
ತೆಲುಗು ಬಿಗ್ಬಾಸ್ (Telugu Bigg Boss) ಮನೆಯಲ್ಲಿ ಸಂಜನಾ ಗಲ್ರಾನಿ ಸಖತ್ ಹವಾ ಎಬ್ಬಿಸಿದ್ದಾರೆ. ಮೊದಲ ದಿನದಿಂದಲೂ ಒಂದಲ್ಲ ಒಂದು ಕಾರಣಕ್ಕೆ ಸಂಜನಾ ಸದ್ದು, ಸುದ್ದಿ ಮಾಡುತ್ತಲೇ ಇದ್ದಾರೆ. ಮೊದಲ ದಿನ ಎಲ್ಲರನ್ನೂ ಪ್ರೀತಿಯಿಂದ ಮಾತನಾಡಿಸಿದ ಸಂಜನಾ, ಎರಡನೇ ದಿನಕ್ಕೆ ತಮ್ಮ ಆಟ ಶುರು ಮಾಡಿದರು. ಮನೆಯ ಸದಸ್ಯರೆಲ್ಲರೂ ವೀಕ್ಷಕರ ಮೆಚ್ಚಿಸಲು ಮುಖವಾಡ ಧರಿಸಿ ವರ್ತಿಸುತ್ತಿದ್ದರೆ ಸಂಜನಾ ಮಾತ್ರ, ಯಾವುದರ ಪರಿವೆ ಇಲ್ಲದೆ ತಮಗೆ ಅನಿಸಿದ್ದನ್ನು ಯಾವ ಮುಲಾಜಿಗೂ ಸಿಗದೆ ಮಾತನಾಡಿದರು. ಇದರಿಂದಾಗಿ ಇಡೀ ಮನೆಯ ವಿರೋಧ ಕಟ್ಟಿಕೊಂಡರು.
ಸಾಮೂಹಿಕ ನಾಮಿನೇಷನ್ ಮಾಡಬೇಕು ಎಂದು ಬಿಗ್ಬಾಸ್ ಹೇಳಿದಾಗ ಇಡೀ ಮನೆಯೇ ಒಂದಾಗಿ ಸಂಜನಾ ಅವರನ್ನು ನಾಮಿನೇಟ್ ಮಾಡಿತು. ಆದರೂ ಛಲ ಬಿಡದ ಸಂಜನಾ, ತಮ್ಮ ವರ್ತನೆಯಲ್ಲಿ ಬದಲಾವಣೆ ಮಾಡಿಕೊಳ್ಳಲಿಲ್ಲ. ತಪ್ಪನ್ನು ತಪ್ಪೆಂದು, ಸರಿಯನ್ನು ಸರಿ ಎಂದರು. ಮಾತ್ರವಲ್ಲದೆ ತಮ್ಮದು ತಪ್ಪು ಎನಿಸಿದಾಗ ತಮಗಿಂತಲೂ ಕಿರಿಯ ಕ್ಷಮೆ ಸಹ ಕೇಳಿದರು. ಮನೆಯ ಸದಸ್ಯರೆಲ್ಲರೂ ಸಂಜನಾ ವಿರುದ್ಧ ದೂರು, ಪಿತೂರಿ ಮಾಡುತ್ತಿರುವ ಹೊತ್ತಿನಲ್ಲಿ ಬಿಗ್ಬಾಸ್ ಸ್ವತಃ ಸಂಜನಾರ ಆಟವನ್ನು ಮೆಚ್ಚಿ ಕೊಂಡಾಡಿದರು. ಮಾತ್ರವಲ್ಲದೆ ಹೀಗೆಯೇ ಆಟವಾಡುತ್ತಿರಿ ಎಂದು ಸಲಹೆ ಸಹ ಕೊಟ್ಟು, ವಿಶೇಷ ಪವರ್ ಅನ್ನು ಸಹ ನೀಡಿದರು.
