‘ಮತ್ತೆ ಮನ್ವಂತರ’ದ ಮುಖಾಂತರ ಕಿರುತೆರೆಗೆ ಮರಳಲಿದ್ದಾರೆ ಮಾಳವಿಕಾ ಅವಿನಾಶ್

| Updated By: shivaprasad.hs

Updated on: Aug 17, 2021 | 6:19 PM

Malavika Avinash: ಮತ್ತೆ ಮನ್ವಂತರ ಧಾರವಾಹಿಯ ಮುಖಾಂತರ ಮಾಳವಿಕಾ ಅವಿನಾಶ್ ಕಿರುತೆರೆಗೆ ವಾಪಾಸಗಲಿದ್ದಾರೆ.

‘ಮತ್ತೆ ಮನ್ವಂತರ’ದ ಮುಖಾಂತರ ಕಿರುತೆರೆಗೆ ಮರಳಲಿದ್ದಾರೆ ಮಾಳವಿಕಾ ಅವಿನಾಶ್
ಮಾಳವಿಕಾ ಅವಿನಾಶ್
Follow us on

ಕನ್ನಡದ ಕಿರುತೆರೆ ಹಾಗೂ ಬೆಳ್ಳಿತೆರೆಯಲ್ಲಿ ತಮ್ಮದೇ ಛಾಪು ಮೂಡಿಸಿರುವ ನಟಿ, ರಾಜಕಾರಣಿ ಮಾಳವಿಕಾ ಅವಿನಾಶ್ ‘ಮತ್ತೆ ಮನ್ವಂತರ’ದ ಮೂಲಕ ಕಿರುತೆರೆಗೆ ವಾಪಾಸಾಗಲಿದ್ದಾರೆ. ಕಿರುತೆರೆಯ ಖ್ಯಾತ ನಿರ್ದೇಶಕ ಟಿ.ಎನ್.ಸೀತಾರಾಮ್ ನಿರ್ದೇಶನದ ಮತ್ತೆ ಮನ್ವಂತರ ಧಾರವಾಹಿ ಇತ್ತೀಚೆಗಷ್ಟೇ ಮುಹೂರ್ತ ಮುಗಿಸಿ ಸೆಟ್ಟೇರಿತ್ತು. ಧಾರವಾಹಿಯ ಚಿತ್ರೀಕರಣ ಚಾನಲ್ ಅನುಮತಿ ನೀಡಿದ ನಂತರ ಪ್ರಾರಂಭ ಮಾಡಲಾಗುವುದು ಎಂದು ತಿಳಿಸಿರುವ ಸೀತಾರಾಮ್, ಈಗ ನಡೆಯುತ್ತಿರುವುದು ಪೈಲಟ್ ಎಪಿಸೋಡ್ ಎಂದು ಹೇಳಿದ್ದಾರೆ.

‘ಮನ್ವಂತರ’ ಧಾರವಾಹಿಯಲ್ಲಿನ ಮಾಳವಿಕಾ ಪಾತ್ರ ಅಪಾರ ಜನಮೆಚ್ಚುಗೆ ಗಳಿಸಿತ್ತು. ಈಗ ಮತ್ತೆ ಮನ್ವಂತರದಲ್ಲೂ ಅವರು ಬಣ್ಣ ಹಚ್ಚಲಿದ್ದಾರೆ. ಮೇಧಾ ವಿದ್ಯಾಭೂಷಣ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ನಿರಂಜನ್‌ ದೇಶಪಾಂಡೆ, ಅಜಿತ್‌ ಹಂದೆ, ಮೇಘಾ ನಾಡಿಗೇರ್‌, ಪ್ರಶಾಂತ್‌ ಶೆಟ್ಟಿ (ಹೊಸ ಪರಿಚಯ) ಮೊದಲಾದವರು ತಾರಾಗಣದಲ್ಲಿದ್ದಾರೆ. ಧಾರವಾಹಿಗೆ ಈಗಾಗಲೇ ಕವಿ ಎಚ್‌ಎಸ್‌ ವೆಂಕಟೇಶಮೂರ್ತಿ ಟೈಟಲ್‌ ಸಾಂಗ್‌ ಬರೆದಿದ್ದು, ಪ್ರವೀಣ್‌ ರಾವ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ವಿಜಯಪ್ರಕಾಶ್‌ ಹಾಡಲಿದ್ದು, ಶೀಘ್ರದಲ್ಲೇ ರೆಕಾರ್ಡಿಂಗ್‌ ನಡೆಯಲಿದೆ ಎಂದು ತಂಡ ತಿಳಿಸಿದೆ.

