ನೀತು ವನಜಾಕ್ಷಿ (Neethu Vanajakshi) ಅವರು ತೃತೀಯಲಿಂಗಿ. ಆದರೆ, ಅವರು ಸಮಾಜಕ್ಕೆ ಹೆದರಿ ದೂರ ಉಳಿದಿಲ್ಲ. ತಮ್ಮದೇ ಟ್ಯಾಟೂ ಸ್ಟುಡಿಯೋ ಹೊಂದಿದ್ದಾರೆ. ಹೋಟೆಲ್ ಬಿಸ್ನೆಸ್ ಕೂಡ ಇದೆ. ಈಗ ಅವರು ಬಿಗ್ ಬಾಸ್ಗೆ ಬಂದಿದ್ದಾರೆ. ಜೀವನದಲ್ಲಿ ಅವರು ಎದುರಿಸಿದ ಕಷ್ಟಗಳು ಒಂದೆರಡಲ್ಲ. ಅವರು ತಮ್ಮ ಜೀವನದ ಬಗ್ಗೆ ಹೇಳಿಕೊಂಡರೆ ಒಂದಷ್ಟು ಜನರಿಗೆ ಸ್ಫೂರ್ತಿ ಸಿಗುತ್ತದೆ ಅನ್ನೋದು ಕಲರ್ಸ್ ಕನ್ನಡ ವಾಹಿನಿಯವರ ಆಲೋಚನೆ. ಈ ಕಾರಣದಿಂದಲೇ ಅವರನ್ನು ಬಿಗ್ ಬಾಸ್ಗೆ ಕರೆತರಲಾಗಿದೆ. ತಮ್ಮ ಜೀವನದಲ್ಲಿ ನಡೆದ ಕೆಲವು ವಿಚಾರಗಳನ್ನು ಅವರು ಹಂಚಿಕೊಂಡಿದ್ದಾರೆ.
‘ನಾನು ಅವನಲ್ಲ ಅವಳು’ ಸಿನಿಮಾ ರಿಲೀಸ್ ಆಗಿ ಮೆಚ್ಚುಗೆ ಪಡೆಯಿತು. ಈ ಚಿತ್ರದಲ್ಲಿ ಸಂಚಾರಿ ವಿಜಯ್ ಅವರು ಮುಖ್ಯಭೂಮಿಕೆ ನಿರ್ವಹಿಸಿದ್ದರು. ಆರಂಭದಲ್ಲಿ ಪುರುಷನಂತೆ ಇರುವ ವ್ಯಕ್ತಿ ಆ ಬಳಿಕ ಮಹಿಳೆ ಆಗಿ ಬದಲಾಗುತ್ತಾನೆ. ಈ ಪಾತ್ರವನ್ನು ಸಮರ್ಥವಾಗಿ ವಿಜಯ್ ನಿರ್ವಹಿಸಿದ್ದರು. ಇಂಥ ವ್ಯಕ್ತಿಗಳ ಜೀವನದಲ್ಲಿ ಉಂಟಾಗುವ ತುಮುಲಗಳನ್ನು ವಿವರಿಸಿದ್ದರು. ನೀತು ಅವರು ಕೂಡ ತಮ್ಮ ಜೀವನದ ಅನುಭವಗಳನ್ನು ತೆರೆದಿಟ್ಟಿದ್ದಾರೆ.
ಭಾಗ್ಯಶ್ರೀ ಹಾಗೂ ಸಿರಿ ಅವರು ನೀತು ಅವರ ಜೊತೆ ಮಾತನಾಡುತ್ತಿದ್ದರು. ಈ ವೇಳೆ ಅವರ ಭಾವನೆಗಳ ಬಗ್ಗೆ, ನೀವು ಹುಡುಗ ಅಲ್ಲ ಎನ್ನುವ ವಿಚಾರ ಗೊತ್ತಾಗಿದ್ದು ಹೇಗೆ ಎಂಬುದನ್ನು ತಿಳಿಸಿ ಎಂದು ಕೋರಿದರು. ‘ಹುಡುಗರು ಹುಡುಗಿಯರ ಬಗ್ಗೆ ಮಾತನಾಡುತ್ತಿದ್ದರು. ಆದರೆ, ನನಗೆ ಆ ಫೀಲ್ ಬರ್ತಾನೇ ಇರಲಿಲ್ಲ. ಹುಡುಗರ ನೋಡಿ ನಾನು ಆಕರ್ಷಿತನಾಗುತ್ತಿದ್ದೆ. ನನ್ನದೇ ತಪ್ಪಾ ಎಂದು ಅನಿಸುತ್ತಿತ್ತು. ಅಕ್ಕನ ಬಟ್ಟೆ ಹಾಕಿಕೊಳ್ಳುತ್ತಿದ್ದೆ, ಕಾಜಲ್ ಹಚ್ಚಿಕೊಳ್ಳುತ್ತಿದೆ. ನಾನು ಏಳನೇ ತರಗತಿಯಲ್ಲಿ ಇದ್ದಾಗ ನಾನು ಹುಡುಗ ಅಲ್ಲ ಎನ್ನುವ ವಿಚಾರ ಗೊತ್ತಾಗೋಕೆ ಶುರುವಾಯ್ತು. ನಾನಲ್ಲ ಇದು ಅನಿಸ್ತಾ ಇತ್ತು’ ಎಂದು ಹೇಳುತ್ತಾ ಹಳೆಯದನ್ನು ನೆನಪಿಸಿಕೊಂಡು ಅತ್ತರು ನೀತು.
ಇದನ್ನೂ ಓದಿ: ಸಮಾಜದ ಸವಾಲುಗಳ ಎದುರಿಸಿ ಗೆದ್ದಿರುವ ಮಂಗಳಮುಖಿ ನೀತು ಬಿಗ್ಬಾಸ್ ಮನೆಯಲ್ಲಿ ಗೆಲ್ಲುತ್ತಾರಾ?
‘ನಾನು ಮೊದಲು ಗೇ ಎಂದುಕೊಂಡಿದ್ದೆ. ಪ್ಯಾಂಟ್-ಶರ್ಟ್ ಹಾಕ್ಕೊಂಡಾಗ ಬೇಸರ ಅನಿಸ್ತಾ ಇತ್ತು. ನಾರ್ಮಲ್ ಜೀವನ ಮಾಡೋಕೆ ಆಗ್ತಾ ಇಲ್ವಲ್ಲ ಅನಿಸ್ತಾ ಇತ್ತು’ ಎಂದು ನೀತು ಹೇಳಿದರು. ಅವರು ಕಣ್ಣೀರು ಹಾಕುವುದನ್ನು ನೋಡಿ ಅಲ್ಲಿದ್ದವರಿಗೆ ಬೇಸರ ಆಯಿತು. ಜಿಯೋ ಸಿನಿಮಾದಲ್ಲಿ ಬಿಗ್ ಬಾಸ್ 24 ಗಂಟೆ ಲೈವ್ ಪ್ರಸಾರ ಕಾಣುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:33 am, Wed, 11 October 23