
ತೆಲುಗು ಬಿಗ್ಬಾಸ್ (Bigg Boss) ಮನೆಯಲ್ಲಿ ವಾರವೆಲ್ಲ ಸಂಜನಾ ಗಲ್ರಾನಿಯದ್ದೇ ಚರ್ಚೆ. ಸಂಜನಾ ಗಲ್ರಾನಿ ತೆಲುಗು ಬಿಗ್ ಬಾಸ್ ಸ್ಪರ್ಧಿಯಾಗಿ ಈ ವರೆಗೆ ಚೆನ್ನಾಗಿಯೇ ಆಡಿಕೊಂಡು ಬಂದಿದ್ದಾರೆ. ಹಲವರೊಟ್ಟಿಗೆ ಜಗಳ ಮಾಡಿದ್ದಾರೆ. ಕೆಲವರೊಟ್ಟಿಗೆ ಗೆಳೆತನ ಮಾಡಿದ್ದಾರೆ. ಟಾಸ್ಕ್ಗಳನ್ನು ಆಡಿದ್ದಾರೆ, ಆಡಿಸಿದ್ದಾರೆ. ಹೇಗೋ ಒಟ್ಟಾರೆ ಸುಮಾರು 80ಕ್ಕೂ ಹೆಚ್ಚು ದಿನಗಳನ್ನು ಬಿಗ್ಬಾಸ್ ಮನೆಯಲ್ಲಿ ಕಳೆದಿದ್ದಾರೆ. ಆದರೆ ಈ ವಾರ ಸಂಜನಾ, ತಮ್ಮ ಸಹಸ್ಪರ್ಧಿ ಬಗ್ಗೆ ಮಾಡಿದ್ದ ಕಮೆಂಟ್ ಭಾರಿ ಚರ್ಚೆಯನ್ನೇ ಹುಟ್ಟುಹಾಕಿತ್ತು. ವೀಕೆಂಡ್ನಲ್ಲಿ ನಾಗಾರ್ಜುನ ಅವರು ಈ ಬಗ್ಗೆ ಕಠಿಣ ವಿಚಾರಣೆ ನಡೆಸುವ ಸುಳಿವು ಮೊದಲೇ ಸಿಕ್ಕಿತ್ತು. ಅದರಂತೆ ನಾಗಾರ್ಜುನ ಅವರು ಸಂಜನಾಗೆ ಸಖತ್ ಕ್ಲಾಸ್ ತೆಗೆದಿದ್ದಾರೆ. ಮಾತ್ರವಲ್ಲದೆ ಸಂಜನಾ ಹೊರ ಜಗತ್ತಿನಲ್ಲಿ ಮಾಡಿದ ‘ತಪ್ಪಿ’ನ ಬಗ್ಗೆಯೂ ಉಲ್ಲೇಖ ಆಗಿದೆ.
ಸಂಜನಾ ಅವರು ಸಹ ಸ್ಪರ್ಧಿಗಳಾದ ರಿತು ಮತ್ತು ಡಿಮನ್ ಪವನ್ ಬಗ್ಗೆ ಅನುಚಿತವಾದ ಹೇಳಿಕೆ ನೀಡಿದ್ದರು. ಅವರಿಬ್ಬರು ವರ್ತಿಸುವ ರೀತಿ ಅಶ್ಲೀಲವಾಗಿರುತ್ತದೆ ಎಂಬರ್ಥ ಬರುವಂತೆ ಸಂಜನಾ ಹೇಳಿದ್ದರು. ನೀವಿಬ್ಬರು ಮಾಡುವುದನ್ನು ಕಣ್ಣಿಂದ ನೋಡಲಾಗುವುದಿಲ್ಲ ಎಂದೆಲ್ಲ ಹೇಳಿದ್ದರು. ಇದು ಮನೆಯಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ರಿತು, ಪವನ್ ಮಾತ್ರವಲ್ಲದೆ ಸಂಜನಾಗೆ ಆಪ್ತರಾಗಿದ್ದ ಕೆಲವರು ಸಹ ಸಂಜನಾ ಹೇಳಿಕೆಯನ್ನು ಖಂಡಿಸಿದ್ದರು. ಆದರೆ ಸಂಜನಾ ತಮ್ಮ ಹೇಳಿಕೆಯಿಂದ ಹಿಂದೆ ಸರಿದಿರಲಿಲ್ಲ. ಹಾಗಾಗಿ ವೀಕೆಂಡ್ ಎಪಿಸೋಡ್ ಮೇಲೆ ಎಲ್ಲರ ಕಣ್ಣು ನೆಟ್ಟಿತ್ತು.
