
ಕಳೆದ 12 ಸೀಸನ್ಗಳಿಂದ ಕಿಚ್ಚ ಸುದೀಪ್ ಅವರು ‘ಬಿಗ್ ಬಾಸ್ ಕನ್ನಡ’ (Bigg Boss Kannada) ರಿಯಾಲಿಟಿ ಶೋ ನಡೆಸಿಕೊಂಡು ಬರುತ್ತಿದ್ದಾರೆ. ಅವರ ನಿರೂಪಣೆಯ ಶೈಲಿಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಸುದೀಪ್ ಇಲ್ಲದೇ ಬಿಗ್ ಬಾಸ್ ಶೋ ಇಲ್ಲ ಎಂಬ ಅಭಿಪ್ರಾಯ ಎಲ್ಲರಿಗೂ ಇದೆ. ಪ್ರತಿ ವೀಕೆಂಡ್ ಬಂದರೆ ಸುದೀಪ್ ಅವರ ಸಲುವಾಗಿಯೇ ಬಿಗ್ ಬಾಸ್ ನೋಡುವ ಪ್ರೇಕ್ಷಕರ ವರ್ಗ ಇದೆ. ಆದರೆ ಇತ್ತೀಚಿನ ಸೀಸನ್ಗಳಲ್ಲಿ ಕೆಲವರು ಸುದೀಪ್ ಅವರ ನಿರೂಪಣೆಯಲ್ಲಿ ತಪ್ಪು ಕಂಡುಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಪ್ರತಿ ವಾರ ವಿಡಿಯೋ ಮಾಡಿ ಹರಿಬಿಡುತ್ತಿದ್ದಾರೆ. ಆ ಬಗ್ಗೆ ಕಿಚ್ಚ ಸುದೀಪ್ (Kichcha Sudeep) ಅವರು ಪ್ರತಿಕ್ರಿಯೆ ನೀಡಿದ್ದಾರೆ.
‘ಬಿಗ್ ಬಾಸ್ ಕಾರ್ಯಕ್ರಮವನ್ನು ಇಷ್ಟೊಂದು ಜನರು ನೋಡಲು ಆರಂಭಿಸಿದ್ದಾರೆ. ಅದಕ್ಕಾಗಿ ಖುಷಿ ಆಗುತ್ತಿದೆ. ಬಿಗ್ ಬಾಸ್ ಶೋನಲ್ಲಿನ ನನ್ನ ಸ್ಥಾನ ಅನೇಕರಿಗೆ ಸ್ಫೂರ್ತಿ ಆಗಿದೆ. ಅವರವರ ಮನೆಯಲ್ಲಿ ಒಂದು ವೇದಿಕೆ ಮಾಡಿಕೊಂಡಿದ್ದಾರೆ. ಅವರೆಲ್ಲ ಅಲ್ಲಿ ಕುಳಿತುಕೊಂಡು ಹೇಳುವುದನ್ನು ಕೇಳಿದರೆ ಖುಷಿ ಆಗುತ್ತದೆ. ಕೆಲವು ಸಮಯದಲ್ಲಿ ಅವರು ನೀಡುವ ವಿವರಣೆಗಳಲ್ಲಿ ಅರ್ಥ ಕೂಡ ಇರುತ್ತದೆ’ ಎಂದಿದ್ದಾರೆ ಕಿಚ್ಚ ಸುದೀಪ್.
‘ಎಲ್ಲವನ್ನೂ ನಾನು ನಿರ್ಲಕ್ಷಿಸಲ್ಲ. ಹಾಗಂತ ಎಲ್ಲರ ವಿಡಿಯೋವನ್ನು ನಾನು ನೋಡುತ್ತೇನೆ ಅಂತ ಹೇಳೋಕಾಗಲ್ಲ. ಹಾಗೆಯೇ ಒಂದು ರಾಜ್ಯಕ್ಕೆ ಮುಖ್ಯಮಂತ್ರಿ ಮೇಲೆ ದೂರು ಇರುವುದು. ಪ್ರಧಾನ ಮಂತ್ರಿ ಮೇಲೆಯೂ ಜನರಿಗೆ ದೂರು ಇರುತ್ತದೆ. ಆದರೆ ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಯಾಕೆ ಆ ರೀತಿ ನಿರ್ಧಾರ ತೆಗೆದುಕೊಂಡಿದ್ದಾರೆ ಎಂಬುದು ಅವರಿಗೆ ಮಾತ್ರ ಗೊತ್ತಿರುತ್ತದೆ. ಬಿಗ್ ಬಾಸ್ ವೇದಿಕೆ ಮೇಲೆ ಯಾರನ್ನಾದರೂ ತಂದುಬಿಟ್ಟರೆ ಮಾತ್ರ ಆ ಪರಿಸ್ಥಿತಿ ಏನು ಎಂಬುದು ಗೊತ್ತಾಗುತ್ತದೆ’ ಎಂದು ಸುದೀಪ್ ಹೇಳಿದ್ದಾರೆ.
