
ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಎಂಬ ಖ್ಯಾತಿ ಹೊಂದಿರುವ ‘ಬಿಗ್ ಬಾಸ್’ ಒಂದಷ್ಟು ವಿಘ್ನಗಳನ್ನು ಎದುರಿಸುತ್ತಿದೆ. ಕಳೆದ ಸೀಸನ್ನಲ್ಲಿ ಮಹಿಳಾ ಆಯೋಗದಿಂದ ಬಿಗ್ ಬಾಸ್ ಆಯೋಜಕರಿಗೆ ನೋಟಿಸ್ ನೀಡಲಾಗಿತ್ತು. ಈಗ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ (Pollution Control Board) ನೋಟಿಸ್ ಜಾರಿ ಮಾಡಲಾಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada 12) ಶೋ ಆಯೋಜಕರು ತಾಜ್ಯ ನೀರು ಸಂಸ್ಕರಣ ಘಟಕ ನಿರ್ಮಿಸಿಲ್ಲ ಎಂಬ ಕಾರಣಕ್ಕೆ ನೋಟಿಸ್ ನೀಡಲಾಗಿದೆ. ಬಿಗ್ ಬಾಸ್ ಮನೆಯನ್ನು ಬಂದ್ ಮಾಡುವಂತೆ ನೋಟಿಸ್ ಕೊಡಲಾಗಿದೆ.
ಬಿಡದಿ ಸಮೀಪ ಇರುವ ಜಾಲಿವುಡ್ ಸ್ಟುಡಿಯೋದಲ್ಲಿ ಈ ಬಾರಿಯ ಬಿಗ್ ಬಾಸ್ ಮನೆಯನ್ನು ನಿರ್ಮಿಸಲಾಗಿದೆ. ಒಟ್ಟು 19 ಜನರು ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳಾಗಿ ಎಂಟ್ರಿ ನೀಡಿದ್ದರು. ಬಳಿಕ ಇಬ್ಬರು ಎಲಿಮಿನೇಟ್ ಆಗಿದ್ದಾರೆ. ತೆರೆ ಹಿಂದೆ ನೂರಾರು ಮಂದಿ ತಂತ್ರಜ್ಞರು ಕೆಲಸ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದಿಂದ ಸಾಕಷ್ಟು ತಾಜ್ಯ ಉಂಟಾಗಲಿದೆ.
ಜಾಲಿವುಡ್ ಸ್ಟುಡಿಯೋದಲ್ಲಿ ಉಂಟಾಗುತ್ತಿರುವ ತಾಜ್ಯವನ್ನು ಸೂಕ್ತ ರೀತಿಯಲ್ಲಿ ಸಂಸ್ಕರಣೆ ಮತ್ತು ವಿಲೇವಾರಿ ಮಾಡಿಲ್ಲ ಎಂಬ ಆರೋಪ ಎದುರಾಗಿದೆ. ಅಲ್ಲದೇ, ಜಾಲಿವುಡ್ ಸ್ಡುಡಿಯೋ ನಡೆಸಲು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಸೂಕ್ತ ಅನುಮತಿ ಪಡೆದಿಲ್ಲ ಎನ್ನಲಾಗಿದೆ. ಈ ಕಾರಣದಿಂದ ಶೋ ಆಯೋಜಕರಿಗೆ ನೋಟಿಸ್ ನೀಡಲಾಗಿದ್ದು, ಬಂದ್ ಮಾಡುವಂತೆ ಸೂಚಿಸಲಾಗಿದೆ.
ಬಿಗ್ ಬಾಸ್ ಕಾರ್ಯಕ್ರಮ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋ ಒಂದು ಅಮ್ಯೂಸ್ಮೆಂಟ್ ಪಾರ್ಕ್. ಅದರಿಂದ ದೊಡ್ಡ ಪ್ರಮಾಣದ ತಾಜ್ಯ ನೀರು ಹೊರಬರುತ್ತಿದೆ. ಅದನ್ನು ಸರಿಯಾಗಿ ಸಂಸ್ಕರಿಸದೇ ಹೊರಗೆ ಬಿಡಲಾಗುತ್ತಿದೆ. ಅದರಿಂದಾಗಿ ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಪೇಪರ್ ತಟ್ಟೆ, ಲೋಟ, ಪ್ಲಾಸ್ಟಿಕ್ ತ್ಯಾಜ್ಯ ಮುಂತಾದ್ದನ್ನು ಕೂಡ ಅವೈಜ್ಞಾನಿಕವಾಗಿ ವಿಲೇವಾರಿ ಮಾಡಲಾಗಿದೆ ಎಂಬ ಆರೋಪ ಇದೆ.
ಇದನ್ನೂ ಓದಿ: ಬಿಗ್ ಬಾಸ್ನಲ್ಲಿ ಸ್ಪರ್ಧಿಸಿದ ಈ ಸ್ಪರ್ಧಿಗಳದ್ದು ಅಕಾಲಿಕ ಮರಣ
ಈ ಎಲ್ಲ ಕಾರಣಗಳಿಂದಾಗಿ ಜಾಲಿವುಡ್ ಸ್ಟುಡಿಯೋಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ಜಾರಿ ಮಾಡಲಾಗಿದೆ. ಇದರಿಂದಾಗಿ ಬಿಗ್ ಬಾಸ್ ಕಾರ್ಯಕ್ರಮಕ್ಕೆ ವಿಘ್ನ ಎದುರಾದಂತೆ ಆಗಿದೆ. ಒಂದು ವೇಳೆ ಸೂಕ್ತ ಕ್ರಮ ತೆಗೆದುಕೊಂಡರೆ ಶೋ ನಿಲ್ಲುವ ಸಾಧ್ಯತೆ ಇರುತ್ತದೆ. ಮಾಲಿನ್ಯ ನಿಯಂತ್ರಣ ಮಂಡಳಿಯ ನೋಟಿಸ್ಗೆ ಬಿಗ್ ಬಾಸ್ ಆಯೋಜಕರು ಏನು ಉತ್ತರ ನೀಡುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.