ಬಿಗ್ ಬಾಸ್ ಕ್ಯಾಪ್ಟನ್ ಆದ ಕಾವ್ಯಾ; ಗಿಲ್ಲಿ ಬಿಟ್ಟು ಆಡಲು ಇದು ಅಗ್ನಿ ಪರೀಕ್ಷೆ

12ನೇ ವಾರದಲ್ಲಿ ಬಿಗ್ ಬಾಸ್ ಕ್ಯಾಪ್ಟನ್ ಆಗಿರುವ ಕಾವ್ಯ ಶೈವ ಅವರ ಎದುರು ಸವಾಲು ಇದೆ. ಗಿಲ್ಲಿ ನಟನನ್ನು ಬಿಟ್ಟು ತಾನು ಆಟ ಆಡಬಲ್ಲೆ ಎಂಬುದನ್ನು ಕಾವ್ಯ ಅವರೀಗ ತೋರಿಸಬೇಕಿದೆ. ಗಿಲ್ಲಿಯನ್ನು ಪೂರ್ತಿಯಾಗಿ ದೂರ ತಳ್ಳಿದರೆ ಆಗಲೂ ಅವರ ಮೇಲೆ ಬೇರೆ ಅಭಿಪ್ರಾಯ ಬರಬಹುದು.

ಬಿಗ್ ಬಾಸ್ ಕ್ಯಾಪ್ಟನ್ ಆದ ಕಾವ್ಯಾ; ಗಿಲ್ಲಿ ಬಿಟ್ಟು ಆಡಲು ಇದು ಅಗ್ನಿ ಪರೀಕ್ಷೆ
Gilli Nata, Spandana, Kavya Shaiva

Updated on: Dec 19, 2025 | 10:57 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಇನ್ನೇನು ಕೆಲವೇ ವಾರಗಳಲ್ಲಿ ಮುಕ್ತಾಯ ಆಗಲಿದೆ. ಈ ಸೀಸನ್ ಆರಂಭ ಆದಾಗಿನಿಂದ ಗಿಲ್ಲಿ ನಟ (Gilli Nata) ಮತ್ತು ಕಾವ್ಯ ಶೈವ ಅವರು ಜೊತೆಯಾಗಿಯೇ ಇದ್ದಾರೆ. ಅವರಿಬ್ಬರ ನಡುವೆ ಜಗಳ ಬಂದಿದ್ದು ಕಡಿಮೆ. ಇದೇ ಕಾರಣಕ್ಕೆ ಅವರಿಬ್ಬರನ್ನು ಕೆಲವರು ಟೀಕೆ ಮಾಡಿದ್ದು ಕೂಡ ಇದೆ. ಕಾವ್ಯಾ ಅವರು ಯಾವಾಗಲೂ ಗಿಲ್ಲಿಯ ನೆರಳಲ್ಲಿ ಇರುತ್ತಾರೆ ಎಂಬುದು ಅನೇಕರು ಅಭಿಪ್ರಾಯ. ಆದರೆ ಈ ವಾರ ಕಾವ್ಯ ಶೈವ (Kavya Shaiva) ಅವರು ಬಿಗ್ ಬಾಸ್ ಮನೆಯ ಕ್ಯಾಪ್ಟನ್ ಆಗಿದ್ದಾರೆ. ಈಗಲೂ ಅವರು ಗಿಲ್ಲಿಯ ನೆರಳಲ್ಲೇ ಇರುತ್ತಾರಾ ಅಥವಾ ಸಂಪೂರ್ಣ ಸ್ವತಂತ್ರವಾಗಿ ಆಟ ಆಡುತ್ತಾರಾ ಎಂಬ ಅಗ್ನಿಪರೀಕ್ಷೆ ಎದುರಾಗಲಿದೆ.

ಈ ವಾರ ಬಿಗ್ ಬಾಸ್ ಮನೆಯ ಕ್ಯಾಪ್ಟೆನ್ಸಿ ಆಟಕ್ಕೆ ಅಂತಿಮವಾಗಿ ಸೂರಜ್ ಸಿಂಗ್ ಮತ್ತು ಕಾವ್ಯ ಶೈವ ನಡುವೆ ಪೈಪೋಟಿ ಏರ್ಪಟ್ಟಿತ್ತು. ಬಿಗ್ ಬಾಸ್ ಮನೆಯ ಸದಸ್ಯರ ವೋಟಿಂಗ್ ಆಧಾರದ ಮೇಲೆ ಕ್ಯಾಪ್ಟನ್ ಯಾರು ಎಂಬುದನ್ನು ಆಯ್ಕೆ ಮಾಡಲಾಯಿತು. ಸೂರಜ್ ಸಿಂಗ್ ಪರವಾಗಿ ಅಶ್ವಿನಿ ಗೌಡ ಮತ್ತು ರಾಶಿಕಾ ಶೆಟ್ಟಿ ಅವರು ಮಾತ್ರ ವೋಟ್ ಮಾಡಿದರು.

