ಕನ್ನಡ ಕಿರುತೆರೆಯ ಜನಪ್ರಿಯ ಧಾರಾವಾಹಿ ಜೊತೆಜೊತೆಯಲಿ (Jothe Jotheyali) ತಂಡದಿಂದ ನಾಯಕ ನಟ ಅನಿರುದ್ಧ್ (Aniruddha Jatkar) ಹೊರಬಿದ್ದಿದ್ದಾರೆ. ಇದರ ಬೆನ್ನಲ್ಲೇ ಮುಂದೆ ಆರ್ಯವರ್ಧನ್ ಆಗಿ ಯಾರು ಕಾಣಿಸಿಕೊಳ್ಳಲಿದ್ದಾರೆ? ನಿರ್ಮಾಪಕ/ನಿರ್ದೇಶಕ ಆರೂರು ಜಗದೀಶ್ ಅವರ ಮುಂದಿನ ಪ್ಲ್ಯಾನ್ಗಳೇನು ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ. ಏಕೆಂದರೆ ಅವರೇ ಹೇಳಿದಂತೆ ಜೊತೆ ಜೊತೆಯಲಿ ಕಥೆಯು ಶೇ.95 ರಷ್ಟು ಆರ್ಯವರ್ಧನ್ ಪಾತ್ರದ ಸುತ್ತ ನಡೆಯುತ್ತದೆ. ಇದೀಗ ಅದೇ ಪಾತ್ರಧಾರಿ ಹೊರನಡೆದಿರುವ ಕಾರಣ ಧಾರಾವಾಹಿಗೆ ಹಿನ್ನಡೆಯಾಗುವ ಸಾಧ್ಯತೆ ಹೆಚ್ಚು. ಇದಾಗ್ಯೂ ಜೊತೆ ಜೊತೆಯಲಿ ತಂಡದ ಅಂತಹದೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಳ್ಳುವ ಮುನ್ನ ಸಾಕಷ್ಟು ಚರ್ಚೆಗಳನ್ನೂ ಕೂಡ ನಡೆಸಿದೆ. ಅದರಲ್ಲೂ ಕಥೆಯಲ್ಲಿನ ಬದಲಾವಣೆಯ ಬಗ್ಗೆ ಪ್ಲ್ಯಾನ್ ರೂಪಿಸಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಾತನಾಡಿರುವ ಆರೂರು ಜಗದೀಶ್, ಜೊತೆ ಜೊತೆಯಲಿ ಧಾರಾವಾಹಿಯ ಮುಂದಿನ ಸಂಚಿಕೆಯಲ್ಲಿ ಆರ್ಯವರ್ಧನ್ ಇರಬಹುದು ಅಥವಾ ಇಲ್ಲದಿರಬಹುದು. ಇದಕ್ಕಾಗಿ ನಾವು ಕೂಡ ಪ್ಲ್ಯಾನ್ ರೂಪಿಸಿದ್ದೇವೆ ಎಂದು ತಿಳಿಸಿದ್ದಾರೆ. ಅಲ್ಲದೆ ಕಥೆಯಲ್ಲಿ ಟ್ವಿಸ್ಟ್ ಕೊಡುವ ಮೂಲಕ ಆರ್ಯವರ್ಧನ್ ಇಲ್ಲದೆಯೇ ಜೊತೆ ಜೊತೆಯಲಿ ಧಾರಾವಾಹಿಯನ್ನು ಮುಂದುವರೆಸುವ ಸೂಚನೆಯನ್ನೂ ಕೂಡ ನೀಡಿದ್ದಾರೆ. ಹೀಗಾಗಿ ಮುಂದಿನ ಸಂಚಿಕೆಯಲ್ಲಿ ಆರ್ಯವರ್ಧನ್ ಪಾತ್ರ ಇರುವುದು ಅನುಮಾನ ಎನ್ನಬಹುದು. ಅಲ್ಲದೆ ಆರ್ಯವರ್ಧವನ್ ಪಾತ್ರವನ್ನು ಹೊರಗಿಟ್ಟು, ಅಂದರೆ ವಿದೇಶಕ್ಕೆ ತೆರಳಿದ್ದಾರೆ ಎಂಬುದನ್ನು ಸೂಚಿಸಿ ಧಾರಾವಾಹಿಯನ್ನು ಮುಂದುವರೆಸುವ ಸಾಧ್ಯತೆಯಿದೆ.
ಏಕೆಂದರೆ ನಟ ಅನಿರುದ್ಧ್ ಹೇಳಿದಂತೆ, ಈ ಧಾರಾವಾಹಿಯು 2-3 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಹೀಗಾಗಿ ಜೊತೆ ಜೊತೆಯಲಿ ತಂಡ ಮತ್ತೊಂದು ಸಿರೀಯಲ್ ಮೂಲಕ ಪ್ರೇಕ್ಷಕರ ಮುಂದೆ ಬರುವ ಸಾಧ್ಯತೆಯಿದೆ. ಅಂದರೆ ಹಳೆಯ ಪಾತ್ರಗಳೇ ಇಲ್ಲೂ ಕೂಡ ಮುಂದುವರೆಯಬಹುದು. ಆದರೆ ಈ ವೇಳೆ ಹೊಸ ನಾಯಕ ನಟ ಎಂಟ್ರಿ ಕೊಡುವ ಸಾಧ್ಯತೆಗಳಿವೆ.
ಒಟ್ಟಿನಲ್ಲಿ ಕಿರುತೆರೆಯಲ್ಲಿ ಹೊಸ ಸಂಚಲನ ಸೃಷ್ಟಿಸಿದ್ದ ಜೊತೆ ಜೊತೆಯಲಿ ತಂಡದ ಬಿರುಕಿಗೆ ಇದೀಗ ತಾರ್ಕಿಕ ಅಂತ್ಯ ಸಿಕ್ಕಿದೆ. ಇದರ ಬೆನ್ನಲ್ಲೇ ಆರೂರು ಜಗದೀಶ್ ಅವರ ಮುಂದಿನ ನಡೆಯೇನು ಎಂಬುದೇ ಪ್ರೇಕ್ಷಕರ ಕುತೂಹಲ. ಅದರಲ್ಲೂ ಆರ್ಯವರ್ಧನ್ ಪಾತ್ರ ಇರಲಿದೆಯಾ ಎಂಬುದನ್ನು ವೀಕ್ಷಿಸಲು ಜೊತೆ ಜೊತೆಯಲಿ ಅಭಿಮಾನಿಗಳು ಕಾದು ಕುಳಿತಿರುವುದಂತು ಸತ್ಯ. ಹೀಗಾಗಿ ಮತ್ತೊಮ್ಮೆ ಟಿಆರ್ಪಿಯಲ್ಲಿ ಜೊತೆ ಜೊತೆಯಲಿ ಹೊಸ ದಾಖಲೆ ಬರೆಯಲಿದೆಯಾ ಕಾದು ನೋಡಬೇಕಿದೆ.