ಬಿಗ್ಬಾಸ್ ಮನೆಯಲ್ಲಿ ಶುರುವಾಯ್ತು ಮದುವೆ ಶಾಸ್ತ್ರ: ಯಾರ ಮದುವೆ?
Bigg Boss House: ಬಿಗ್ಬಾಸ್ ಮನೆಯಲ್ಲಿ ಏನೇನೋ ನಡೆಯುತ್ತವೆ. ವಿಪರೀತ ಜಗಳ, ಪ್ರೀತಿ, ಹಾಸ್ಯ, ತಮಾಷೆ, ಡ್ರಾಮಾ, ಹಾಡು, ಥರ-ಥರದ ಟಾಸ್ಕ್ಗಳು ಇನ್ನೂ ಏನೇನೋ ನಡೆಯುತ್ತವೆ. ಆದರೆ ಬಿಗ್ಬಾಸ್ ಮನೆಯಲ್ಲಿ ಮದುವೆ ಶಾಸ್ತ್ರ ನಡೆದಿದ್ದು ಎಂದಿಗೂ ಇಲ್ಲ. ಆದರೆ ಈಗ ನಡೆದಿದೆ. ಬಿಗ್ಬಾಸ್ ಮನೆಯಲ್ಲಿ ನಿಜಕ್ಕೂ ಮದುವೆ ಶಾಸ್ತ್ರ ಆರಂಭವಾಗಿದೆ. ಏನಿದು ಕತೆ? ಇಲ್ಲಿದೆ ಮಾಹಿತಿ...

ಬಿಗ್ಬಾಸ್ (Bigg Boss) ಮನೆಯಲ್ಲಿ ಟಾಸ್ಕ್ಗಳು ನಡೆಯುತ್ತವೆ, ಜಗಳ ನಡೆಯುತ್ತದೆ, ಆಗಾಗ್ಗೆ ತುಸು ಮನೊರಂಜನೆ, ಹಾಡು, ಹಾಸ್ಯ ಇತ್ಯಾದಿಗಳು ನಡೆಯುತ್ತವೆ. ಆದರೆ ಮದುವೆ? ಹೌದು, ಬಿಗ್ಬಾಸ್ ಮನೆಯಲ್ಲಿ ಮದುವೆ ಶಾಸ್ತ್ರಕ್ಕೆ ಆರಂಭ ದೊರೆತಿದೆ. ಮಧುವಣಗಿತ್ತಿಗೆ ಉಡಿ ತುಂಬುವ ಶಾಸ್ತ್ರವನ್ನು ಬಿಗ್ಬಾಸ್ ಮನೆಯಲ್ಲಿ ನಡೆಸಿಕೊಡಲಾಗಿದೆ. ಕನ್ನಡ ಬಿಗ್ಬಾಸ್ ನೋಡುವವರಿಗೆ ಇದು ವಿಚಿತ್ರ ಎನಿಸಬಹುದು, ಕನ್ನಡ ಬಿಗ್ಬಾಸ್ನಲ್ಲಿ ಇಂಥಹದ್ದೊಂದು ದೃಶ್ಯವನ್ನೇ ನೋಡಿಲ್ಲವಲ್ಲ ಎಂದು, ಅಸಲಿಗೆ ಇದು ನಡೆದಿರುವುದು ನೆರೆಯ ತೆಲುಗು ಬಿಗ್ಬಾಸ್ನಲ್ಲಿ.
ತೆಲುಗು ಬಿಗ್ಬಾಸ್ ಶೋನಲ್ಲಿ ಕನ್ನಡತಿ ತನುಜಾ ಗೌಡ ಅದ್ಭುತವಾಗಿ ಆಡುತ್ತಿದ್ದಾರೆ. ಕನ್ನಡ ಸಿನಿಮಾಗಳಿಂದ ನಟನೆ ಆರಂಭಿಸಿದರೂ ತನುಜಾ ಗೌಡ ಅವರು ತೆಲುಗು ಧಾರಾವಾಹಿಗಳ ಮೂಲಕ ತೆಲುಗು ರಾಜ್ಯಗಳಲ್ಲಿ ಮನೆ ಮಾತಾಗಿದ್ದಾರೆ. ಇದೀಗ ತೆಲುಗು ಬಿಗ್ಬಾಸ್ಗೆ ಎಂಟ್ರಿ ನೀಡಿರುವ ತೇಜಸ್ವಿನಿ ಗೌಡ. ಅಲ್ಲಿಯೂ ಸಹ ಅದ್ಭುತವಾಗಿ ಆಡುತ್ತಿದ್ದಾರೆ. ಈ ಬಾರಿ ತನುಜಾ ಗೌಡ ಫಿನಾಲೆ ಸ್ಪರ್ಧಿ ಎನ್ನಲಾಗುತ್ತಿದೆ.
