‘ಪ್ರಯಾಣ ಮುಗಿಯಬೇಕು, ಹೊಸ ಜರ್ನಿ ಬಗ್ಗೆ ಗಮನ ಹರಿಸಲೇಬೇಕು’; ‘ಕನ್ನಡತಿ’ ಬಗ್ಗೆ ರಂಜನಿ ರಾಘವನ್ ಮಾತು
ಬಣ್ಣದ ಲೋಕಕ್ಕೆ ಕಾಲಿಟ್ಟ ನಂತರದಲ್ಲಿ ಅನೇಕರು ಬ್ಯುಸಿ ಆಗುತ್ತಾರೆ. ಹವ್ಯಾಸಗಳು ಮೂಲೆಗುಂಪಾಗುತ್ತವೆ. ಆದರೆ, ರಂಜನಿಗೆ ಹಾಗಾಗಿಲ್ಲ. ಅವರಿಗೆ ಕಥೆ ಬರೆಯೋದಕ್ಕೆ ಧಾರಾವಾಹಿ ಪೂರಕವಾಗಿದೆ.
‘ಕನ್ನಡತಿ’ ಧಾರಾವಾಹಿ ಇಂದು (ಫೆಬ್ರವರಿ 3) ಕೊನೆ ಆಗುತ್ತಿದೆ. ಈ ಧಾರಾವಾಹಿಗೆ ದೊಡ್ಡ ವೀಕ್ಷಕರ ಬಳಗ ಇದೆ. ‘ಕನ್ನಡತಿ’ (Kannadathi Serial) ಪೂರ್ಣಗೊಳ್ಳುತ್ತಿರುವ ಬಗ್ಗೆ ಅನೇಕರಿಗೆ ಬೇಸರ ಇದೆ. ಕಿರಣ್ ರಾಜ್ ಹಾಗೂ ರಂಜನಿ ರಾಘವನ್ ಅವರು ಹರ್ಷ ಹಾಗೂ ಭುವಿ ಪಾತ್ರದಲ್ಲಿ ಗಮನ ಸೆಳೆದಿದ್ದಾರೆ. ಅವರ ಕೆಮಿಸ್ಟ್ರಿ ಕೆಲಸ ಮಾಡಿದೆ. ಈ ಧಾರಾವಾಹಿ ಜರ್ನಿ ಬಗ್ಗೆ ಹಾಗೂ ತಮ್ಮ ಮುಂದಿನ ಪ್ಲ್ಯಾನ್ಗಳ ಬಗ್ಗೆ ಟಿವಿ9 ಕನ್ನಡ ಡಿಜಿಟಲ್ ಜತೆ ಅವರು ಮಾತನಾಡಿದ್ದಾರೆ.
ಧಾರಾವಾಹಿ ಸರಿಯಾದ ಸಮಯಕ್ಕೆ ಮುಗಿಯುತ್ತಿದೆ
ಧಾರಾವಾಹಿ ಪೂರ್ಣಗೊಳ್ಳುವಾಗ ಎಲ್ಲ ಕಲಾವಿದರಿಗೆ ಬೇಸರ ಆಗುತ್ತದೆ. ರಂಜನಿ ಅವರು ಈ ವಿಚಾರದಲ್ಲಿ ಪಾಸಿಟಿವ್ ಆಗಿದ್ದಾರೆ. ‘ಮೆಗಾ ಸೀರಿಯಲ್ ಎಂದಾಗ ಯಾವಾಗ ಮುಗಿಸುತ್ತೀರಿ ಎಂದು ಅನೇಕರು ಪ್ರಶ್ನೆ ಮಾಡುತ್ತಾರೆ. ಆದರೆ, ಕನ್ನಡತಿ ಧಾರಾವಾಹಿಗೆ ಯಾಕೆ ಇಷ್ಟು ಬೇಗ ಮುಗಿಸುತ್ತಿದ್ದೀರಾ? ಎಂಬ ಪ್ರಶ್ನೆಗಳು ಬರುತ್ತಿವೆ. ನಮ್ಮ ಸೀರಿಯಲ್ ಎಷ್ಟು ಉತ್ತಮವಾಗಿತ್ತು ಹಾಗೂ ಎಷ್ಟು ಅರ್ಥಪೂರ್ಣವಾಗಿ ಈ ಧಾರಾವಾಹಿಯನ್ನು ಪೂರ್ಣಗೊಳಿಸುತ್ತಿದ್ದೇವೆ ಅನ್ನೋದಕ್ಕೆ ಇದುವೇ ಸಾಕ್ಷಿ. ಒಳ್ಳೆಯ ಧಾರಾವಾಹಿ ಎಂದು ಜನರ ಮನಸ್ಸಿನಲ್ಲಿ ಇರುವಾಗಲೇ ಅದನ್ನು ಪೂರ್ಣಗೊಳಿಸಬೇಕು ಅನ್ನೋದು ನಮ್ಮ ತಂಡಕ್ಕೆ ಇತ್ತು. ಈಗ ಹಾಗೆಯೇ ಆಗುತ್ತಿದೆ. ಬೇಡದೆ ಇರುವ ವಿಷಯವನ್ನು ತಂದು, ಪಾತ್ರಗಳಿಗೆ ಅಗೌರವ ನೀಡಿ, ಜಿಗುಪ್ಸೆ ಬರುವ ಮಟ್ಟಕ್ಕೆ ನಾವು ಧಾರಾವಾಹಿಯನ್ನು ತೆಗೆದುಕೊಂಡು ಹೋಗಿಲ್ಲ’ ಎಂದಿದ್ದಾರೆ ರಂಜನಿ ರಾಘವನ್.
ಪುಸ್ತಕ ಬರೆಯಲು ಪೂರಕ
ಬಣ್ಣದ ಲೋಕಕ್ಕೆ ಕಾಲಿಟ್ಟ ನಂತರದಲ್ಲಿ ಅನೇಕರು ಬ್ಯುಸಿ ಆಗುತ್ತಾರೆ. ಹವ್ಯಾಸಗಳು ಮೂಲೆಗುಂಪಾಗುತ್ತವೆ. ಆದರೆ, ರಂಜನಿಗೆ ಹಾಗಾಗಿಲ್ಲ. ‘ನಮ್ಮ ಧಾರಾವಾಹಿಯಿಂದ ಸಮಾಜಕ್ಕೆ ಹೊಸ ವಿಚಾರ ನೀಡಿದ್ದೇವೆ. ತಂದೆಯ ಅಂತ್ಯಸಂಸ್ಕಾರವನ್ನು ಹುಡುಗಿ ಮಾಡೋದು, ಕನ್ನಡದ ಪರ ವಿಷಯಗಳು, ದಿನಕ್ಕೆ ಒಂದು ಕನ್ನಡ ಶಬ್ದದ ಅರ್ಥ ವಿವರಣೆ ಹೀಗೆ ಹಲವು ವಿಚಾರಗಳು ಸಮಾಜಕ್ಕೆ ಸಿಕ್ಕಿವೆ. ಎರಡು ಪುಸ್ತಕ ಹೊರ ತಂದಿದ್ದೇನೆ. ನನಗೆ ಪುಸ್ತಕ ಬರೆಯುವ ಆಸಕ್ತಿ ಮೊದಲಿನಿಂದಲೂ ಇತ್ತು. ಅದಕ್ಕೆ ಪೂರಕವಾದ ವಾತಾವರಣ ಈ ಧಾರಾವಾಹಿಯಿಂದ ಸಿಕ್ಕಿತು ಅನ್ನೋದು ಖುಷಿಯ ವಿಚಾರ’ ಎಂದಿದ್ದಾರೆ ರಂಜನಿ.