ಕಾವ್ಯ ಶೈವ ಪರವಾಗಿ ಗಿಲ್ಲಿ ನಟ, ರಜತ್, ಮಾಳು ನಿಪನಾಳ, ಮ್ಯೂಟೆಂಟ್ ರಘು, ಸ್ಪಂದನಾ, ಚೈತ್ರಾ ಕುಂದಾಪುರ, ಧನುಶ್ ಅವರು ವೋಟ್ ಮಾಡಿದ್ದಾರೆ. ಈ ವಾರ ಕಾವ್ಯ ಅವರು ಆಟ ಆಡಿದ ರೀತಿಯು ಬಹುತೇಕರಿಗೆ ಇಷ್ಟ ಆಗಿದೆ. ಅಲ್ಲದೇ ಅವರ ಕ್ಯಾಪ್ಟನ್ಸಿ ಹೇಗಿರುತ್ತೆ ಎಂಬುದನ್ನು ನೋಡಬೇಕಿದೆ. ಹಾಗಾಗಿ ಅವರಿಗೆ ಕ್ಯಾಪ್ಟನ್ ಆಗುವ ಅವಕಾಶವನ್ನು ನೀಡಲಾಯಿತು.

ಕ್ಯಾಪ್ಟನ್ ಆದಾಗ ಹೆಚ್ಚು ಜವಾಬ್ದಾರಿ ಇರುತ್ತದೆ. ಕಾವ್ಯ ಅವರು ತಮ್ಮ ಸ್ವಂತಿಕೆಯನ್ನು ತೋರಿಸಲು ಇದು ಉತ್ತಮ ಅವಕಾಶ ಆಗಿದೆ. ಈಗ ಅವರು ಗಿಲ್ಲಿಯ ಹಂಗು ಇಲ್ಲದೇ ತಮ್ಮ ಸಾಮರ್ಥ್ಯ ಪ್ರದರ್ಶಿಸಬೇಕಿದೆ. ಅವರ ಮೇಲೆ ಬಹುತೇಕರು ನಂಬಿಕೆ ಇಟ್ಟುಕೊಂಡು ವೋಟ್ ಮಾಡಿದ್ದಾರೆ. ಒಂದು ವೇಳೆ ಅವರು ಈ ನಂತರವೂ ಗಿಲ್ಲಿಯ ಜೊತೆಯೇ ಹೆಚ್ಚು ಕಾಲ ಕಳೆದರೆ ಸಿಕ್ಕ ಅವಕಾಶ ಕೈಚೆಲ್ಲಿದಂತೆ ಆಗುತ್ತದೆ. ಗಿಲ್ಲಿಯನ್ನು ಸಂಪೂರ್ಣ ಬಿಟ್ಟರೆ ಬಣ್ಣ ಬದಲಾಯಿಸಿದಂತೆ ಆಗುತ್ತದೆ. ಹಾಗಾಗಿ ಇದು ಕಾವ್ಯ ಪಾಲಿಗೆ ಅಗ್ನಿಪರೀಕ್ಷೆಯಂತಿದೆ.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಮೊಟ್ಟೆ ಕಳ್ಳತನ: ಗಿಲ್ಲಿಯನ್ನೇ ಯಾಮಾರಿಸಿದ ಕಳ್ಳ ಯಾರು ಗೊತ್ತಾ?

ಇನ್ನು, ಈ ವಾರದ ಕಳಪೆ ಪಟ್ಟ ಚೈತ್ರಾ ಕುಂದಾಪುರ ಅವರಿಗೆ ನೀಡಲಾಗಿದೆ. ಟಾಸ್ಕ್ ವೇಳೆ ಚೈತ್ರಾ ಕುಂದಾಪುರ ಅವರು ಅತಿರೇಕದಿಂದ ವರ್ತಿಸಿದ್ದರಿಂದ 9 ಸದಸ್ಯರು ಅವರಿಗೆ ಕಳಪೆ ನೀಡಿದ್ದಾರೆ. ಆರಂಭದಲ್ಲಿ ಉತ್ತಮವಾಗಿ ಟಾಸ್ಕ್ ಆಡಿ ಕ್ಯಾಪ್ಟನ್ ಆಗಿದ್ದ ಚೈತ್ರಾ ಅವರು ಈ ವಾರ ಕಳಪೆ ಪಟ್ಟ ಪಡೆದು ಜೈಲು ಸೇರುವಂತಾಗಿದೆ. ಮನೆಯವರ ಆಯ್ಕೆಯ ಪ್ರಕಾರ ಕಾವ್ಯ ಶೈವ ಅವರು ಉತ್ತಮ ಪಟ್ಟ ಪಡೆದಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.