ನಟ ಅಮಿತಾಭ್ ಬಚ್ಚನ್ (Amitabh Bachchan) ವಯಸ್ಸು 80ರ ಸಮೀಪದಲ್ಲಿದೆ. ಈ ವಯಸ್ಸಿನಲ್ಲೂ ಅವರು ಬಣ್ಣದ ಲೋಕದಲ್ಲಿ ಸಕ್ರಿಯರಾಗಿದ್ದಾರೆ. ತಮ್ಮ ಆರೋಗ್ಯದ ಕಡೆ ಗಮನ ಹರಿಸುತ್ತಾ, ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಇನ್ನು, ಕಿರುತೆರೆಯಲ್ಲಿ ಪ್ರಸಾರವಾಗುವ ‘ಕೌನ್ ಬನೇಗಾ ಕರೋಡ್ಪತಿ’ (KBC) ಶೋನ ನಡೆಸಿಕೊಡುವ ಜವಾಬ್ದಾರಿಯೂ ಅಮಿತಾಭ್ ಬಚ್ಚನ್ ಮೇಲಿದೆ. ಸದ್ಯ, 14ನೇ ಸೀಸನ್ ನಡೆಯುತ್ತಿದೆ. ಈ ಬಾರಿಯ ವೇದಿಕೆ ಮೇಲೆ ಅಮಿತಾಭ್ ಪತ್ನಿ ಜಯಾ ಬಚ್ಚನ್ ಕಾಣಿಸಿಕೊಂಡಿದ್ದಾರೆ. ಅವರು ಹೇಳಿದ ಮಾತಿಗೆ ಅಮಿತಾಭ್ ಭಾವುಕರಾಗಿದ್ದಾರೆ.
ಈ ಬಾರಿಯ ‘ಕೆಬಿಸಿ’ ಶೋನಲ್ಲಿ ಅಮಿತಾಭ್ ಬಚ್ಚನ್ ಕುಟುಂಬ ಕಾಣಿಸಿಕೊಂಡಿದೆ. ಅಭಿಷೇಕ್ ಬಚ್ಚನ್, ಜಯಾ ಬಚ್ಚನ್ ವೇದಿಕೆ ಏರಿದ್ದಾರೆ. ಜಯಾ ಬಚ್ಚನ್ ಹೇಳಿದ ಮಾತಿಗೆ ಅಮಿತಾಭ್ ಕಣ್ಣೀರು ಹಾಕಿದ್ದಾರೆ. ಅವರು ಹೇಳಿದ ವಿಚಾರ ಏನು ಎಂಬುದನ್ನು ರಿವೀಲ್ ಮಾಡಿಲ್ಲ. ಅದು ಏನು ಎಂಬುದು ಅಕ್ಟೋಬರ್ 11ರ ಎಪಿಸೋಡ್ನಲ್ಲಿ ತಿಳಿಯಲಿದೆ.
ಅಮಿತಾಭ್ ಲವ್ ಸ್ಟೋರಿ
ವಿಶೇಷ ಎಂದರೆ ಅಮಿತಾಭ್ ಹಾಗೂ ಜಯಾ ಅವರದ್ದು ಪ್ರೇಮ ವಿವಾಹ. ಇಬ್ಬರೂ ಪರಸ್ಪರ ಪ್ರೀತಿಸಿ, ಕುಟುಂಬದವರ ಒಪ್ಪಿಗೆ ಪಡೆದು 1973ರ ಜೂನ್ 3ರಂದು ಮದುವೆ ಆದರು. ಅಮಿತಾಭ್ ಹಾಗೂ ಜಯಾ ಮೊದಲ ಬಾರಿಗೆ ಭೇಟಿ ಮಾಡಿದ್ದು ಬನ್ಸಿ ಬಿರ್ಜು (1972) ಚಿತ್ರದ ಸೆಟ್ನಲ್ಲಿ. ಈ ಸಿನಿಮಾದಲ್ಲಿ ಇಬ್ಬರೂ ಮೊದಲ ಬಾರಿಗೆ ಒಟ್ಟಾಗಿ ನಟಿಸಿದ್ದರು. ಈ ಚಿತ್ರ ತೆರೆಕಂಡ ಮರುವರ್ಷವೆ ‘ಜಂಜೀರ್’ ಚಿತ್ರದಲ್ಲೂ ಇಬ್ಬರೂ ಒಟ್ಟಾಗಿ ಕೆಲಸ ಮಾಡಿದರು.
ಜಂಜೀರ್ ಸಿನಿಮಾದಲ್ಲಿ ಅಮಿತಾಭ್ ಹಾಗೂ ಜಯಾ ಹತ್ತಿರವಾದರು. ಈ ಚಿತ್ರ ಹಿಟ್ ಆದರೆ ಜಯಾ ಅವರನ್ನು ಲಂಡನ್ಗೆ ಕರೆದುಕೊಂಡು ಹೋಗಿ ಸೆಲೆಬ್ರೇಟ್ ಮಾಡಬೇಕು ಎನ್ನುವ ಕನಸನ್ನು ಅಮಿತಾಭ್ ಕಂಡಿದ್ದರು. ಈ ವಿಚಾರ ಅಮಿತಾಭ್ ತಂದೆ ಹರಿವಂಶ್ ರೈ ಬಚನ್ಗೆ ತಿಳಿಯಿತು. ಆಗ ಅವರು ಹೇಳಿದ್ದು ಒಂದೇ ಮಾತು. ‘ನೀವು ವಿದೇಶಕ್ಕೆ ಹೋಗುವುದಾದರೆ ಮೊದಲು ಮದುವೆ ಆಗಿ. ಆ ನಂತರ ವಿದೇಶಕ್ಕೆ ಹೋಗೋಕೆ ನನ್ನ ಅಭ್ಯಂತರವಿಲ್ಲ’ ಎಂದಿದ್ದರು. ಅಂತೆಯೇ 1973ರಲ್ಲಿ ಅಮಿತಾಭ್-ಜಯಾ ಮದುವೆ ಆದರು. ನಂತರ ಜಯಾ ಹಾಗೂ ಅಮಿತಾಭ್ ಅಭಿಮಾನ್, ಚುಪ್ಚುಪ್ಕೆ, ಶೋಲೆ, ಕಭಿ ಖುಷಿ ಕಭಿ ಗಂ ಸಿನಿಮಾಗಳಲ್ಲಿ ಇಬ್ಬರೂ ಒಟ್ಟಾಗಿ ನಟಿಸಿದ್ದರು.