ತೆಲುಗು ಬಿಗ್ಬಾಸ್ನಲ್ಲಿ ಫ್ಯಾಮಿಲಿ ವೀಕ್ ನಡೆಯುತ್ತಿತ್ತು. ಸ್ಪರ್ಧಿಗಳ ಮನೆಯವರು ಬಿಗ್ಬಾಸ್ ಮನೆಗೆ ಬಂದು ಸರ್ಪ್ರೈಸ್ ನೀಡುತ್ತಿದ್ದಾರೆ. ತನುಜಾ ಗೌಡ ಅವರು ಕಳೆದೊಂದು ವಾರದಿಂದ ತಮ್ಮ ಮನೆಯವರಿಗಾಗಿ ನಿರೀಕ್ಷೆ ಮಾಡುತ್ತಿದ್ದರು. ಆದರೆ ಇತ್ತೀಚೆಗೆ ತನುಜಾ ಗೌಡ ಅವರ ಅಕ್ಕನ ಮಗಳು ಮೊದಲು ಬಿಗ್ಬಾಸ್ ಮನೆಗೆ ಬಂದರು. ಅಕ್ಕನ ಮಗಳನ್ನು ನೋಡಿ ಬಹಳ ಖುಷಿ ಪಟ್ಟರು ತನುಜಾ, ತನುಜಾ ಹಾಗೂ ಅವರ ಕುಟುಂಬ ಕನ್ನಡಿಗರಾದ್ದರಿಂದ ಮಗುವಿನೊಟ್ಟಿಗೆ ಕನ್ನಡದಲ್ಲಿಯೇ ತನುಜಾ ಮಾತನಾಡಿದರು.
ತನುಜಾ ಹಾಗೂ ಬಿಗ್ಬಾಸ್ ಸ್ಪರ್ಧಿಗಳು ಮಗುವಿನೊಂದಿಗೆ ಆಟ ಆಡುತ್ತಿರಬೇಕಾದರೆ ಬಿಗ್ಬಾಸ್ ಮುಖ್ಯದ್ವಾರ ತೆರಿಯಿತು, ಮುಖ್ಯದ್ವಾರದಿಂದ ತನುಜಾ ಅವರ ತಂಗಿ ಮನೆಯ ಒಳಗೆ ಬಂದರು. ತಂಗಿಯನ್ನು ನೋಡುತ್ತಿದ್ದಂತೆ ತನುಜಾ ಭಾವುಕರಾಗಿ ಕಣ್ಣೀರು ಹಾಕಿದರು. ವಿಶೇಷವೆಂದರೆ ತನುಜಾ ಅವರ ತಂಗಿಗೆ ಮದುವೆ ನಿಶ್ಚಯವಾಗಿದೆ. ಕೆಲವೇ ದಿನಗಳಲ್ಲಿ ಅವರ ಮದುವೆ ನಡೆಯಲಿದೆ. ಇದೇ ಕಾರಣಕ್ಕೆ ಅಕ್ಕನ ಆಶೀರ್ವಾದ ಪಡೆಯಲು ಅವರು ಬಿಗ್ಬಾಸ್ ಮನೆಗೆ ಬಂದಿದ್ದರು.
View this post on Instagram
ಹಾಗಾಗಿ ತನುಜಾ ಅವರು ಬಳೆ, ಸೀರೆ, ಎಲೆ ಅಡಿಕೆ ಇನ್ನಿತರೆಗಳನ್ನು ಇಟ್ಟು ತಂಗಿಯ ಉಡಿ ತುಂಬಿದರು. ತಂಗಿಗೆ ಅರಿಶಿಣ, ಕುಂಕುಮ ಇಟ್ಟು ಬಿಗ್ಬಾಸ್ ಮನೆಯಲ್ಲೇ ಮದುವೆ ಶಾಸ್ತ್ರದ ಆರಂಭ ಮಾಡಿದರು. ತಂಗಿ ಸಹ ಅಕ್ಕನ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದರು. ಬಿಗ್ಬಾಸ್ ಮನೆಯ ಮಂದಿ ತನುಜಾ ಅವರಿಗೆ ಉಡಿ ತುಂಬಿ, ಅವರಿಗೆ ಶುಭ ಹಾರೈಸಿದರು. ನೋಡುಗರಿಗೆ ದೃಶ್ಯ ಬಹಳ ಭಾವುಕವಾಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