‘ಇಡೀ ಕರ್ನಾಟಕ ನೋಡುತ್ತದೆ. ನಾನು ವೇದಿಕೆಯಲ್ಲಿ ನಿಂತಿರುತ್ತೇನೆ. ಎಲ್ಲರ ಜೀವನವನ್ನು ಕೈಯಲ್ಲಿ ಇಟ್ಟುಕೊಂಡು ನಿಂತಿರುತ್ತೇನೆ. ನನಗೆ ಯಾರೂ ಏನೂ ಹೇಳಿಕೊಡಲ್ಲ. ಸ್ಪರ್ಧಿಗಳಿಗೂ ನನಗೂ ಲೈವ್ ನಡೆಯುತ್ತಿರುತ್ತದೆ. ಅವರು ಕೇಳಿದ್ದಕ್ಕೆ ತಕ್ಷಣದಲ್ಲಿ ನಾನು ಸ್ಪಂದಿಸಬೇಕು. ಕೆಲವೊಮ್ಮೆ ನಾನು ಕೆಲವರಿಗೆ ಬೈಯ್ದಿರುತ್ತೇನೆ. ಯಾಕೆಂದರೆ, ಇವತ್ತು ಬೈಯ್ಯದೇ ಇದ್ದರೆ ಹಾಳಾಗಿ ಹೋಗುತ್ತಾರೆ. ಇನ್ನು ಕೆಲವರಿಗೆ ಬೈಯ್ಯುವ ಅವಶ್ಯಕತೆಯೇ ಇಲ್ಲ. ಯಾಕೆಂದರೆ ಅವರು ಅಲ್ಲಿಯವರೆಗೆ ಬರುವುದೇ ಇಲ್ಲ’ ಎಂದಿದ್ದಾರೆ ಕಿಚ್ಚ.
ಇದನ್ನೂ ಓದಿ: ಹುಬ್ಬಳ್ಳಿ ವೇದಿಕೆಯಲ್ಲಿ ಪೈರಸಿ ಪದ ಯಾಕೆ ಬಳಸಿಲ್ಲ? ಉತ್ತರ ನೀಡಿದ ಕಿಚ್ಚ ಸುದೀಪ್
‘ನಾನು ಯಾಕೆ ಪಕ್ಷಪಾತ ಮಾಡಬೇಕು? ನಾನು ಯಾಕೆ ಹೆದರಿಕೊಳ್ಳಬೇಕು? ಎಂಥೆಂಥವರನ್ನೂ ಪಳಗಿಸಿಕೊಂಡು ಬಂದವನು ನಾನು. ಸೋಶಿಯಲ್ ಮೀಡಿಯಾದಲ್ಲಿ ಮಾತನಾಡುವುದು ಅವರವರ ಅಭಿಪ್ರಾಯ. ಅಷ್ಟು ಪೇಜ್ ಓಪನ್ ಆಗಿದೆ ಎಂದರೆ ಬಿಗ್ ಬಾಸ್ ಬಗ್ಗೆ ಅವರಿಗೆ ಆ ಪ್ರೀತಿ ಇದೆ. ಪ್ರತಿ ಕ್ಷಣವನ್ನು ಜನರು ನೋಡುತ್ತಾರೆ. 14 ಟಿವಿಆರ್ ಸುಮ್ಮನೆ ಬರಲ್ಲ. ಇಷ್ಟು ದಿನ ನಾನು ಒಬ್ಬನೇ ಆ್ಯಂಕರ್ ಆಗಿದ್ದೆ. ಈಗ ತುಂಬಾ ಜನ ಆ್ಯಂಕರ್ ಆಗಿದ್ದಾರೆ. ವೇದಿಕೆ ಮೇಲೆ ಮಾತ್ರ ನಾನು ಒಬ್ಬನೆ. ಏನೇನೋ ಹೇಳುತ್ತಾ ಇರುತ್ತಾರೆ. ಅದು ಅವರ ಖುಷಿ. ಒಬ್ಬ ವೀಕ್ಷಕ ನಮಗೆ ಮುಖ್ಯ ಎಂದರೆ ಅವರು ಪ್ರತಿಕ್ರಿಯಿಸುವ ರೀತಿಯನ್ನು ಕೂಡ ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಅದನ್ನು ನಾವು ತುಂಬಾ ಗಂಭೀರವಾಗಿ ತೆಗೆದುಕೊಳ್ಳಬಾರದು. ಕೆಲವರು ತುಂಬಾ ಚೆನ್ನಾಗಿ ಮಾತನಾಡಿರುತ್ತಾರೆ’ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.