ಕಿಚ್ಚನ ಚಪ್ಪಾಳೆ: ಸುದೀಪ್ ಇನ್​ಸ್ಟಾಗ್ರಾಮ್ ಪೋಸ್ಟ್ ತುಂಬ ಅಸಮಾಧಾನದ ಕಮೆಂಟ್ಸ್

ಧ್ರುವಂತ್ ಮತ್ತು ಅಶ್ವಿನಿ ಗೌಡ ಅವರಿಗೆ ಕಿಚ್ಚನ ಚಪ್ಪಾಳೆ ನೀಡಿದ್ದರಿಂದ ಬಹಳ ಅಸಮಾಧಾನ ವ್ಯಕ್ತವಾಗಿದೆ. ಖಾರವಾದ ಕಮೆಂಟ್​​ಗಳ ಮೂಲಕ ಬಿಗ್ ಬಾಸ್ ಶೋ ವೀಕ್ಷಕರು ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಗಿಲ್ಲಿ ಅವರಿಗೆ ಇಡೀ ಸೀಸನ್​​ನ ಚಪ್ಪಾಳೆ ಸಿಗಬೇಕಿತ್ತು ಎಂಬುದು ವೀಕ್ಷಕರ ಅನಿಸಿಕೆ ಆಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಕಿಚ್ಚನ ಚಪ್ಪಾಳೆ: ಸುದೀಪ್ ಇನ್​ಸ್ಟಾಗ್ರಾಮ್ ಪೋಸ್ಟ್ ತುಂಬ ಅಸಮಾಧಾನದ ಕಮೆಂಟ್ಸ್
Kichcha Sudeep

Updated on: Jan 12, 2026 | 4:44 PM

ಕಿಚ್ಚ ಸುದೀಪ್ (Kichcha Sudeep) ಅವರು ಸತತ 12 ಸೀಸನ್​​ಗಳಿಂದ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದಾರೆ. ಈ ಶೋ ನಿರೂಪಣೆ ಮಾಡುವುದು ಅಷ್ಟು ಸುಲಭ ಅಲ್ಲ. ಸುದೀಪ್ ಅವರ ನಿರೂಪಣೆ ಎಂದರೆ ಅಭಿಮಾನಿಗಳಿಗೆ ತುಂಬಾ ಇಷ್ಟ. ಸುದೀಪ್ ಅವರನ್ನು ನೋಡಬೇಕು ಎಂಬ ಕಾರಣದಿಂದಲೇ ವೀಕ್ಷಕರು ವೀಕೆಂಡ್​ನಲ್ಲಿ ‘ಬಿಗ್ ಬಾಸ್ ಕನ್ನಡ’ (Bigg Boss Kannada) ಸಂಚಿಕೆಗಳನ್ನು ನೋಡುತ್ತಾರೆ. ಆದರೆ ಕಳೆದ ವಾರ ಸಂಚಿಕೆ ನೋಡಿದ ಬಹುತೇಕ ವೀಕ್ಷಕರಿಗೆ ನಿರಾಸೆ ಆಗಿದೆ. ಅಶ್ವಿನಿ ಗೌಡ ಮತ್ತು ಧ್ರುವಂತ್ ಅವರಿಗೆ ‘ಕಿಚ್ಚನ ಚಪ್ಪಾಳೆ’ (Kicchana Chappale) ಸಿಕ್ಕಿದ್ದೇ ಈ ನಿರಾಸೆಗೆ ಕಾರಣ ಆಗಿದೆ.

ಇಡೀ ಸೀಸನ್​​ನ ಆಟವನ್ನು ಪರಿಗಣಿಸಿ ಧ್ರುವಂತ್ ಅವರಿಗೆ ಸುದೀಪ್ ಅವರು ಕಿಚ್ಚನ ಚಪ್ಪಾಳೆ ನೀಡಿದರು. ಅಲ್ಲದೇ, ಕಳೆದ ವಾರದ ಆಟವನ್ನು ಪರಿಗಣಿಸಿ ಅಶ್ವಿನಿ ಗೌಡ ಅವರಿಗೆ ಕಿಚ್ಚನ ಚಪ್ಪಾಳೆ ನೀಡಲಾಯಿತು. ಇದು ವೀಕ್ಷಕರಿಗೆ ಸರಿ ಎನಿಸಿಲ್ಲ. ಹಾಗಾಗಿ ವೀಕ್ಷಕರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಸುದೀಪ್ ಅವರ ಇನ್​ಸ್ಟಾಗ್ರಾಮ್​ ಪೋಸ್ಟ್​​ಗಳಿಗೆ ಕಮೆಂಟ್ ಮಾಡಿರುವ ವೀಕ್ಷಕರು, ‘ನಿಮ್ಮ ಚಪ್ಪಾಳೆ ಈಗ ಗೌರವ ಕಳೆದುಕೊಂಡಿದೆ’ ಎಂದಿದ್ದಾರೆ.

