ಕೌನ್ ಬನೇಗಾ ಕರೋಡ್ಪತಿಯಲ್ಲಿ ರಿಷಬ್ ಶೆಟ್ಟಿ ಗೆದ್ದ ಹಣ ಎಷ್ಟು? ಸಿಕ್ಕ ಉಡುಗೊರೆಗಳೇನು?

ರಿಷಬ್ ಶೆಟ್ಟಿ ಅವರು ಅಮಿತಾಭ್ ಬಚ್ಚನ್ ನಡೆಸಿಕೊಡುವ ಕೌನ್ ಬನೇಗಾ ಕರೋಡ್ಪತಿಯಲ್ಲಿ ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಅವರು ‘ರಿಷಬ್ ಫೌಂಡೇಶನ್‌’ ಪರವಾಗಿ ಆಡಿದ್ದಾರೆ. ಈ ಹಣವನ್ನು ಸರ್ಕಾರಿ ಶಾಲೆ ಹಾಗೂ ದೈವ ನರ್ತಕರಿಗೆ ಸಹಾಯ ಮಾಡುವುದಾಗಿ ಹೇಳಿದರು. ಇದರ ಜೊತೆಗೆ ಕೆಲವು ಉಡುಗೊರೆ ಕೂಡ ಸಿಕ್ಕಿದೆ.

ಕೌನ್ ಬನೇಗಾ ಕರೋಡ್ಪತಿಯಲ್ಲಿ ರಿಷಬ್ ಶೆಟ್ಟಿ ಗೆದ್ದ ಹಣ ಎಷ್ಟು? ಸಿಕ್ಕ ಉಡುಗೊರೆಗಳೇನು?
ರಿಷಬ್-ಅಮಿತಾಭ್

Updated on: Oct 18, 2025 | 10:34 AM

ರಿಷಬ್ ಶೆಟ್ಟಿ ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ಮುಖ್ಯ ಭೂಮಿಕೆ ನಿರ್ವಹಿಸಿದ್ದಾರೆ. ಇದರ ಜೊತೆಗೆ ಈ ಸಿನಿಮಾ ನಿರ್ದೇಶನ ಕೂಡ ಮಾಡಿದ್ದಾರೆ. ಈ ಚಿತ್ರ ಕನ್ನಡ ಮಾತ್ರವಲ್ಲದೆ, ಪರಭಾಷೆಗಳಲ್ಲೂ  ಬಿಡುಗಡೆ ಆಗಿ ಜನಪ್ರಿಯತೆ ಪಡೆದಿದೆ. ಈಗ ರಿಷಬ್ ಅವರು ಅಮಿತಾಭ್ ಬಚ್ಚನ್ ನಡೆಸಿಕೊಡುವ ‘ಕೌನ್ ಬನೇಗಾ ಕರೋಡ್ಪತಿ’ (KBC) ಶೋನ ಭಾಗ ಆಗಿದ್ದಾರೆ. ಈ ಶೋನಲ್ಲಿ ಅವರು ಎಷ್ಟು ಲಕ್ಷ ರೂಪಾಯಿ ಗೆದ್ದಿದ್ದಾರೆ ಎಂಬ ವಿಚಾರದ ಬಗ್ಗೆ ಇಲ್ಲಿದೆ ಮಾಹಿತಿ.

ರಿಷಬ್ ಶೆಟ್ಟಿ ಅವರು ವಿಶೇಷ ಅತಿಥಿಯಾಗಿ ‘ಕೌನ್ ಬನೇಗಾ ಕರೋಡ್ಪತಿ’ ಶೋಗೆ ಬಂದಿದ್ದರು. ಅಮಿತಾಭ್ ಬಚ್ಚನ್ ಅವರನ್ನು ಕಂಡು ರಿಷಬ್ ಎಗ್ಸೈಟ್ ಆದರು. ‘ನನ್ನ ಒಂದು ಫೌಂಡೇಷನ್ ಇದೆ. ರಿಷಬ್ ಫೌಂಡೇಷನ್. ಇದರ ಮೂಲಕ ಸರ್ಕಾರಿ ಶಾಲೆ ಹಾಗೂ ದೈವ ನರ್ತಕರಿಗೆ ಸಹಾಯ ಮಾಡಲು ಬಯಸುತ್ತೇನೆ’ ಎಂದು ರಿಷಬ್ ಹೇಳಿದರು. ಇದಕ್ಕೆ ಅಮಿತಾಭ್ ಖುಷಿ ಹೊರಹಾಕಿದರು.

