‘ಕನ್ನಡತಿ’ (Kannadathi Serial) ಧಾರಾವಾಹಿಯಲ್ಲಿ ಸಾನಿಯಾ ಮಾಡುವ ಕ್ರಿಮಿನಲ್ ಐಡಿಯಾಗಳು ಒಂದೆರಡಲ್ಲ. ಇದರಲ್ಲಿ ಬಹುತೇಕ ಐಡಿಯಾಗಳು ವಿಫಲಗೊಂಡಿದ್ದೇ ಹೆಚ್ಚು. ಈಗ ಶಾಲೆ ಕಟ್ಟಿಸಲು ಇಟ್ಟ ಜಾಗದಲ್ಲಿ ಕ್ಲಬ್ ಕಟ್ಟುವ ಆಲೋಚನೆಗೆ ಸಾನಿಯಾ ಮುಂದಾಗಿದ್ದಳು. ಇದರಿಂದ ಆಕೆಗೆ ತೀವ್ರ ಹಿನ್ನಡೆ ಉಂಟಾಗಿದೆ. ಭುವಿ ಆಡಿದ ಮಾತುಗಳು ಹಾಗೂ ಆಕೆ ತೆಗೆದುಕೊಂಡ ನಿರ್ಧಾರಗಳಿಂದ ಸಾನಿಯಾಗೆ ನಡುಕ ಹುಟ್ಟಿದೆ. ಅಧಿಕಾರ ಕಳೆದುಕೊಳ್ಳುವ ತಲೆಬಿಸಿ ಒಂದು ಕಡೆ ಆದರೆ, ಭುವಿ ಬೆಳೆದು ತನ್ನನ್ನೇ ಹಿಂದಿಕುತ್ತಾಳೆ ಎನ್ನುವ ಭಯ ಮತ್ತೊಂದು ಕಡೆ. ಈ ಎಲ್ಲಾ ವಿಚಾರಗಳಿಂದ ಸಾನಿಯಾಗೆ ಮಾತೇ ಬಾರದಂತೆ ಆಗಿದೆ.
‘ಕನ್ನಡತಿ’ ಧಾರಾವಾಹಿಯಲ್ಲಿ ಕಥಾ ನಾಯಕ ಹರ್ಷನನ್ನು ಭುವಿ ಮದುವೆ ಆಗಿದ್ದಾಳೆ. ಇಬ್ಬರೂ ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ. ಭುವಿಯ ಮತ್ತೊಂದು ಹೆಸರು ಸೌಪರ್ಣಿಕ. ಆಕೆಯ ಹೆಸರಿಗೆ ಸಂಪೂರ್ಣ ಆಸ್ತಿಯನ್ನು ರತ್ನಮಾಲಾ ಬರೆದಿದ್ದಾಳೆ ಎಂಬ ವಿಚಾರದಲ್ಲಿ ಸಾನಿಯಾಗೆ ಸಣ್ಣ ಅನುಮಾನ ಇದೆ. ಈಗ ಅದೇ ಹೆಸರಿನವಳನ್ನು ಸೊಸೆ ಮಾಡಿಕೊಂಡಿರುವುದರಿಂದ ಈ ಅನುಮಾನ ಮತ್ತಷ್ಟು ಹೆಚ್ಚಾಗಿದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಭುವಿಗೆ ರತ್ನಮಾಲಾ ಒಂದೊಂದೇ ಅಧಿಕಾರವನ್ನು ಹಸ್ತಾಂತರ ಮಾಡುತ್ತಾ ಬರುತ್ತಿದ್ದಾಳೆ.
ಮಾಲಾ ಸಂಸ್ಥೆಯ ವಾರ್ಷಿಕ ಸಭೆ ನಡೆಯುತ್ತಿತ್ತು. ಕಳೆದ 25 ವರ್ಷಗಳಿಂದ ಈ ಸಭೆಗೆ ರತ್ನಮಾಲಾ ತಪ್ಪದೆ ಹೊಗುತ್ತಿದ್ದಳು. ಆದರೆ, ಈ ಬಾರಿ ತನ್ನ ಪ್ರತಿನಿಧಿಯಾಗಿ ಭುವಿಯನ್ನು ಕಳುಹಿಸಿದ್ದಾಳೆ. ಆರಂಭದಲ್ಲಿ ತುಂಬಾನೇ ಆಲೋಚನೆ ಮಾಡಿದ್ದ ಭುವಿ ನಂತರ ಒಪ್ಪಿಕೊಂಡು ಈ ಸಭೆಗೆ ತೆರಳಿದ್ದಾಳೆ. ಅಂದುಕೊಂಡಂತೆ ಸಾನಿಯಾ ಈ ಬಗ್ಗೆ ಅಪಸ್ವರ ತೆಗೆದಿದ್ದಾಳೆ. ಆದರೆ, ಭುವಿ ಆಡಿದ ನೇರ ಮಾತುಗಳಿಂದ ಸಾನಿಯಾಗೆ ಕೊಂಚ ಹೆದರಿಕೆ ಆಗಿದೆ. ಹೀಗಾಗಿ ತಾನು ತಂದ ಫೈಲ್ ಅನ್ನು ಅಡಗಿಸಿಟ್ಟು ಕುಳಿತಿದ್ದಳು.
