‘ತೆಲುಗು ಬಿಗ್ ಬಾಸ್’ ಟ್ರೋಫಿ ಎತ್ತಿದ ಎಲ್.ವಿ. ರೇವಂತ್; ಕನ್ನಡ ಚಿತ್ರರಂಗದ ಜತೆಗೂ ಇದೆ ನಂಟು
ಹೆಚ್ಚು ವೋಟ್ ಪಡೆದು ರೇವಂತ್ ಗೆದ್ದಿದ್ದಾರೆ. ಅವರಿಗೆ ಟ್ರೋಫಿ ಜತೆ 10 ಲಕ್ಷ ರೂಪಾಯಿ ನಗದು, 25 ಲಕ್ಷ ರೂಪಾಯಿ ಮೌಲ್ಯದ ಪ್ರಾಪರ್ಟಿ ಹಾಗೂ ಕಾರು ಬಹುಮಾನವಾಗಿ ಸಿಕ್ಕಿದೆ.
‘ಕನ್ನಡ ಬಿಗ್ ಬಾಸ್ ಸೀಸನ್ 9’ (BBK 9) ಆರಂಭ ಆಗುವ ಕೆಲವೇ ವಾರ ಮೊದಲು ‘ತೆಲುಗು ಬಿಗ್ ಬಾಸ್ ಸೀಸನ್ 6’ ಆರಂಭಗೊಂಡಿತ್ತು. ಅಕ್ಕಿನೇನಿ ನಾಗಾರ್ಜುನ (Akkineni Nagarjun) ಅವರು ಈ ಶೋ ನಡೆಸಿಕೊಟ್ಟಿದ್ದಾರೆ. 106 ದಿನಗಳನ್ನು ಪೂರ್ಣಗೊಳಿಸುವ ಮೂಲಕ ‘ತೆಲುಗು ಬಿಗ್ ಬಾಸ್ ಸೀಸನ್ 6’ ಪೂರ್ಣಗೊಂಡಿದೆ. ಗಾಯಕ ಎಲ್.ವಿ. ರೇವಂತ್ ಅವರು ಫಿನಾಲೆಯಲ್ಲಿ ಗೆದ್ದಿದ್ದಾರೆ. ಈ ಮೂಲಕ ಅವರು ಬಿಗ್ ಬಾಸ್ ಟ್ರೋಫಿ ಎತ್ತಿದ್ದಾರೆ.
ಭಾನುವಾರ (ಡಿಸೆಂಬರ್ 18) ಬಿಗ್ ಬಾಸ್ ಫಿನಾಲೆ ನಡೆದಿದೆ. ಎಲ್.ವಿ. ರೇವಂತ್, ಶ್ರೀಹಾನ್, ಆದಿ ರೆಡ್ಡಿ, ಕೀರ್ತಿ ಭಟ್ ಹಾಗೂ ರೋಹಿತ್ ಸಾಹ್ನಿ ಫಿನಾಲೆ ತಲುಪಿದ್ದರು. ಹೆಚ್ಚು ವೋಟ್ ಪಡೆದು ರೇವಂತ್ ಗೆದ್ದಿದ್ದಾರೆ. ಅವರಿಗೆ ಟ್ರೋಫಿ ಜತೆ 10 ಲಕ್ಷ ರೂಪಾಯಿ ನಗದು, 25 ಲಕ್ಷ ರೂಪಾಯಿ ಮೌಲ್ಯದ ಪ್ರಾಪರ್ಟಿ ಹಾಗೂ ಕಾರು ಬಹುಮಾನವಾಗಿ ಸಿಕ್ಕಿದೆ.
ಫಿನಾಲೆಯಲ್ಲಿ ‘ಧಮಾಕಾ’ ಜೋಡಿ ರವಿ ತೇಜಾ ಹಾಗೂ ಶ್ರೀಲೀಲಾ, ಹಿರಿಯ ನಟಿ ರಾಧಾ, ‘ಕಾರ್ತಿಕೇಯ 2’ ಖ್ಯಾತಿಯ ನಿಖಿಲ್ ಸಿದ್ದಾರ್ಥ್ ವಿಶೇಷ ಅತಿಥಿಗಳಾಗಿ ‘ಬಿಗ್ ಬಾಸ್’ ವೇದಿಕೆ ಏರಿದ್ದರು. ಬಾಲಿವುಡ್ ನಟಿ ಊರ್ವಶಿ ರೌಟೇಲಾ ವಿಶೇಷ ಹಾಡಿಗೆ ಹೆಜ್ಜೆ ಹಾಕಿ ಎಲ್ಲರನ್ನೂ ರಂಜಿಸಿದರು.