ನಿರೀಕ್ಷಿಸಿದಂತೆಯೇ ನಾಗಾರ್ಜುನ ಸಹ ಅದೇ ವಿಷಯವನ್ನು ಚರ್ಚೆಗೆ ಎತ್ತಿಕೊಂಡರು. ಆಗಲೂ ಸಹ ಸಂಜನಾ ಜಾರಿಕೆ ಉತ್ತರಗಳನ್ನು ನೀಡಿದರು. ನಾನು ಅವರಿಬ್ಬರ ಆಪ್ತತೆಯನ್ನು ನನಗೆ ನೋಡಲು ಆಗುವುದಿಲ್ಲ ಎಂದಷ್ಟೆ ಹೇಳಿದ್ದೇನೆ ಬೇರೇನು ಹೇಳಿಲ್ಲ ಎಂದರು ಆದರೆ ವಿಡಿಯೋ ಹಾಕಿ ಸಂಜನಾ ಹೇಳಿದ್ದೇನು ಎಂಬುದನ್ನು ಎಲ್ಲರ ಮುಂದಿಟ್ಟರು ನಾಗಾರ್ಜುನ ಮಾತ್ರವಲ್ಲದೆ, ಸಂಜನಾ, ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಇಲ್ಲವಾದರೆ ಮನೆಯಿಂದ ಹೊರಡಬಹುದು ಎಂದು ಸಹ ನಾಗಾರ್ಜುನ ಕಠಿಣವಾಗಿಯೇ ಮಾತನಾಡಿದರು.
ಇದನ್ನೂ ಓದಿ:ಬಿಗ್ಬಾಸ್ ಮನೆಯಲ್ಲಿ ತಂಗಿಯ ಗುಣಗಾನ ಮಾಡಿದ ಸಂಜನಾ ಗಲ್ರಾನಿ
ಸಂಜನಾ, ತಮಗೆ ಯಾರ ದಾಕ್ಷಿಣ್ಯ ಬೇಕಿಲ್ಲ ನಾನು ಕ್ಷಮೆ ಕೇಳುವುದಿಲ್ಲ ಮನೆಯಿಂದ ಹೊರಗೆ ಹೋಗುತ್ತೇನೆ ಎಂದಾಗ ನಾಗಾರ್ಜುನ, ಅದು ಸಾಧ್ಯವಿಲ್ಲ, ಒಬ್ಬ ಯುವತಿಯ ವ್ಯಕ್ತಿತ್ವದ ಬಗ್ಗೆ ಕಪ್ಪು ಚುಕ್ಕೆಯಂಥ ಆರೋಪ ಮಾಡಿ ಹಾಗೆ ಹೋಗಲು ಬಿಡುವುದಿಲ್ಲ ಎಂದು, ರಿತು ಬಳಿ ಕ್ಷಮೆ ಕೇಳಲೇ ಬೇಕು ಎಂದರು. ಕೊನೆಗೆ ನಾಗಾರ್ಜುನ ಮಾತಿಗೆ ಬಗ್ಗಿದ ಸಂಜನಾ ಕ್ಷಮೆ ಕೇಳಿದರು.
ಚರ್ಚೆಯ ವೇಳೆ, ನಾಗಾರ್ಜುನ ಅವರು ಪರೋಕ್ಷವಾಗಿ ಸಂಜನಾರ ಡ್ರಗ್ಸ್ ವಿಷಯವನ್ನೂ ಉಲ್ಲೇಖಿಸಿದರು. ‘ನೀವು ಹೊರಗೆ ಅಪರಾಧ ಮಾಡಿದ್ದೀಯ, ನಿನ್ನ ಪಕ್ಕ ಗುರುತಿಸಿಕೊಳ್ಳಲು ನನಗೆ ಅಸಹ್ಯ ಆಗುತ್ತದೆ ಎಂದು ಮತ್ತೊಬ್ಬ ಸ್ಪರ್ಧಿ ಹೇಳಿದ್ದರೆ’ ಎಂಬ ಮಾತನ್ನು ನಾಗಾರ್ಜುನ, ಸಂಜನಾ ಕುರಿತಾಗಿ ಆಡಿದರು. ಅಸಲಿಗೆ ಅದು ಸಂಜನಾರ ಡ್ರಗ್ಸ್ ಪ್ರಕರಣ ಕುರಿತಾಗಿಯೇ ಆಗಿತ್ತು ಎಂಬುದು ಸ್ಪಷ್ಟ. ಒಟ್ಟಾರೆ, ಸಂಜನಾ ತಾವು ಆಡಿದ ಮಾತಿಗೆ ಕ್ಷಮೆ ಕೇಳಿದ್ದಾರೆ. ಇಂದು (ನವೆಂಬರ್ 30) ಬಿಗ್ಬಾಸ್ ಮನೆಯಿಂದ ಇಬ್ಬರು ಹೊರಗೆ ಹೋಗುವ ಸಾಧ್ಯತೆ ಇದ್ದು, ಅದರಲ್ಲಿ ಒಬ್ಬರು ಸಂಜನಾ ಆಗಿರಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