ವಿಷ್ಣುವರ್ಧನ್ ಅಳಿಯ, ನಟ ಅನಿರುದ್ಧ್ (Aniruddha Jatkar) ಅವರು ಸದ್ಯ ಸುದ್ದಿಯಲ್ಲಿದ್ದಾರೆ. ಅಸಹಕಾರ ನೀಡಿದ್ದರಿಂದ ಅವರನ್ನು ಧಾರಾವಾಹಿಯಿಂದ ತೆಗೆದು ಹಾಕುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದರೆ, ಈ ವಿಚಾರವನ್ನು ಅನಿರುದ್ಧ್ ಅವರು ಅಲ್ಲಗಳೆದಿದ್ದಾರೆ. ತಮ್ಮ ಕಡೆಯಿಂದ ಒಂದಷ್ಟು ವಿಚಾರಗಳನ್ನು ಅವರು ಸ್ಪಷ್ಟಪಡಿಸಿದ್ದಾರೆ. ಜತೆಗೆ ಮತ್ತೆ ನಟಿಸಲು ಸಿದ್ಧರಿರುವ ಬಗ್ಗೆಯೂ ಹೇಳಿದ್ದಾರೆ.
ಅನಿರುದ್ಧ್ ಅವರು ಅಸಹಕಾರ ನೀಡುತ್ತಿದ್ದಾರೆ ಎಂಬ ವಿಚಾರಕ್ಕೆ ಸಂಬಂಧಿಸಿ ಅವರ ವಿರುದ್ಧ ಕಿರುತೆರೆ ನಿರ್ಮಾಪಕರ ಸಂಘಕ್ಕೆ ದೂರು ನೀಡಲಾಗಿತ್ತು. ಈ ದೂರಿಗೆ ಸಂಬಂಧಿಸಿ ಸಂಘದ ಅಧ್ಯಕ್ಷ ಭಾಸ್ಕರ್ ನೇತೃತ್ವದಲ್ಲಿ ಸಭೆ ನಡೆಸಲಾಯಿತು. ಎರಡು ವರ್ಷಗಳ ಕಾಲ ಅನಿರುದ್ಧ್ ಅವರಿಗೆ ಕಿರುತೆರೆಯಲ್ಲಿ ನಟಿಸಲು ಅವಕಾಶ ನೀಡದಂತೆ ನಿರ್ಧರಿಸಲಾಗಿದೆ. ಈ ಬೆನ್ನಲ್ಲೇ ಅನಿರುದ್ಧ್ ಅವರು ಸುದ್ದಿಗೋಷ್ಠಿ ಕರೆದಿದ್ದಾರೆ.
‘ಕಳೆದ 1 ವರ್ಷದಿಂದ ಒತ್ತಡದಲ್ಲಿ ಕೆಲಸ ಮಾಡಿದ್ದೇನೆ. ನಮ್ಮ ಕಲಾವಿದರೂ ಕಣ್ಣೀರು ಹಾಕುತ್ತಾ ಕೆಲಸ ಮಾಡಿದ್ದಾರೆ. ನನ್ನಿಂದ ಎಷ್ಟೋ ಸೀನ್ಗಳು ಅದ್ಭುತವಾಗಿ ಮೂಡಿಬಂದಿವೆ. ಒಂದೂವರೆ ವರ್ಷ ಅವರು ಹೇಳಿದಂತೆ ಮಾಡಿದ್ದೇನೆ. ಅವರು ಹೇಳಿದ ಸಮಯಕ್ಕೆ ಬಂದಿದ್ದೇನೆ, ಹೋಗಿದ್ದೇನೆ. 