ತೆಲುಗಿನಲ್ಲಿ ‘ಬಿಗ್ ಬಾಸ್ ಒಟಿಟಿ’ ಶೋ ಪೂರ್ಣಗೊಳ್ಳುತ್ತಿದ್ದಂತೆ ಟಿವಿ ಸೀಸನ್ ಆರಂಭ ಆಯಿತು. 21 ಸ್ಪರ್ಧಿಗಳು ಮನೆ ಸೇರಿದ್ದರು. ಈ ಬಾರಿ ಶೋನ ಅಕ್ಕಿನೇನಿ ನಾಗಾರ್ಜುನ ಅವರೇ ನಡೆಸಿಕೊಟ್ಟಿದ್ದಾರೆ. ರೇವಂತ್ ಅವರಿಗೆ ಎಲ್ಲ ಕಡೆಗಳಿಂದ ಅಭಿನಂದನೆ ಸಲ್ಲಿಕೆ ಆಗುತ್ತಿದೆ.
ಯಾರು ಈ ರೇವಂತ್?
ರೇವಂತ್ ಅವರು ವೃತ್ತಿಯಲ್ಲಿ ಗಾಯಕ. ಅವರು ಕನ್ನಡ ಹಾಗೂ ತಮಿಳು ಹಾಡುಗಳನ್ನು ಹಾಡಿದ್ದಾರೆ. ‘ಇಂಡಿಯನ್ ಐಡಲ್ 9’ರ ವಿನ್ನರ್ ಕೂಡ ಹೌದು. ‘ಬಾಹುಬಲಿ 1’ ಚಿತ್ರದ ‘ಮನೋಹರಿ..’ ಹಾಡನ್ನು ಇವರೇ ಹಾಡಿದ್ದರು. ‘ಕಾಫಿ ವಿಥ್ ಮೈ ವೈಫ್’ ಸೇರಿ ಕೆಲವು ಕನ್ನಡದ ಸಿನಿಮಾದ ಹಾಡುಗಳಿಗೆ ಅವರು ಧ್ವನಿಯಾಗಿದ್ದಾರೆ.
Congratulations to #Revanth, the winner of #BiggBossTelugu6 ?#BBTeluguGrandFinale #BiggBossTelugu @iamnagarjuna @singerrevanth @StarMaa @DisneyPlusHSTel pic.twitter.com/DTDtEZ1cW3
— starmaa (@StarMaa) December 18, 2022
ಬದಲಾಗಲಿದ್ದಾರೆ ನಿರೂಪಕರು?
ಅಕ್ಕಿನೇನಿ ನಾಗಾರ್ಜುನ ಅವರು ತೆಲುಗು ಬಿಗ್ ಬಾಸ್ನ ಹಲವು ಸೀಸನ್ಗಳನ್ನು ನಿರೂಪಣೆ ಮಾಡಿದ್ದಾರೆ. ಅವರ ಅನುಪಸ್ಥಿತಿಯಲ್ಲಿ ಬೇರೆ ಆ್ಯಂಕರ್ಗಳು ಬಂದಿದ್ದೂ ಇದೆ. ಆದರೆ, ಅಕ್ಕಿನೇನಿ ನಾಗಾರ್ಜುನ ಅವರಿಗೆ ಹೆಚ್ಚು ಚಾರ್ಮ್ ಇರುವ ಕಾರಣ ಪ್ರತಿ ಬಾರಿ ಅವರಿಗೆ ಮಣೆ ಹಾಕುವ ಕೆಲಸ ಆಗುತ್ತಿದೆ. ಆದರೆ, ತೆಲುಗಿನಲ್ಲಿ ಬಿಗ್ ಬಾಸ್ಗೆ ಟಿಆರ್ಪಿ ಕುಸಿದಿದೆ.
ಬಿಗ್ ಬಾಸ್ ಮನೆ ಒಳಗೆ ಯಾವ ಸ್ಪರ್ಧಿಗಳು ಬರುತ್ತಾರೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಅದರ ಆಧಾರದ ಮೇಲೆ ಟಿಆರ್ಪಿ ನಿರ್ಧಾರ ಆಗುತ್ತದೆ. ಇನ್ನು ವಾರಾಂತ್ಯದ ಎಪಿಸೋಡ್ಗೆ ಹೆಚ್ಚಿನ ಟಿಆರ್ಪಿ ಸಿಗುತ್ತದೆ. ಆದರೆ, ತೆಲುಗಿನಲ್ಲಿ ಈ ಶೋಗೆ ಟಿಆರ್ಪಿ ಸಿಕ್ಕಿಲ್ಲ. ಇದು ಸ್ಟಾರ್ ಮಾ ವಾಹಿನಯ ಚಿಂತೆಗೆ ಕಾರಣ ಆಗಿದೆ.
ಮೂಲಗಳ ಪ್ರಕಾರ ಮುಂದಿನ ವರ್ಷದಿಂದ ಬೇರೆ ಚಾನೆಲ್ನಲ್ಲಿ ಬಿಗ್ ಬಾಸ್ ಪ್ರಸಾರ ಕಾಣಲಿದೆ. ಇದರ ಜತೆಗೆ ನಿರೂಪಕರನ್ನು ಬದಲಿಸಲು ಆಲೋಚನೆ ನಡೆದಿದೆ. ಅಕ್ಕಿನೇನಿ ನಾಗಾರ್ಜುನ ಬದಲಿಗೆ ಯಾರನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