ಮತ್ತೆ ಬಿಗ್ ಬಾಸ್ ಮನೆಗೆ ಬಂದು ಉರುಳು ಸೇವೆ ಮಾಡಿದ ಮಲ್ಲಮ್ಮ: ಕಾರಣ ಏನು?

ಮಾತಿನ ಮಲ್ಲಮ್ಮ ಅವರು ಯಾವುದೇ ಸೂಚನೆ ಇಲ್ಲದೇ ಬಿಗ್ ಬಾಸ್ ಮನೆಗೆ ಮರಳಿ ಬಂದಿದ್ದಾರೆ. ಅವರು ದೊಡ್ಮನೆ ಒಳಗೆ ಕಾಲಿಟ್ಟ ಕೂಡಲೇ ತಣ್ಣಿರಲ್ಲಿ ಸ್ನಾನ ಮಾಡಿ, ದೇವರಿಗೆ ಪೂಜೆ ನೆರವೇರಿಸಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ ಉರುಳು ಸೇವೆ ಮಾಡಿದರು. ಹರಕೆ ತೀರಿಸುವ ಸಲುವಾಗಿ ಅವರು ಹೀಗೆ ಮಾಡಿದ್ದಾರೆ.

ಮತ್ತೆ ಬಿಗ್ ಬಾಸ್ ಮನೆಗೆ ಬಂದು ಉರುಳು ಸೇವೆ ಮಾಡಿದ ಮಲ್ಲಮ್ಮ: ಕಾರಣ ಏನು?
Mallamma

Updated on: Jan 12, 2026 | 10:39 PM

ಸೋಶಿಯಲ್ ಮೀಡಿಯಾ ಮೂಲಕ ಫೇಮಸ್ ಆಗಿ, ನಂತರ ‘ಬಿಗ್ ಬಾಸ್ ಕನ್ನಡ ಸೀಸನ್ 12’ (Bigg Boss Kannada Season 12) ಶೋಗೆ ಬಂದಿದ್ದ ಮಲ್ಲಮ್ಮ ಅವರು ಜನಪ್ರಿಯತೆ ಹೆಚ್ಚಿಸಿಕೊಂಡರು. ಒಂದಷ್ಟು ವಾರಗಳ ಬಳಿಕ ಅವರು ಎಲಿಮಿನೇಟ್ ಆದರು. ಆದರೆ ಕೊನೆಯ ವಾರದಲ್ಲಿ ಮಲ್ಲಮ್ಮ (Mallamma) ಅವರು ಮತ್ತೆ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಅವರು ಬಂದಿದ್ದು ಎಲ್ಲರಿಗೂ ಖುಷಿ ಆಗಿದೆ. ಆದರೆ ಮಲ್ಲಮ್ಮ ಅವರು ಏಕಾಏಕಿ ಬಿಗ್ ಬಾಸ್ ಮನೆಗೆ ಬಂದು ಉರುಳು ಸೇವೆ (Urulu Seve) ಮಾಡಿದ್ದಾರೆ! ಯಾಕೆ ಎಂದು ಎಲ್ಲರಿಗೂ ಅಚ್ಚರಿ ಆಗಿದೆ. ಬಳಿಕ ಸ್ವತಃ ಮಲ್ಲಮ್ಮ ಅವರು ಕಾರಣ ತಿಳಿಸಿದರು.

ಮಲ್ಲಮ್ಮ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಒಂದು ಹರಕೆ ಮಾಡಿಕೊಂಡಿದ್ದರು. ‘ಸೊಸೆಗೆ ನಾರ್ಮಲ್ ಹೆರಿಗೆ ಆಗಬೇಕು’ ಎಂದು ಅವರು ಬೇಡಿಕೊಂಡಿದ್ದರು. ಮಲ್ಲಮ್ಮ ಅವರ ಕೋರಿಕೆ ಈಡೇರಿದೆ. ಅವರ ಪ್ರಾರ್ಥನೆಯಂತೆಯೇ ಸೊಸೆಗೆ ನಾರ್ಮಲ್ ಡೆಲಿವರಿ ಆಗಿದೆ. ಅದಕ್ಕಾಗಿ ಅವರು ಬಿಗ್ ಬಾಸ್ ಮನೆಗೆ ಮರಳಿಬಂದು ಹರಕೆ ತೀರಿಸಿದ್ದಾರೆ.

