ಹೇಮಂತ್ ರಾವ್ ನಿರ್ದೇಶನದ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ’ ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿತು. ಬಳಿಕ ಸಿನಿಪ್ರಿಯರೆಲ್ಲ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ (Sapta Sagaradaache Ello Side B) ಸಿನಿಮಾ ಯಾವಾಗ ಬರಲಿದೆ ಎಂದು ಕಾತರದಿಂದ ಕಾಯುತ್ತಿದ್ದರು. ರಕ್ಷಿತ್ ಶೆಟ್ಟಿ (Rakshit Shetty) ಅವರ ಅಭಿಮಾನಿಗಳ ನಿರೀಕ್ಷೆಯನ್ನು ‘SIDE B’ ಸಿನಿಮಾ ಸುಳ್ಳು ಮಾಡಲಿಲ್ಲ. ಸೈಡ್ ಎ ರೀತಿಯೇ ಸೈಡ್ ಬಿ ಕೂಡ ಪ್ರಶಂಸೆ ಗಿಟ್ಟಿಸಿತು. ಈಗ ಇದೇ ಮೊದಲ ಬಾರಿಗೆ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಸಿನಿಮಾ ಕಿರುತೆರೆಯಲ್ಲಿ ಪ್ರಸಾರಕ್ಕೆ ಸಜ್ಜಾಗಿದೆ. ‘ಜೀ ಕನ್ನಡ’ (Zee Kannada) ವಾಹಿನಿಯಲ್ಲಿ ಈ ಸಿನಿಮಾ ಪ್ರಸಾರ ಆಗಲಿದೆ.
ಹೊಸ ಸಿನಿಮಾಗಳು ಮೊದಲ ಬಾರಿ ಪ್ರಸಾರ ಆದಾಗ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ಸಿಗುತ್ತದೆ. ಚಿತ್ರಮಂದಿರ ಮತ್ತು ಒಟಿಟಿಯಲ್ಲಿ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಚಿತ್ರವನ್ನು ಮಿಸ್ ಮಾಡಿಕೊಂಡವರು ಈಗ ‘ಜೀ ಕನ್ನಡ’ದಲ್ಲಿ ವೀಕ್ಷಿಸುವ ಸಮಯ ಬಂದಿದೆ. ಇದೇ ಭಾನುವಾರ, ಅಂದರೆ ಮಾರ್ಚ್ 24ರಂದು ಸಂಜೆ 7.30 ಕ್ಕೆ ಈ ಸಿನಿಮಾದ ವರ್ಲ್ಡ್ ಟಿಲಿವಿಷನ್ ಪ್ರೀಮಿಯರ್ ಆಗಲಿದೆ. ಕಿರುತೆರೆಯಲ್ಲಿ ಸಿನಿಮಾ ಕಣ್ತುಂಬಿಕೊಳ್ಳಲು ರಕ್ಷಿತ್ ಶೆಟ್ಟಿ ಫ್ಯಾನ್ಸ್ ಕಾದಿದ್ದಾರೆ.
ಇದನ್ನೂ ಓದಿ: ಶಿವರಾತ್ರಿ ಹಬ್ಬದಂದು ಸಿಂಪಲ್ ಸುನಿ, ರಕ್ಷಿತ್ ಶೆಟ್ಟಿಗೆ ಎರಡನೇ ಹುಟ್ಟು ದಿನ
ಹಲವು ಕಾರಣಗಳಿಂದ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಸಿನಿಮಾ ಮೆಚ್ಚುಗೆ ಗಳಿಸಿದೆ. ರಕ್ಷಿತ್ ಶೆಟ್ಟಿ ಅವರು ಮುಖ್ಯ ಭೂಮಿಕೆ ನಿಭಾಯಿಸುವುದರ ಜೊತೆಗೆ ಈ ಸಿನಿಮಾದ ನಿರ್ಮಾಣವನ್ನೂ ಮಾಡಿದ್ದಾರೆ. ಚಿತ್ರದ ಎಲ್ಲ ವಿಭಾಗಗಳಿಗೆ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಚರಣ್ ರಾಜ್ ಅವರ ಸಂಗೀತ, ಅದ್ವೈತ್ ಗುರುಮೂರ್ತಿ ಅವರ ಛಾಯಾಗ್ರಹಣ ಹೈಲೈಟ್ ಆಗಿದೆ. ರಕ್ಷಿತ್ ಶೆಟ್ಟಿ, ಚೈತ್ರಾ ಜೆ. ಆಚಾರ್, ರುಕ್ಮಿಣಿ ವಸಂತ್ ಅವರ ಅಭಿನಯಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಕಿರುತೆರೆ ಪ್ರೇಕ್ಷಕರಿಗೆ ಈ ಸಿನಿಮಾವನ್ನು ತೋರಿಸಲು ‘ಜೀ ಕನ್ನಡ’ ವಾಹಿನಿ ಸಜ್ಜಾಗಿದೆ.
ಕನ್ನಡ ಕಿರುತೆರೆಯ ಪ್ರಮುಖ ವಾಹಿನಿಗಳಲ್ಲಿ ಒಂದಾದ ‘ಜೀ ಕನ್ನಡ’ದಲ್ಲಿ ಅನೇಕ ಧಾರಾವಾಹಿ ಹಾಗೂ ರಿಯಾಲಿಟಿ ಶೋಗಳು ಜನಮನ ಗೆದ್ದಿವೆ. ಅಷ್ಟೇ ಅಲ್ಲದೇ, ಸೂಪರ್ ಹಿಟ್ ಸಿನಿಮಾಗಳನ್ನು ಪ್ರಸಾರ ಮಾಡುವ ಮೂಲಕವೂ ಈ ವಾಹಿನಿ ಮನರಂಜನೆ ನೀಡಿದೆ. ಈಗಾಗಲೇ ‘ಕೆಜಿಎಫ್’, ‘ಗರುಡ ಗಮನ ವೃಷಭ ವಾಹನ’, ‘ವಿಕ್ರಾಂತ್ ರೋಣ’, ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ’ ಮುಂತಾದ ಸಿನಿಮಾಗಳನ್ನು ಪ್ರಸಾರ ಮಾಡಿದ ಖ್ಯಾತಿ ‘ಜೀ ಕನ್ನಡ’ ವಾಹಿನಿಯದ್ದು. ಈಗ ‘ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ’ ಚಿತ್ರವನ್ನು ಪ್ರಸಾರ ಮಾಡಲಾಗುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.