ಶಾಲೆ ಕಟ್ಟಲು ಇಟ್ಟ ಜಾಗದಲ್ಲಿ ಕ್ಲಬ್ ನಿರ್ಮಾಣ ಮಾಡಬೇಕು ಎಂಬುದು ಸಾನಿಯಾ ಮಾಡಿದ ಸಂಚಾಗಿತ್ತು. ಈ ಫೈಲ್ಗೆ ಸಹಿ ಹಾಕಿಸಿ, ಆ ಜಾಗವನ್ನು ಕ್ಲಬ್ ನಿರ್ಮಾಣಕ್ಕೆ ಮಂಜೂರು ಮಾಡಿಸಿಕೊಳ್ಳುವ ಆಲೋಚನೆಯಲ್ಲಿ ಸಾನಿಯಾ ಇದ್ದಳು. ಆದರೆ, ಈ ಸಂಚು ವಿಫಲವಾಗಿದೆ. ಭುವಿ ಫೈಲ್ ಕೇಳಿದ್ದರಿಂದ ಎಲ್ಲಾ ದಾಖಲೆಗಳನ್ನು ಆಕೆಗೆ ನೀಡಿದ್ದಾಳೆ ಸಾನಿಯಾ. ಇದರಿಂದ ಆಕೆ ಚಿಂತೆಗೆ ಒಳಗಾಗಿದ್ದಾಳೆ. ಫೈಲ್ನಲ್ಲಿರುವ ವಿಚಾರಗಳನ್ನು ಓದಿ ಭುವಿಗೆ ಶಾಕ್ ಆಗಿದೆ. ಈ ಫೈಲ್ಗೆ ರತ್ನಮಾಲಾ ಸಹಿ ಇಲ್ಲದೆ ಮಂಜೂರು ಸಾಧ್ಯವಿಲ್ಲ ಎಂದು ಭುವಿ ಗಟ್ಟಿಯಾಗಿ ಹೇಳಿದ್ದರಿಂದ ಸಾನಿಯಾ ಸೈಲೆಂಟ್ ಆಗಿದ್ದಾಳೆ. ಅಲ್ಲದೆ, ಈ ಯೋಜನೆಯನ್ನು ಕೈಬಿಟ್ಟಿದ್ದಾಳೆ.
ಮತ್ತೆ ಹೆಚ್ಚಾಯ್ತು ರತ್ನಮಾಲಾ ಅನಾರೋಗ್ಯ
ರತ್ನಮಾಲಾಗೆ ಈ ಮೊದಲು ತೀವ್ರವಾಗಿ ಅನಾರೋಗ್ಯ ಕಾಡಿತ್ತು. ಈ ಕಾರಣಕ್ಕೆ ಅಮೆರಿಕಕ್ಕೆ ತೆರಳಿ ಚಿಕಿತ್ಸೆ ಪಡೆದು ಬಂದಿದ್ದಳು. ಆದರೆ, ಚಿಕಿತ್ಸೆ ಅಷ್ಟಾಗಿ ಕೆಲಸ ಮಾಡಿಲ್ಲ. ಈಗ ಆಕೆಗೆ ಮರೆವಿನ ಕಾಯಿಲೆ ಶುರುವಾಗಿದೆ. ಅಷ್ಟೇ ಅಲ್ಲ, ಆಕೆಯ ಮೇಲೆ ದಾಳಿ ಮಾಡಿರುವ ವೈರಸ್ನಿಂದ ದೇಹದ ಮೇಲೂ ಪ್ರಭಾವ ಬೀರುತ್ತಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಈ ಆರೋಗ್ಯದ ಸಮಸ್ಯೆ ಮತ್ತೆ ಅತಿಯಾಗಿ ಕಾಡಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ. ಹೀಗಾಗಿ, ತಾನು ಸಾಯುವುದಕ್ಕೂ ಮೊದಲು ಆಸ್ತಿ ವಿಚಾರಗಳನ್ನು ಭುವಿಗೆ ಹೇಳಬೇಕು ಎಂಬ ಉದ್ದೇಶ ರತ್ನಮಾಲಾಗೆ ಇದೆ. ಆದರೆ, ಅದು ಸಾಧ್ಯವಾಗುತ್ತಿಲ್ಲ. ತಾನು ಶೀಘ್ರವೇ ಸಾಯಬಹುದು ಎಂಬ ಅನುಮಾನ ಅವಳನ್ನು ಅತಿಯಾಗಿ ಕಾಡುತ್ತಿದೆ.
ಶ್ರೀಲಕ್ಷ್ಮಿ ಎಚ್.