ಜನಪ್ರಿಯ ಟಿವಿ ಧಾರಾವಾಹಿ (Siral) ‘ಮಹಾಭಾರತ’ದಲ್ಲಿ (Mahabharath) ಶ್ರೀಕೃಷ್ಣನ ಪಾತ್ರದಲ್ಲಿ ನಟಿಸಿದ್ದ ನಿತೇಶ್ ಭಾರಧ್ವಜ್ ತಮ್ಮ ಮಾಜಿ ಪತ್ನಿಯ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ನಿತೇಶ್ ಭಾರಧ್ವಜ್, ಐಎಎಸ್ ಅಧಿಕಾರಿ ಸ್ಮಿತಾ ಅವರೊಟ್ಟಿಗೆ ವಿವಾಹವಾಗಿ ಬಳಿಕ ವಿಚ್ಛೇದನ ಪಡೆದುಕೊಂಡಿದ್ದಾರೆ. ತಮ್ಮ ಮಾಜಿ ಪತ್ನಿ ತಮಗೆ ಮಾನಸಿಕ ಹಿಂಸೆ ನೀಡುತ್ತಿದ್ದಾರೆಂದು ಆರೋಪಿಸಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಭೋಪಾಲದ ಪೊಲೀಸ್ ಆಯುಕ್ತರಿಗೆ ಮಾಜಿ ಪತ್ನಿ ವಿರುದ್ಧ ಲಿಖಿತ ದೂರು ನೀಡಿದ್ದಾರೆ.
ಮಾಜಿ ಪತ್ನಿ ತಮ್ಮನ್ನು ಮಾನಸಿಕವಾಗಿ ಹಿಂಸಿಸುತ್ತಿರುವುದಲ್ಲದೆ ತಮ್ಮ ಅವಳಿ ಜವಳಿ ಹೆಣ್ಣು ಮಕ್ಕಳನ್ನು ಭೇಟಿ ಆಗಲು ಸಹ ಅವಕಾಶ ಮಾಡಿಕೊಡುತ್ತಿಲ್ಲ ಎಂದು ಅವರು ದೂರಿನಲ್ಲಿ ಹೇಳಿದ್ದು, ದೂರು ಸ್ವೀಕರಿಸಿರುವ ಭೋಪಾಲ ಪೊಲೀಸ್ ಆಯುಕ್ತ ಹರಿನಾರಾಯಣಾಚಾರಿ ಮಿಶ್ರಾ ತನಿಖೆಗೆ ಆದೇಶಿಸಿದ್ದಾರೆ. ಎಡಿಸಿಪಿ ಶಾಲಿನಿ ದೀಕ್ಷಿತ್ ಅವರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಪ್ರಕರಣದ ಬಗ್ಗೆ ಮಾತನಾಡಿರುವ ಆಯುಕ್ತ ಹರಿನಾರಾಯಣಾಚಾರಿ ಮಿಶ್ರಾ, ‘ನಿತೀಶ್ ಭಾರಧ್ವಜ್ ಅವರಿಂದ ದೂರು ಸ್ವೀಕರಿಸಲಾಗಿದೆ. ಪ್ರಕರಣದ ಸತ್ಯಾಸತ್ಯತೆಗಳ ಬಗ್ಗೆ ತನಿಖೆ ಚಾಲ್ತಿಯಲ್ಲಿದೆ’ ಎಂದಿದ್ದಾರೆ.
ಇದನ್ನೂ ಓದಿ:ಕಿರುತೆರೆ ನಟ ರವಿಕಿರಣ್ ವಿರುದ್ಧ ಕ್ಲಬ್ನಲ್ಲಿ ಅವ್ಯವಹಾರ ಆರೋಪ; ಸದಸ್ಯರಿಂದ ದೂರು
ಟಿವಿ ಲೋಕದ ಅತ್ಯಂತ ಜನಪ್ರಿಯ ಧಾರಾವಾಹಿ ಆಗಿದ್ದ ‘ಮಹಾಭಾರತ’ದಲ್ಲಿ ನಿತೀಶ್ ಭಾರಧ್ವಾಜ್ ಶ್ರೀಕೃಷ್ಣನ ಪಾತ್ರದಲ್ಲಿ ನಟಿಸಿದ್ದರು. ಆ ಪಾತ್ರದ ಮೂಲಕ ಭಾರಿ ಜನಪ್ರಿಯತೆಯನ್ನು ಅವರು ಗಳಿಸಿದ್ದರು. ನಿತೀಶ್ ಹಾಗೂ ಐಎಎಸ್ ಅಧಿಕಾರಿ ಸ್ಮಿತಾ ಪರಸ್ಪರ ಪ್ರೀತಿಸಿ 2009 ರಲ್ಲಿ ಮಧ್ಯ ಪ್ರದೇಶದಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದರು. 12 ವರ್ಷಗಳ ದಾಂಪತ್ಯದ ಬಳಿಕ 2019ರಲ್ಲಿ ಈ ಇಬ್ಬರೂ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು, 2022ರಲ್ಲಿ ಇವರಿಗೆ ವಿಚ್ಛೇದನ ದೊರಕಿತು.
ಸ್ಮಿತಾ ಹಾಗೂ ನಿತೀಶ್ ಭಾರಧ್ವಜ್ಗೆ ಇಬ್ಬರು ಪುತ್ರಿಯರಿದ್ದಾರೆ. ಅವಳಿ-ಜವಳಿ ಆಗಿರುವ ಮಕ್ಕಳಿಬ್ಬರಿಗೂ 11 ವರ್ಷ ವಯಸ್ಸು. ವಿಚ್ಛೇದನದ ಬಳಿಕ ಸ್ಮಿತಾ ಮಕ್ಕಳೊಟ್ಟಿಗೆ ಇಂಧೋರ್ನಲ್ಲಿ ನೆಲೆಸಿದ್ದಾರೆ. ಇದೀಗ ನಿತೀಶ್ ಭಾರಧ್ವಜ್ರ ದೂರಿನ ಪ್ರಕಾರ, ತಮ್ಮ ಮಾಜಿ ಪತ್ನಿ ಸ್ಮಿತಾ ತಮ್ಮ ಮಕ್ಕಳನ್ನು ಭೇಟಿ ಆಗಲು ಅವಕಾಶ ನೀಡುತ್ತಿಲ್ಲವಂತೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