ರಕ್ಷಿತಾ ಶೆಟ್ಟಿಗೆ ತಿರುಗಿ ಬಂತು ಕರ್ಮ: ನೇರವಾಗಿ ನಾಮಿನೇಟ್ ಮಾಡಿದ ರಘು

ಈ ವಾರ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಆಟದಲ್ಲಿ ಒಟ್ಟು 10 ಜನರು ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ರಘು ಅವರು ತಮ್ಮ ಅಧಿಕಾರ ಬಳಸಿ ರಕ್ಷಿತಾ ಶೆಟ್ಟಿ ಅವರನ್ನು ನೇರವಾಗಿ ನಾಮಿನೇಟ್ ಮಾಡಿದ್ದಾರೆ. ಮೂಲ ನಿಯಮ ಉಲ್ಲಂಘಿಸಿ ಅಶ್ವಿನಿ ಗೌಡ ಮತ್ತು ಜಾಹ್ನವಿ ಕೂಡ ನೇರವಾಗಿ ನಾಮಿನೇಟ್ ಆಗಿದ್ದಾರೆ.

ರಕ್ಷಿತಾ ಶೆಟ್ಟಿಗೆ ತಿರುಗಿ ಬಂತು ಕರ್ಮ: ನೇರವಾಗಿ ನಾಮಿನೇಟ್ ಮಾಡಿದ ರಘು
Raghu, Rakshita Shetty

Updated on: Nov 18, 2025 | 11:00 PM

‘ಬಿಗ್ ಬಾಸ್ ಕನ್ನಡ ಸೀಸನ್ 12’ (BBK 12) ಶೋನಲ್ಲಿ 8ನೇ ವಾರದ ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಬಿಗ್ ಬಾಸ್ ಮನೆಯ ಸದಸ್ಯರ ಆಯ್ಕೆಯ ಅನುಸಾರ ಅಭಿಷೇಕ್, ಮಾಳು ನಿಪನಾಳ, ರಿಷಾ, ಧ್ರುವಂತ್, ರಾಶಿಕಾ ಶೆಟ್ಟಿ, ಸೂರಜ್ ಸಿಂಗ್ ಹಾಗೂ ಸ್ಪಂದನಾ ಅವರು ನಾಮಿನೇಟ್ ಆದರು. ಬಿಗ್ ಬಾಸ್ ಮನೆಯ ಮೂಲ ನಿಯಮ ಉಲ್ಲಂಘಿಸಿದ್ದಕ್ಕಾಗಿ ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರು ನೇರವಾಗಿ ನಾಮಿನೇಟ್ ಆಗಿದ್ದಾರೆ. ಅಂತಿಮವಾಗಿ ಕ್ಯಾಪ್ಟನ್ ರಘು (Raghu) ಅವರು ರಕ್ಷಿತಾ ಶೆಟ್ಟಿಯನ್ನು ನಾಮಿನೇಟ್ ಮಾಡಿದರು. ಈ ಮೊದಲು ರಕ್ಷಿತಾ ಶೆಟ್ಟಿ (Rakshita Shetty) ಮಾಡಿದ್ದ ಕರ್ಮ ಈಗ ತಿರುಗಿ ಬಂದಿದೆ ಎಂದು ಗಿಲ್ಲಿ ನಟ ಹೇಳಿದ್ದಾರೆ.

ಈ ಹಿಂದಿನ ವಾರದಲ್ಲಿ ರಕ್ಷಿತಾ ಶೆಟ್ಟಿ ಅವರು ನಾಮಿನೇಷನ್ ಪ್ರಕ್ರಿಯೆಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೇ ರಘು ಹೆಸರನ್ನು ನಾಮಿನೇಟ್ ಮಾಡಿದ್ದರು. ಅದರಿಂದ ರಘು ಅವರಿಗೆ ತುಂಬಾ ಬೇಸರ ಆಗಿತ್ತು. ಈಗ ಅದಕ್ಕೆ ಅವರು ತಿರುಗೇಟು ನೀಡಿದ್ದಾರೆ. ಈ ವಾರ ಕ್ಯಾಪ್ಟನ್ ಆಗಿರುವ ರಘು ಅವರು ತಮ್ಮ ಅಧಿಕಾರವನ್ನು ಈ ರೀತಿಯಲ್ಲಿ ಬಳಸಿಕೊಂಡರು.