ಅಟ್ಯಾಚ್ ಆಗಿಲ್ಲ
‘ನಾನು ಧಾರಾವಾಹಿಗೆ ಭಾವನಾತ್ಮಕವಾಗಿ ಅಟ್ಯಾಚ್ ಆಗಿರಲಿಲ್ಲ. ಪಾತ್ರಕ್ಕೆ ಅಟ್ಯಾಚ್ ಆಗಿದ್ದೆ. 60 ವರ್ಷದವರೆಗೆ ಮಾಡೋಕೆ ಇದು ಸರ್ಕಾರಿ ಉದ್ಯೋಗ ಅಲ್ಲ. ಒಂದು ಜರ್ನಿ ಮುಗಿದು, ಮತ್ತೊಂದು ಜರ್ನಿ ಆರಂಭ ಆಗಲೇಬೇಕು. ಎಲ್ಲಿ ಅನಗತ್ಯ ಭಾವನೆಗಳನ್ನು ಇಟ್ಟುಕೊಳ್ಳುತ್ತೀವೋ ಅಲ್ಲಿ ನಾವು ಮೂರ್ಖರಾಗುತ್ತೇವೆ. ಧಾರಾವಾಹಿ ಸರಿಯಾದ ಸಮಯಕ್ಕೆ ಪೂರ್ಣಗೊಳ್ಳುತ್ತಿರುವುದಕ್ಕೆ ಖುಷಿ ಇದೆ’ ಎಂಬುದು ರಂಜನಿ ಮಾತು.
ಹರ್ಷ-ಭುವಿನ ಜನ ಮರೆಯಬೇಕು
ಕಿರಣ್ ರಾಜ್ ಹಾಗೂ ರಂಜನಿ ರಾಘವನ್ ಸಿನಿಮಾ ಮಾಡಬೇಕು ಎಂಬುದು ಅನೇಕರ ಕೋರಿಕೆ. ಈ ವಿಚಾರವಾಗಿ ರಂಜನಿ ಮಾತನಾಡಿದ್ದಾರೆ. ‘ಸಿನಿಮಾ ಎಂದಾಗ ನಾನು ಸ್ಕ್ರಿಪ್ಟ್ನ ಮೊದಲು ನೋಡುತ್ತೇನೆ. ನಾವಿಬ್ಬರು ಸಿನಿಮಾ ಮಾಡೋದಾದರೆ ಹರ್ಷ ಹಾಗೂ ಭುವಿ ಪಾತ್ರವನ್ನು ಜನರು ಮೊದಲು ಮರೆಯಬೇಕು. ಅದಾದ ನಂತರ ನಾವು ತೆರೆಮೇಲೆ ಒಟ್ಟಾಗಿ ಬಂದರೆ ಕಥೆಗೆ ನ್ಯಾಯ ಸಿಗುತ್ತದೆ’ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ.
ಕಿರುತೆರೆಯಿಂದ ಒಂದು ಬ್ರೇಕ್
‘ಜನರು ನನ್ನ ಪಾತ್ರವನ್ನು ಮರೆಯಬೇಕು. ಹೀಗಾಗಿ ಕಿರುರೆಯಿಂದ ಒಂದು ಬ್ರೇಕ್ ತೆಗೆದುಕೊಳ್ಳಬೇಕು. ಅದಾದ ಬಳಿಕವೇ ಕಿರುತೆರೆ ಬಗ್ಗೆ ಆಲೋಚನೆ ಮಾಡುತ್ತೇನೆ. ನನ್ನ 2 ಆ್ಯಂಥಾಲಜಿ ಸಿನಿಮಾಗಳು ರಿಲೀಸ್ಗೆ ರೆಡಿ ಇವೆ. ನಟನೆಗೆ ಅವಕಾಶ ಇರುವ ಪಾತ್ರವನ್ನು ನಾನು ಒಪ್ಪಿಕೊಂಡು ಮಾಡಬೇಕು ಅನ್ನೋದು ನನ್ನ ಉದ್ದೇಶ. ಪಾತ್ರಗಳನ್ನು ಮಾಡುವವರಿಗೆ ಒಳ್ಳೆಯ ಕರಿಯರ್ ಇದೆ ಎಂದು ನನಗೆ ಅನ್ನಿಸುತ್ತಿದೆ’ ಎಂದಿದ್ದಾರೆ ಅವರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