ಇಡೀ ಮನೆಯೇ ತಮ್ಮ ಎದುರು ನಿಂತಿರುವಾಗ ಒಬ್ಬಂಟಿಯಾದ ಸಂಜನಾ ಕುಗ್ಗುವ ಬದಲಿಗೆ ಅದನ್ನೇ ಸವಾಲಾಗಿ ಸ್ವೀಕರಿಸಿ ಇಡೀ ಮನೆಯನ್ನೇ ಮಣಿಸಿದ್ದಾರೆ. ಬಿಗ್ಬಾಸ್ ತೆಲುಗು ಸೀಸನ್ 9ರ ಮೊಟ್ಟ ಮೊದಲ ಕ್ಯಾಪ್ಟನ್ ಆಗಿದ್ದಾರೆ. ಸಂಜನಾ ಈ ವಾರ ಆಡಿದ ರೀತಿಗೆ ತೆಲುಗು ಪ್ರೇಕ್ಷಕರು ಉಘೆ ಎಂದಿದ್ದಾರೆ. ಈಗಿನ ಸನ್ನಿವೇಶದಲ್ಲಿ ಸಂಜನಾ, ತೆಲುಗು ಬಿಗ್ಬಾಸ್ನ ಫೇವರೇಟ್ ಸ್ಪರ್ಧಿ ಆಗಿಬಿಟ್ಟಿದ್ದಾರೆ. ಸಂಜನಾ ಪರವಾಗಿ ವೀಕ್ಷಕರು ನಿಂತಿದ್ದಾರೆ.
ಇದನ್ನೂ ಓದಿ:ತೆಲುಗು ಬಿಗ್ಬಾಸ್ನಲ್ಲಿ ಸಂಜನಾ ಗಲ್ರಾನಿಗೆ ಸಿಗುತ್ತಿರುವ ಸಂಭಾವನೆ ಎಷ್ಟು?
ಸಂಜನಾ, ಇಮಾನ್ಯುಯೆಲ್, ಶಾಸ್ತ್ರಿ, ಹರೀಶ್, ಡೀಮನ್ ಪವನ್ ಅವರುಗಳ ಪರವಾಗಿ ದಮ್ಮು ಶ್ರೀಜಾ, ಭರಣಿ, ರಾಮು ರಾಥೋಡ್, ಕಲ್ಯಾಣಿ, ಪ್ರಿಯ ಅವರುಗಳು ಟಾಸ್ಕ್ನಲ್ಲಿ ಭಾಗಿ ಆದರು. ಸಂಜನಾ ಪರವಾಗಿ ಸ್ಪರ್ಧೆಗೆ ಇಳಿದಿದ್ದ ಶ್ರೀಜಾ ಕ್ಲಿಷ್ಟಕರವಾದ ಟಾಸ್ಕ್ನಲ್ಲಿ ಗೆದ್ದು ಸಂಜನಾ ಮನೆಯ ಕ್ಯಾಪ್ಟನ್ ಆದರು. ಇದು ಹಲವರಿಗೆ ಬೇಸರ ತರಿಸಿದೆ. ಸಂಜನಾರ ವಿರುದ್ಧ ಪಿತೂರಿ ಮಾಡಿದ್ದ ಕೆಲ ಸ್ಪರ್ಧಿಗಳಿಗೆ ನಡುಕ ಶುರುವಾಗಿದೆ.
ಶನಿವಾರದ ಎಪಿಸೋಡ್ಗೆ ಬಂದ ನಾಗಾರ್ಜುನ ಸಹ ಸಂಜನಾರ ಆಟವನ್ನು ಅವರ ವರ್ತನೆಯನ್ನು ಹೊಗಳಿದ್ದಾರೆ. ಅದೇ ಆಟವನ್ನು ಮುಂದುವರೆಸುವಂತೆ ಹೇಳಿದ್ದಾರೆ. ಜೊತೆಗೆ ಸೀಸನ್ನ ಮೊದಲ ಕ್ಯಾಪ್ಟನ್ ಆಗಿದ್ದಕ್ಕೆ ಭೇಷ್ ಎಂದಿದ್ದಾರೆ ಸಹ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