ಒಬ್ಬರನ್ನು ಕ್ಯಾಪ್ಟನ್ ರಘು ನೇರವಾಗಿ ನಾಮಿನೇಟ್ ಮಾಡಬೇಕು ಎಂದು ಬಿಗ್ ಬಾಸ್ ಘೋಷಿಸಿದರು. ಆಗ ರಘು ಅವರು ರಕ್ಷಿತಾ ಶೆಟ್ಟಿಯ ಹೆಸರನ್ನು ತೆಗೆದುಕೊಂಡರು. ‘ಆಕೆಯ ಮೇಲೆ ಬೇರೆ ರೀತಿಯ ಅಭಿಪ್ರಾಯ ಇತ್ತು. ಚಿಕ್ಕ ಹುಡುಗಿ, ತಂಗಿ ರೀತಿ ನೋಡುತ್ತಿದ್ದೆ. ಆದರೆ ಅವಳಿಂದ ನನಗೆ ಹರ್ಟ್ ಆಗಿದೆ. ಹಾಗಾಗಿ ರಕ್ಷಿತಾನ ನಾಮಿನೇಟ್ ಮಾಡುತ್ತೇನೆ’ ಎಂದು ರಘು ಹೇಳಿದರು.

ಬಿಗ್ ಬಾಸ್ ಮನೆಯಲ್ಲಿ ನಾಮಿನೇಷನ್ ಪ್ರಕ್ರಿಯೆ ತುಂಬ ಪ್ರಮುಖವಾಗಿರುತ್ತದೆ. ತಪ್ಪು ನಿರ್ಧಾರಗಳನ್ನು ತೆಗೆದುಕೊಂಡು ಒಬ್ಬರನ್ನು ನಾಮಿನೇಟ್ ಮಾಡಿದರೆ ಅದರಿಂದ ಅವರ ಆಟಕ್ಕೆ ತೊಂದರೆ ಆಗುತ್ತದೆ. ರಕ್ಷಿತಾ ಶೆಟ್ಟಿ ಅವರು ಸರಿಯಾಗಿ ಗೇಮ್ ಅರ್ಥ ಮಾಡಿಕೊಳ್ಳದೇ ರಘು ಅವರನ್ನು ಈ ಮೊದಲು ನಾಮಿನೇಟ್ ಮಾಡಿದ್ದರು. ಬಳಿಕ ತಮ್ಮ ತಪ್ಪಿನ ಅರಿವಾಯಿತು ಎಂದು ಹೇಳಿದ್ದರು.

ಇದನ್ನೂ ಓದಿ: ಧ್ರುವಂತ್ ಎದುರು ಪೇಚಿಗೆ ಸಿಲುಕಿದ ರಕ್ಷಿತಾ ಶೆಟ್ಟಿ: ಉಳಿದವರಿಗೆ ಸಖತ್ ನಗು

ಅಶ್ವಿನಿ ಗೌಡ ಮತ್ತು ಜಾಹ್ನವಿ ಅವರು ಈ ವಾರದ ಆರಂಭದಲ್ಲಿ ಒಂದು ತಪ್ಪು ಮಾಡಿದರು. ಬಿಗ್ ಬಾಸ್ ಮನೆಯಲ್ಲಿ ಪಿಸುದನಿಯಲ್ಲಿ ಮಾತನಾಡುವಂತಿಲ್ಲ ಎಂಬ ನಿಯಮ ಇದೆ. ಆ ಬಗ್ಗೆ ಕಿಚ್ಚ ಸುದೀಪ್ ಕೂಡ ಎಚ್ಚರಿಕೆ ನೀಡಿದ್ದರು. ಹಾಗಿದ್ದರೂ ಕೂಡ ಸುದೀಪ್ ಅವರ ಮಾತಿಗೆ ಬೆಲೆ ಕೊಡದೇ ಜಾಹ್ನವಿ ಮತ್ತು ಅಶ್ವಿನಿ ಗೌಡ ಅವರು ಡ್ರೆಸಿಂಗ್ ರೂಮ್​​ನಲ್ಲಿ ಪಿಸುದನಿಯಲ್ಲಿ ಮಾತನಾಡಿದ್ದರು. ಹಾಗಾಗಿ ಅವರಿಬ್ಬರನ್ನು ನೇರವಾಗಿ ನಾಮಿನೇಟ್ ಮಾಡಲಾಯಿತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.