ನಟ ಕಮಲ್ ಹಾಸನ್ ಅವರು ಕಳೆದ 7 ವರ್ಷಗಳಿಂದ ‘ಬಿಗ್ ಬಾಸ್ ತಮಿಳು’ ರಿಯಾಲಿಟಿ ಶೋ ನಿರೂಪಣೆ ಮಾಡುತ್ತಾ ಬಂದಿದ್ದರು. ಅವರ ನಿರೂಪಣೆಯ ಶೈಲಿಗೆ ಫ್ಯಾನ್ಸ್ ಫಿದಾ ಆಗಿದ್ದರು. ಹೊಸ ಸೀಸನ್ಗೂ ಅವರೇ ನಿರೂಪಣೆ ಮಾಡಲಿ ಎಂಬುದು ಅಭಿಮಾನಿಗಳ ಬಯಕೆ ಆಗಿತ್ತು. ಆದರೆ ಕಮಲ್ ಹಾಸನ್ ಅವರು ಈಗ ಒಂದು ಬ್ಯಾಡ್ ನ್ಯೂಸ್ ನೀಡಿದ್ದಾರೆ. ಈ ಬಾರಿ ತಾವು ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡುವುದಿಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ. ತಮ್ಮ ಈ ನಿರ್ಧಾರಕ್ಕೆ ಕಾರಣ ಏನು ಎಂಬುದನ್ನು ಕೂಡ ಕಮಲ್ ಹಾಸನ್ ವಿವರಿಸಿದ್ದಾರೆ.
ಬಿಗ್ ಬಾಸ್ ನಿರೂಪಕರ ಬದಲಾವಣೆ ಕುರಿತು ಅಂತೆ-ಕಂತೆಗಳು ಕೇಳಿಬರುವುದು ಸಹಜ. ಆದರೆ ಈಗ ಕಮಲ್ ಹಾಸನ್ ಬಗ್ಗೆ ಕೇಳಿಬಂದಿರುವ ವಿಷಯ ಗಾಸಿಪ್ ಅಲ್ಲ. ಸ್ವತಃ ಕಮಲ್ ಹಾಸನ್ ಅವರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುವ ಮೂಲಕ ಈ ವಿಷಯ ತಿಳಿಸಿದ್ದಾರೆ. ಅಭಿಮಾನಿಗಳನ್ನು ಉದ್ದೇಶಿಸಿ ಅವರು ಪತ್ರ ಬರೆದಿದ್ದಾರೆ. ‘7 ವರ್ಷಗಳ ಹಿಂದೆ ಶುರುವಾದ ನಮ್ಮ ಬಿಗ್ ಬಾಸ್ ಪಯಣಕ್ಕೆ ಬ್ರೇಕ್ ನೀಡಲು ನಿರ್ಧರಿಸಿದ್ದೇನೆ ಎಂದು ಭಾರವಾದ ಹೃದಯದಿಂದ ನಿಮಗೆ ತಿಳಿಸುತ್ತಿದ್ದೇನೆ. ಈ ಮೊದಲೇ ಒಪ್ಪಿಕೊಂಡ ಸಿನಿಮಾಗಳ ಕೆಲಸದ ಕಾರಣದಿಂದ ನನಗೆ ಈ ಬಾರಿಯ ಬಿಗ್ ಬಾಸ್ ಶೋ ನಿರೂಪಣೆ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಇದನ್ನೂ ಓದಿ: ‘ಇಷ್ಟು ಕಳಪೆ ಬಿಗ್ ಬಾಸ್ ನಿರೂಪಕ ಬೇರೆ ಯಾರೂ ಇಲ್ಲ’: ಸ್ಟಾರ್ ನಟನ ವಿರುದ್ಧ ನೆಟ್ಟಿಗರ ಅಸಮಾಧಾನ
‘ನಿಮ್ಮ ಮನೆಗಳನ್ನು ತಲುಪುವ ಅವಕಾಶ ನನಗೆ ಸಿಕ್ಕಿತ್ತು. ನೀವು ನನಗೆ ಪ್ರೀತಿ ನೀಡಿದ್ದೀರಿ. ಅದಕ್ಕಾಗಿ ನಾನು ಚಿರಋಣಿ. ನಿಮ್ಮ ಬೆಂಬಲದಿಂದಾಗಿ ಬಿಗ್ ಬಾಸ್ ತಮಿಳು ರಿಯಾಲಿಟಿ ಶೋ ನನ್ನ ಪಾಲಿನ ಬೆಸ್ಟ್ ಶೋ ಆಯಿತು. ಕಲಿಕೆಯ ಅನುಭವ ನೀಡಿದ ಈ ಕಾರ್ಯಕ್ರಮಕ್ಕಾಗಿ ನಾನು ಋಣಿ ಆಗಿದ್ದೇನೆ. ನಿಮ್ಮೆಲ್ಲರಿಗೆ ಹಾಗೂ ಸ್ಪರ್ಧಿಗಳಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ’ ಎಂದು ಪತ್ರದಲ್ಲಿ ಬರೆದಿದ್ದಾರೆ ಕಮಲ್ ಹಾಸನ್. ಹೊಸ ಸೀಸನ್ಗೆ ಯಾರು ನಿರೂಪಣೆ ಮಾಡುತ್ತಾರೆ ಎಂಬ ಮಾಹಿತಿಯನ್ನು ವಾಹಿನಿಯವರು ಇನ್ನಷ್ಟೇ ನೀಡಬೇಕಿದೆ.
ಕನ್ನಡದಲ್ಲಿ ಕಿಚ್ಚ ಸುದೀಪ್ ಅವರು ಮೊದಲ ಸೀಸನ್ನಿಂದ ಇಲ್ಲಿಯ ತನಕ ಎಲ್ಲ ಆವೃತ್ತಿಗಳನ್ನು ನಡೆಸಿಕೊಟ್ಟಿದ್ದಾರೆ. ಹಿಂದಿಯಲ್ಲಿ ಸಲ್ಮಾನ್ ಖಾನ್, ತೆಲುಗಿನಲ್ಲಿ ಅಕ್ಕಿನೇನಿ ನಾಗಾರ್ಜುನ, ಮಲಯಾಳಂನಲ್ಲಿ ಮೋಹನ್ಲಾಲ್ ಅವರು ಬಿಗ್ ಬಾಸ್ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಜನರಿಗೆ ಹತ್ತಿರ ಆಗಿದ್ದಾರೆ. ಕರಣ್ ಜೋಹರ್ ಅವರು ಹಿಂದಿ ಬಿಗ್ ಬಾಸ್ ಒಟಿಟಿ ಶೋ ನಡೆಸಿಕೊಟ್ಟರು. ಈ ವರ್ಷ ಒಟಿಟಿ ಶೋಗೆ ನಿರೂಪಣೆ ಮಾಡಿದ್ದ ಅನಿಲ್ ಕಪೂರ್ ಅವರು ಸಿಕ್ಕಾಪಟ್ಟೆ ಟ್ರೋಲ್ ಆದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.