ಧಾರಾವಾಹಿ ಎಂದಾಕ್ಷಣ ನೆನಪಿಗೆ ಬರೋದು ಅತ್ತೆ-ಸೊಸೆಯ ಕಥೆ, ಒಂದಷ್ಟು ಲೇಡಿ ವಿಲನ್ಗಳು, ಐಷಾರಾಮಿ ಸೆಟ್, ಕಥಾ ನಾಯಕನ ಶ್ರೀಮಂತಿಕೆ. ಆದರೆ ಇದಾವುದೂ ಇಲ್ಲದೆ, ಸಿಂಪಲ್ ಕಥೆಯೊಂದಿಗೆ, ಮಧ್ಯಮವರ್ಗದವರ ಜನರಿಗೆ ಹೆಚ್ಚು ಕನೆಕ್ಟ್ ಆಗುವ ರೀತಿಯಲ್ಲಿ ಪ್ರಸಾರ ಆರಂಭಿಸಿದ್ದು ‘ಭೂಮಿಗೆ ಬಂದ ಭಗವಂತ’ (Bhoomige Banda Bhagavantha) ಧಾರಾವಾಹಿ. ಈಗ ಈ ಸೀರಿಯಲ್ಗೆ ಶತಕದ ಸಂಭ್ರಮ. ಇಂದು (ಆಗಸ್ಟ್ 4) ಧಾರಾವಾಹಿಯ 100ನೇ ಎಪಿಸೋಡ್ ಪ್ರಸಾರ ಕಾಣುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ತಂಡಕ್ಕೆ ಶುಭಕೋರಿದ್ದಾರೆ. ಈ ಧಾರಾವಾಹಿ ಸೋಮವಾರದಿಂದ-ಶುಕ್ರವಾರದವರೆಗೆ ರಾತ್ರಿ 10 ಗಂಟೆಗೆ ಪ್ರಸಾರ ಕಾಣುತ್ತಿದೆ.
ನವೀನ್ ಕೃಷ್ಣ, ಕೃತಿಕಾ ರವೀಂದ್ರ, ಹಿರಿಯ ನಟ ಉಮೇಶ್ ಅವರು ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ. ಶಿವ ಪ್ರಸಾದ್ (ನವೀನ್) ದೇವರ ನಂಬುವ ವ್ಯಕ್ತಿ. ಆತನ ಪತ್ನಿ ಗಿರಿಜಾಗಂತೂ (ಕೃತಿಕಾ) ದೇವರ ಮೇಲೆ ಎಲ್ಲಿಲದ ಭಕ್ತಿ. ಶಿವನ ತಂದೆ ವಿಶ್ವನಾಥ್ (ಉಮೇಶ್) ಕೂಡ ಇವರ ಜೊತೆಯೇ ವಾಸವಾಗಿದ್ದಾನೆ. ಇವರ ಮನೆಯಲ್ಲಿ ಸುಖ-ಶಾಂತಿಗೆ ಕೊರತೆ ಇಲ್ಲ. ಆದರೆ, ಹಣದ್ದೇ ಸಮಸ್ಯೆ. ಹೀಗಿರುವಾಗ ಶಿವ ಪ್ರಸಾದ್ಗೆ ಶಿವ ಪ್ರತ್ಯಕ್ಷ ಆಗುತ್ತಾನೆ.
ಸಾಮಾನ್ಯವಾಗಿ ದೇವರು ಪ್ರತ್ಯಕ್ಷ ಆದರೆ ಪವಾಡಗಳು ಸಂಭವಿಸುತ್ತವೆ ಎಂಬ ನಂಬಿಕೆ ಇದೆ. ಆದರೆ, ‘ಭೂಮಿಗೆ ಬಂದ ಭಗವಂತ’ ಧಾರಾವಾಹಿಯ ದೇವರು ಪವಾಡ ಮಾಡುವುದಿಲ್ಲ. ‘ಸುಳ್ಳು ಹೇಳದೆ, ಬೇರೆಯವರಿಗೆ ತೊಂದರೆ ಮಾಡದೆ ನಿನ್ನ ಕೆಲಸ ನೀನು ಮಾಡು. ಆಗ ನಿನಗೆ ಒಳ್ಳೆಯದೇ ಆಗುತ್ತದೆ’ ಎನ್ನುವ ಸಂದೇಶ ಕೊಡುತ್ತಾನೆ. ಒಂದು ಶಕ್ತಿಯಾಗಿ ಕಥಾನಾಯಕನ ಜೊತೆ ದೇವರು ಇರುತ್ತಾನೆ.
ಮಧ್ಯಮ ವರ್ಗದ ಜನರು ನಿತ್ಯ ಸಮಸ್ಯೆ ಎದುರಿಸುತ್ತಾರೆ. ಆ ಎಲ್ಲಾ ಕಷ್ಟಗಳನ್ನು ಈ ಧಾರಾವಾಹಿಯಲ್ಲಿ ತೋರಿಸಲಾಗುತ್ತದೆ. ಹೀಗಾಗಿ, ಸಾಕಷ್ಟು ಜನರಿಗೆ ಈ ಧಾರಾವಾಹಿ ಇಷ್ಟವಾಗಿದೆ. ಎಲ್ಲಾ ವಿಚಾರಗಳನ್ನು ಹಾಸ್ಯದ ರೂಪದಲ್ಲಿ ಹೇಳಲಾಗುತ್ತಿದೆ. ನವೀನ್ ಕೃಷ್ಣ, ಕೃತಿಕಾ ರವೀಂದ್ರ ಹಾಗೂ ಉಮೇಶ್ ಅವರ ನಟನೆಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಭಗವಂತನ ಪಾತ್ರ ಮಾಡಿರೋದು ಕಾರ್ತಿಕ್ ಸಾಮಗ, ಚಿತ್ರಕಥೆ – ಸಂಭಾಷಣೆ – ರಾಕೇಶ್, ಧಾರಾವಾಹಿ ನಿರ್ಮಾಣವನ್ನು ತಾಂಡವ ಪ್ರೊಡಕ್ಷನ್ ಮಾಡಿದೆ.
ಶತಕ ಪೂರೈಸಿದ ಹಿನ್ನೆಲೆಯಲ್ಲಿ ‘ಭೂಮಿಗೆ ಬಂದ ಭಗವಂತ’ ತಂಡ ಇಂದು ಸಂಜೆ ಲೈವ್ ಬರುತ್ತಿದೆ.‘100 ಸಂಚಿಕೆಗಳನ್ನು ಪೂರೈಸಿದ ಸಾರ್ಥಕತೆಯಲ್ಲಿರುವ ಭೂಮಿಗೆ ಬಂದ ಭಗವಂತ ಧಾರಾವಾಹಿಯ ಗಿರಿಜಾ-ಶಿವಪ್ರಸಾದ್ ಇಂದು ಸಂಜೆ ಇನ್ಸ್ಟಾಗ್ರಾಮ್ (ಜೀ ಕನ್ನಡ) ಲೈವ್ ಬರಲಿದ್ದಾರೆ. ಲೈವ್‌ಗೆ ಜಾಯಿನ್ ಆಗಿ, ನಿಮಗಿದೆ ಸ್ವೀಟ್ ಸರ್ಪ್ರೈಸ್’ ಎಂದು ಬರೆದುಕೊಳ್ಳಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:02 pm, Fri, 4 August 23