ಸುದೀಪ್ ಅವರ ಇನ್​ಸ್ಟಾಗ್ರಾಮ್ ಪೋಸ್ಟ್ ಬಹುತೇಕ ಇದೇ ರೀತಿಯ ಕಮೆಂಟ್​ಗಳಿಂದ ತುಂಬಿ ಹೋಗಿದೆ. ‘ನಾನು ನಿಮ್ಮ ದೊಡ್ಡ ಅಭಿಮಾನಿ. ಆದರೆ ನೀವು ನೀಡಿದ ಚಪ್ಪಾಳೆ ನ್ಯಾಯಸಮ್ಮತ ಆಗಿರಲಿಲ್ಲ’ ಎಂದು ವೀಕ್ಷಕರೊಬ್ಬರು ಕಮೆಂಟ್ ಮಾಡಿದ್ದಾರೆ. ‘ಇಡೀ ಸೀಸನ್ ಉತ್ತಮ ಮನರಂಜನೆ ನೀಡಿರುವುದು ಗಿಲ್ಲ. ಧ್ರುವಂತ್ ಅಲ್ಲ. ನೀವು ಸರಿಯಾಗಿ ಎಲ್ಲ ಸಂಚಿಕೆ ನೋಡಿಲ್ಲ’ ಎಂದು ಕೂಡ ವೀಕ್ಷಕರೊಬ್ಬರು ಕಮೆಂಟ್ ಮೂಲಕ ಆರೋಪಿಸಿದ್ದಾರೆ.

‘ಈ ರೀತಿ ಹೇಳುತ್ತಿರುವುದಕ್ಕೆ ಕ್ಷಮೆ ಇರಲಿ.. ಕಳೆದ ಸಂಚಿಕೆ ನಿರಾಸೆ ಮೂಡಿಸಿತು’, ‘ಗಿಲ್ಲಿಗೆ ಕೊಡಬೇಕಾದ ಚಪ್ಪಾಳೆಯನ್ನು ಯಾರಿಗೋ ಕೊಟ್ಟಿದ್ದೀರಿ’, ‘ಗಿಲ್ಲಿಗೆ ನಿಮ್ಮ ಚಪ್ಪಾಳೆ ಸಿಗದೇ ಇದ್ದರೆ ಏನಂತೆ, ಇಡೀ ಕರ್ನಾಟಕದ ಜನತೆಯ ಚಪ್ಪಾಳೆ ಅವರಿಗೆ ಸಿಕ್ಕಿದೆ’ ಎಂಬಿತ್ಯಾದಿ ಕಮೆಂಟ್​​ಗಳು ಕೂಡ ಬಂದಿವೆ. ಇವುಗಳಿಗೆ ಸುದೀಪ್ ಅವರು ಪ್ರತಿಕ್ರಿಯೆ ನೀಡುತ್ತಾರಾ ಎಂಬುದನ್ನು ಕಾದು ನೋಡಬೇಕು.

ಇದನ್ನೂ ಓದಿ: ಬನಿಯನ್ ಹಾಕಿದರೂ ರಾಜನಂತೆ ಬಾಳುತ್ತಿರುವ ಗಿಲ್ಲಿ ನಟ: ಗೆಲುವಿನ ಸೂಚನೆ ಕೊಟ್ಟ ಸುದೀಪ್

ಗಿಲ್ಲಿ ನಟ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋನಲ್ಲಿ ವೀಕ್ಷಕರಿಗೆ ಕಾಮಿಡಿ ಮೂಲಕ ಸಖತ್ ಮನರಂಜನೆ ನೀಡಿದ್ದಾರೆ. ಅವರಿಗೆ ಸಿಕ್ಕಾಪಟ್ಟೆ ಫ್ಯಾನ್ ಫಾಲೋಯಿಂಗ್ ಜಾಸ್ತಿ ಆಗಿದೆ. ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿ ಪರವಾಗಿ ಬರುತ್ತಿರುವ ಕಮೆಂಟ್​​ಗಳೇ ಅದಕ್ಕೆ ಸಾಕ್ಷಿ ಆಗಿದೆ. ಈ ಬಾರಿ ಅವರೇ ಗೆಲ್ಲಬೇಕು ಎಂಬುದು ಬಹುತೇಕ ವೀಕ್ಷಕರ ಆಶಯ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.