾಡಲು ಹರ್ಭಜನ್ ಸಿಂಗ್ಗೆ ಸಾಧ್ಯವಾಗಲಿಲ್ಲ. ‘ಅನೇಕ ಘಟಾನುಘಟಿ ಆಟಗಾರರ ವಿಕೆಟ್ ಪಡೆದಿದ್ದೇನೆ. ನಿಮ್ಮನ್ನು ಕೂಡ ಔಟ್ ಮಾಡಿದ್ದರೆ ನನ್ನ ನಿವೃತ್ತಿ ಜೀವನ ಅದ್ಭುತವಾಗಿ ಇರುತ್ತದೆ ಅಂತ ಭಾವಿಸಿದ್ದೆ’ ಎಂದಿದ್ದಾರೆ ಹರ್ಭಜನ್ ಸಿಂಗ್.
#KBC13 ke manch pe AB sir ne lagaaye apne balle se chauke aur chakke,Harbhajan Singh ki pitaai or hamari commentary,Dekhiye iss entertaining pal ko #KaunBanegaCrorepati ke #ShaandaarShukriya week mein, Mon-Fri, raat 9 baje, @SonyTV @SrBachchan @harbhajan_singh pic.twitter.com/egGdx4HKMN
— Irfan Pathan (@IrfanPathan) December 17, 2021
ಕಳೆದ 21 ವರ್ಷಗಳಿಂದ ಈ ಶೋ ನಡೆದುಕೊಂಡು ಬಂದಿದೆ. ಈಗ 13ನೇ ಸೀಸನ್ ನಡೆಯುತ್ತಿದೆ. ಈ ಸೀಸನ್ನಲ್ಲಿ ವೀರೇಂದ್ರ ಸೆಹ್ವಾಗ್ ಮತ್ತು ಸೌರವ್ ಗಂಗೂಲಿ ಕೂಡ ಪಾಲ್ಗೊಂಡಿದ್ದರು. ಪ್ರತಿ ಶುಕ್ರವಾರ ಬೇರೆ ಬೇರೆ ಕ್ಷೇತ್ರದ ಗಣ್ಯರು ಹಾಟ್ ಸೀಟ್ನಲ್ಲಿ ಕೂತು ಆಟ ಆಡುತ್ತಾರೆ.
ಇದನ್ನೂ ಓದಿ:
‘ಕೌನ್ ಬನೇಗಾ ಕರೋಡ್ಪತಿ’ ಶೋನಲ್ಲಿ ಕನ್ನಡ ಸಿನಿಮಾ ಮಾತು; ಅಮಿತಾಭ್ ಕಡೆಯಿಂದ ಶುಭ ಹಾರೈಕೆ
‘ಕೌನ್ ಬನೇಗಾ ಕರೋಡ್ಪತಿ’ 1000ನೇ ಎಪಿಸೋಡ್; ಮಗಳ ಎದುರು ಕಣ್ಣೀರು ಹಾಕಿದ ಅಮಿತಾಭ್ ಬಚ್ಚನ್
Published On - 11:47 am, Sat, 18 December 21