3 ವರ್ಷದಿಂದ ಜೆಎಸ್ ಪ್ರೊಡಕ್ಷನ್ನಿಂದ ಹನಿ ನೀರು ಕುಡಿದಿಲ್ಲ. ನಾನು ಯಾವುದೇ ರೀತಿಯ ಡಿಮ್ಯಾಂಡ್ ಮಾಡುತ್ತಿರಲಿಲ್ಲ. ಹೊರಗಡೆ ಹೋದಾಗ ನಾನು ಯಾವುದೇ ಬೇಡಿಕೆ ಇಟ್ಟಿಲ್ಲ. ಸೆಟ್ನಲ್ಲಿ ನಾನು ಯಾರಿಗೂ ಬೈದಿಲ್ಲ. ಜೊತೆ ಜೊತೆಯಲಿ ಧಾರಾವಾಹಿ ನಮ್ಮ ಹೆಮ್ಮೆ, ನಮ್ಮ ಕುಟುಂಬ. ಸಣ್ಣಪುಟ್ಟ ಸಮಸ್ಯೆಗಳಾಗಿರುತ್ತವೆ, ಅದಕ್ಕೆ ಕಲಾವಿದರನ್ನು ತೆಗೆದುಹಾಕಬಾರದು’ ಎಂದಿದ್ದಾರೆ ಅನಿರುದ್ಧ್
‘ನಾನು ತಂಡದವರಿಗೆ ಫೋನ್ ಮಾಡಿದ್ದೆ. ಆದರೆ, ನನ್ನ ಕರೆಯನ್ನು ಅವರು ಸ್ವೀಕರಿಸಲಿಲ್ಲ. ನಮ್ಮ ಮನೆಯಲ್ಲಿ ಆ ಕೆಲಸ ಬಿಟ್ಟುಬಿಡು ಅಂದರು. ಆದರೆ, ನಾನು ಮತ್ತೆ ಒಂದಾಗುವುದಕ್ಕೆ ಸಿದ್ಧನಿದ್ದೇನೆ’ ಎಂದಿದ್ದಾರೆ ಅನಿರುದ್ಧ್. ಈ ಮೂಲಕ ರಾಜಿ ಆಗುವ ಸೂಚನೆಯನ್ನು ಅವರು ನೀಡಿದ್ದಾರೆ.
ಇದನ್ನೂ ಓದಿ: Aniruddha Jatkar: ಜೊತೆ ಜೊತೆಯಲಿ ತಂಡದಿಂದ ಅನಿರುದ್ಧ್ ಬ್ಯಾನ್: ನಿಷೇಧಕ್ಕೆ ಅವಕಾಶವಿಲ್ಲ ಎಂದ ಟೆಲಿವಿಷನ್ ಅಸೋಸಿಯೇಷನ್
ಅನಿರುದ್ಧ್ ಅವರು ರಾಜಿ ಆಗುತ್ತಾರೆ ಎಂದು ಮುಂದೆ ಬಂದರೆ ಕಿರುತೆರೆ ನಿರ್ಮಾಪಕರ ಸಂಘದವರ ಪ್ರತಿಕ್ರಿಯೆ ಹೇಗಿರುತ್ತದೆ ಎಂಬ ಪ್ರಶ್ನೆಗೆ ಸಂಘದ ಅಧ್ಯಕ್ಷ ಭಾಸ್ಕರ್ ಪ್ರತಿಕ್ರಿಯಿಸಿದ್ದಾರೆ. ‘ನಾನು ಈಗ ತೆಗೆದುಕೊಂಡಿರುವುದು ನನ್ನ ನಿರ್ಧಾರ ಅಲ್ಲ. ಸಂಘದವರು ತೆಗೆದುಕೊಂಡ ನಿರ್ಧಾರ. ಒಂದೊಮ್ಮೆ ಅವರು ರಾಜಿ ಆಗುತ್ತಾರೆ ಎಂದಾದರೆ ಮತ್ತೆ ಸಭೆ ಕೈಗೊಳ್ಳಬೇಕು. ಅಲ್ಲಿ ಚರ್ಚಿಸಬೇಕು’ ಎಂದಿದ್ದಾರೆ ಭಾಸ್ಕರ್.