ಮತ್ತೆ ಮನ್ವಂತರ ಧಾರವಾಹಿಯು ಸಂಗೀತ ಪ್ರಧಾನವಾಗಿರಲಿದೆ ಎಂಬ ಸುಳಿವು ಈಗಾಗಲೇ ಲಭ್ಯವಾಗಿದೆ. ಧಾರವಾಹಿಯಲ್ಲಿ ಮುಖ್ಯ ಪಾತ್ರ ನಿರ್ವಹಿಸುತ್ತಿರುವ ಮೇಧಾ ವಿದ್ಯಾಭೂಷಣ, ಸಂಗೀತದ ಹಿನ್ನೆಲೆಯುಳ್ಳವರಾಗಿದ್ದು, ಖ್ಯಾತ ಗಾಯಕ ವಿದ್ಯಾಭೂಷಣ ಅವರ ಪುತ್ರಿಯಾಗಿದ್ದಾರೆ. ‘ಮತ್ತೆ ಮನ್ವಂತರ’ವು ಸವಾಲುಗಳನ್ನು ಎದುರಿಸಿ, ಗುರಿಯತ್ತ ಮುನ್ನುಗ್ಗುವ ಯುವತಿಯ ಕತೆ ಎಂದು ಈ ಹಿಂದೆ ಮೇಧಾ ಟಿವಿ9ನೊಂದಿಗೆ ಮಾತನಾಡಿದಾಗ ಮಾಹಿತಿ ಹಂಚಿಕೊಂಡಿದ್ದರು. ಈ ಧಾರವಾಹಿಯೂ ಟಿ.ಎನ್​.ಎಸ್. ಅವರ ಈ ಹಿಂದಿನ ಧಾರವಾಹಿಗಳಂತೆ ಜನರಿಗೆ ಪ್ರಿಯವಾಗಲಿದೆ ಎಂಬ ನಂಬಿಕೆಯನ್ನು ಅವರು ವ್ಯಕ್ತಪಡಿಸಿದ್ದರು.

ಭೂಮಿಕಾ ನಿರ್ಮಾಣ ಸಂಸ್ಥೆಯ ಮೂಲಕ ನಿರ್ಮಾಣವಾಗುತ್ತಿರುವ ಈ ಧಾರವಾಹಿ, ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಟಿ.ಎನ್.ಸೀತಾರಾಮ್ ಕೊನೆಯದಾಗಿ ‘ಮಗಳು ಜಾನಕಿ’ ಧಾರವಾಹಿಯನ್ನು ನಿರ್ದೇಶಿಸಿದ್ದರು. ಈ ಧಾರವಾಹಿ ಕಾರಣಾಂತರಗಳಿಂದ ನಿಂತಿತ್ತು.

ಇದನ್ನೂ ಓದಿ:

ಸಾಹಸ ದೃಶ್ಯಗಳ ಚಿತ್ರೀಕರಣಕ್ಕೆ ಹೊಸ ನಿಯಮಗಳ ಪಟ್ಟಿ ಸಿದ್ಧ; ಪಾಲಿಸಲೇ ಬೇಕಾದ ನಿಯಮಗಳ ಪಟ್ಟಿ ಇಲ್ಲಿದೆ

ಸುದೀಪ್​ ನಿರ್ದೇಶನದಲ್ಲಿ ಶಿವಣ್ಣ ನಟನೆ; ಹೊಸ ಸಿನಿಮಾ ಬಗ್ಗೆ ವೇದಿಕೆ ಮೇಲೆ ‘ಹ್ಯಾಟ್ರಿಕ್​ ಹೀರೋ’ ಮಾತು

(Malavika Avinash will be playing prominent role in Matte Manvantara)