ರಿಷಬ್ ಶೆಟ್ಟಿ ಅವರಿಗೆ ಮೊದಲ ಪ್ರಶ್ನೆ 50 ಸಾವಿರ ರೂಪಾಯಿಗೆ ಕೇಳಲಾಯಿತು. ‘ಲಾಫಿಂಗ್ ಬುದ್ಧ’ಗೆ ಸಂಬಂಧಿಸಿದಂತೆ ಪ್ರಶ್ನೆ ಇದಾಗಿತ್ತು. ಇದಕ್ಕೆ ಅವರು ಸರಿಯಾದ ಉತ್ತರ ಕೊಟ್ಟರು. ರಿಷಬ್ ಅವರು 12 ಪ್ರಶ್ನೆಗಳನ್ನು ಎದುರಿಸಿದರು. ‘ಇಂಡೋನೇಷ್ಯಾದಲ್ಲಿರುವ ಜೀವಂತ ಜ್ವಾಲಾಮುಖಿ ಕೆಳಗೆ ಹಿಂದೂ ದೇವರು ಇದೆ. ಅದು ಯಾವ ದೇವರು’ ಎಂದು ಕೇಳಲಾಯಿತು. ಇದಕ್ಕೆ ರಿಷಬ್ ಅವರು ಲೈಫ್​​ಲೈನ್ ತೆಗೆದುಕೊಂಡು, ‘ಗಣಪತಿ’ ಎಂದು ಸರಿಯಾದ ಉತ್ತರ ಕೊಟ್ಟರು. ಈ ಮೂಲಕ 12,50,000 ಸಾವಿರ ರೂಪಾಯಿ ಗೆದ್ದರು. ನಿಮ್ಮ ಫೌಂಡೇಷನ್​ಗೆ ‘ಹಿರೋ ಎಕ್ಸ್​ಟ್ರೀಮ್ 125’ ಬೈಕ್ ಕೂಡ ಸಿಗಲಿದೆ ಎಂದು ಅಮಿತಾಭ್ ಹೇಳಿದರು.

ಇದನ್ನೂ ಓದಿ: ರಜನಿಕಾಂತ್, ಮೋಹನ್​ಲಾಲ್ ಸ್ಟೈಲ್ ಅನುಕರಿಸಿದ ರಿಷಬ್ ಶೆಟ್ಟಿ; ದಂಗಾದ ಅಮಿತಾಭ್

ಆ ಬಳಿಕ ಸಮಯ ಪೂರ್ಣಗೊಂಡಿತು. ಹೀಗಾಗಿ, ಶೋನ ನಿಲ್ಲಿಸಿ, ರಿಷಬ್ ಖಾತೆಗೆ ಅಮಿತಾಭ್ ಬಚ್ಚನ್ ಅವರು 12.5 ಲಕ್ಷ ಹಣವನ್ನು ರಿಷಬ್ ಫೌಂಡೇಷನ್ ಖಾತೆಗೆ ವರ್ಗಾವಣೆ ಮಾಡಿದರು. ಇದಲ್ಲದೆ, 1500 ಕೆಜಿ ಅಕ್ಕಿ, 1,500 ಕೆಜಿ ಗೋಧಿ, 1500 ಕೆಜಿ ತುಪ್ಪವನ್ನು ಫೌಂಡೇಷನ್​ಗೆ ಸ್ಪಾನ್ಸರ್ ಕಡೆಯಿಂದ ನೀಡೋದಾಗಿ ಅಮಿತಾಭ್ ಘೋಷಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 8:26 am, Sat, 18 October 25