‘ನಾವು ಬಡವರು. ಕೆಲಸ ಮಾಡಬೇಕಲ್ಲವಾ? ಹಾಗಾಗಿ ನಾರ್ಮಲ್ ಡೆಲಿವರಿ ಆಗಲಿ ಅಂತ ಬೇಡಿಕೊಂಡಿದ್ದೆ. ದೇವರು ನಮ್ಮ ಆಸೆ ಈಡೇರಿಸಿದ ಮೇಲೆ ನಾವು ಹರಕೆ ತೀರಿಸಬೇಕಲ್ಲವೇ’ ಎಂದು ಮಲ್ಲಮ್ಮ ಅವರು ಹೇಳಿದ್ದಾರೆ. ಈ ಕ್ಷಣದಲ್ಲಿ ಎಲ್ಲರೂ ಮಲ್ಲಮ್ಮ ಅವರಿಗೆ ವಿಶ್ ಮಾಡಿದರು. ಆದರೆ ಮಲ್ಲಮ್ಮ ಯಾಕೋ ಮೊದಲಿನ ರೀತಿ ಮಾತನಾಡುತ್ತಿಲ್ಲ ಎಂದು ಧ್ರುವಂತ್ ಹೇಳಿದರು.

ಮೊಮ್ಮಗನಿಗೆ ಯಾವ ಹೆಸರು ಇಡಬೇಕು ಎಂಬುದನ್ನು ಬಿಗ್ ಬಾಸ್ ಮನೆಯಲ್ಲೇ ನಿರ್ಧರಿಸಲಾಯಿತು. ಗಣೇಶ ಎಂದು ಮೊಮ್ಮಗನಿಗೆ ಬಿಗ್ ಬಾಸ್ ಮನೆಯಲ್ಲಿ ನಾಮಕರಣ ಮಾಡಲಾಯಿತು. ಇದರಿಂದ ಮಲ್ಲಮ್ಮ ಖುಷಿಪಟ್ಟರು. ತಾವು ಎಂದೆಂದಿಗೂ ಬಿಗ್ ಬಾಸ್ ಮನೆಗೆ ಚಿರಋಣಿ ಆಗಿರುವುದಾಗಿ ಮಲ್ಲಮ್ಮ ಅವರು ಹೇಳಿದರು. ಸ್ವಲ್ಪ ಹೊತ್ತು ಬಿಗ್ ಬಾಸ್ ಮನೆಯಲ್ಲಿ ಇದ್ದ ಅವರು ನಂತರ ಹೊರಬಂದರು.

ಇದನ್ನೂ ಓದಿ: ಈ ಬಾರಿ ಬಿಗ್​​ಬಾಸ್ ಯಾರು ಗೆಲ್ಲಬೇಕು? ಮಲ್ಲಮ್ಮನ ಫೇವರೇಟ್ ಸ್ಪರ್ಧಿ ಯಾರು?

ಕೊನೆಯ ವಾರದಲ್ಲಿ ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿ, ಕಾವ್ಯ ಶೈವ, ಗಿಲ್ಲಿ ನಟ, ಧ್ರುವಂತ್, ಮ್ಯೂಟೆಂಟ್ ರಘು ಅವರು ಪೈಪೋಟಿ ನೀಡುತ್ತಿದ್ದಾರೆ. ಈ ವಾರ ಒಬ್ಬರು ಮಿಡ್ ವೀಕ್ ಎಲಿಮಿನೇಷನ್ ಮೂಲಕ ಔಟ್ ಆಗಲಿದ್ದಾರೆ. ಧನುಷ್ ಅವರು ನೇರವಾಗಿ ಫಿನಾಲೆ ತಲುಪಿದ್ದಾರೆ. ಅಂತಿಮವಾಗಿ ಯಾರು ವಿನ್ ಆಗುತ್ತಾರೆ ಎಂಬುದನ್ನು ನೋಡುವ ಕೌತುಕ ನಿರ್ಮಾಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.