ಇನ್ನು ಕೆಲವೇ ದಿನಗಳಲ್ಲಿ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಆರಂಭ ಆಗಲಿದೆ. ಅದಕ್ಕಾಗಿ ಸಕಲ ತಯಾರಿ ನಡೆದಿದೆ. ಕಿಚ್ಚ ಸುದೀಪ್ ಅವರು ಎಂದಿನ ಉತ್ಸಾಹದಲ್ಲಿ ನಿರೂಪಣೆ ಮಾಡಲು ಬರುತ್ತಿದ್ದಾರೆ. ಇತ್ತೀಚೆಗಷ್ಟೇ ಹೊಸ ಪ್ರೋಮೋ ಬಿಡುಗಡೆ ಮಾಡಲಾಯಿತು. ಅದರಲ್ಲಿ ಈ ಬಾರಿಯ ಥೀಮ್ ಏನು ಎಂಬುದನ್ನು ತಿಳಿಸಲಾಯಿತು. ಸ್ವರ್ಗ ಮತ್ತು ನರಕ ಎಂಬ ಥೀಮ್ನೊಂದಿಗೆ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋ ಶುರುವಾಗಲಿದೆ. ಹಾಗಾಗಿ ಆರಂಭದಿಂದಲೇ ಫೈಟ್ ಇರಲಿದೆ ಎಂಬುದು ಖಚಿತ. ಅದೇ ರೀತಿ ಹಿಂದಿ ಬಿಗ್ ಬಾಸ್ನಲ್ಲಿ ಈ ವರ್ಷದ ಥೀಮ್ ಏನು ಎಂಬ ಬಗ್ಗೆ ಸಲ್ಮಾನ್ ಖಾನ್ ಸುಳಿವು ನೀಡಿದ್ದಾರೆ.
ಹಿಂದಿಯಲ್ಲಿ ಈವರೆಗೂ 17 ಸೀಸನ್ಗಳು ಯಶಸ್ವಿಯಾಗಿ ನಡೆದಿವೆ. 18ನೇ ಸೀಸನ್ ರಂಗೇರಲಿದೆ. ಬೇರೆ ಭಾಷೆಯ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಹೋಲಿಸಿದರೆ ಹಿಂದಿ ಬಿಗ್ ಬಾಸ್ ಯಾವಾಗಲೂ ಕೊಂಚ ಜಾಸ್ತಿ ಖಡಕ್ ಆಗಿರುತ್ತದೆ. ಅಲ್ಲಿ ಕಾಂಟ್ರವರ್ಸಿಗಳು ಹೆಚ್ಚಾಗಿ ಇರುತ್ತದೆ. ಅದರ ಬಜೆಟ್ ಕೂಡ ಭರ್ಜರಿಯಾಗಿರುತ್ತದೆ. ಈ ಬಾರಿ ಟೈಮ್ ಎಂಬ ಕಾನ್ಸೆಪ್ಟ್ನೊಂದಿಗೆ ಶೋ ಆರಂಭ ಆಗಲಿದೆ.
ಇದನ್ನೂ ಓದಿ: ‘ಬಿಗ್ ಬಾಸ್ 11’ ಸಂಭಾವನೆ ವಿಚಾರ ಕೇಳಿದ್ದಕ್ಕೆ ಕಿಚ್ಚ ಸುದೀಪ್ ಉತ್ತರ ಏನು?
ಹೊಸ ಪ್ರೋಮೋದಲ್ಲಿ ಸಲ್ಮಾನ್ ಖಾನ್ ಅವರು ಸಮಯದ ತಾಂಡವದ ಬಗ್ಗೆ ಮಾತನಾಡಿದ್ದಾರೆ. ಭೂತ, ವರ್ತಮಾನ ಮತ್ತು ಭವಿಷ್ಯವನ್ನು ಬಿಗ್ ಬಾಸ್ ಕಣ್ಣಿನಲ್ಲಿ ಕಾಣುತ್ತದೆ ಎನ್ನಲಾಗಿದೆ. ಈ ವರ್ಷ ಸ್ಪರ್ಧಿಗಳ ಭವಿಷ್ಯವನ್ನು ಬಿಗ್ ಬಾಸ್ ಬಹಿರಂಗಪಡಿಸುತ್ತದೆ. ಯಾರ ಭವಿಷ್ಯವನ್ನು ಯಾರು ಬದಲಿಸಲಿದ್ದಾರೆ ಎಂಬ ಪ್ರಶ್ನೆಯನ್ನು ಕೂಡ ಹೊಸ ಪ್ರೋಮೋದಲ್ಲಿ ಕೇಳಲಾಗಿದೆ. ಈ ಎಲ್ಲ ಕಾರಣದಿಂದ ‘ಬಿಗ್ ಬಾಸ್ 18’ ಶೋ ಬಗ್ಗೆ ಕೌತುಕ ಹೆಚ್ಚಾಗಿದೆ.
ಹಲವು ವರ್ಷಗಳಿಂದ ಸಲ್ಮಾನ್ ಖಾನ್ ಅವರು ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸಿಕೊಡುತ್ತಿದ್ದಾರೆ. ಸ್ಪರ್ಧಿಗಳು ತಪ್ಪು ಮಾಡಿದರೆ ಅವರು ಖಡಕ್ ಆಗಿ ಎಚ್ಚರಿಕೆ ನೀಡುತ್ತಾರೆ. ಯಾರಾದರೂ ಮಿತಿ ಮೀರಿ ನಡೆದುಕೊಂಡರೆ ಅವರನ್ನು ಮನೆಯಿಂದ ಹೊರಗೆ ಕಳಿಸುತ್ತಾರೆ. ಈ ಬಾರಿ ಅವರು ಇನ್ನಷ್ಟು ಖಡಕ್ ಆಗಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸಲ್ಮಾನ್ ಖಾನ್ ಅವರು ಈ ಶೋ ನಿರೂಪಣೆಗೆ ನೂರಾರು ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಾರೆ. ಈ ಬಾರಿ ಕನ್ನಡ, ತೆಲುಗು ಮುಂತಾದ ಭಾಷೆಗಳಲ್ಲಿ ಕೂಡ ಬಿಗ್ ಬಾಸ್ ಏಕಕಾಲಕ್ಕೆ ಪ್ರಸಾರ ಆಗಲಿದೆ. ಹಾಗಾಗಿ ಕ್ರೇಜ್ ಜಾಸ್ತಿ ಇರುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.