ಬಿಗ್ಬಾಸ್ 12: ಕಾಗೆ-ನರಿಯ ಕತೆ ಹೇಳಿದ ಸುದೀಪ್, ಕತೆ ಎಲ್ಲರಿಗೂ ಗೊತ್ತು, ಆದರೆ….
Bigg Boss Kannada 12: ಬಿಗ್ಬಾಸ್ ಕನ್ನಡ ಸೀಸನ್ 12 ಪ್ರಸಾರದ ದಿನಾಂಕ ಘೋಷಣೆ ಆಗಿದೆ. ಇಂದು ಬಿಗ್ಬಾಸ್ 12ರ ಹೊಸ ಪ್ರೋಮೋ ಬಿಡುಗಡೆ ಆಗಿದ್ದು, ಹೊಸ ಪ್ರೋಮೋನಲ್ಲಿ ಸುದೀಪ್ ಹಳೆಯ ಕತೆಯೊಂದನ್ನು ಹೇಳಿದ್ದಾರೆ. ಎಲ್ಲರೂ ಕೇಳಿರುವ ಕತೆಯೇ ಅದು, ಆದರೆ ಯಾರೂ ನಿರೀಕ್ಷಿಸದ ಟ್ವಿಸ್ಟ್ ಒಂದನ್ನು ಸುದೀಪ್ ಕತೆಯ ಕ್ಲೈಮ್ಯಾಕ್ಸ್ನಲ್ಲಿ ನೀಡಿದ್ದಾರೆ. ಅಷ್ಟಕ್ಕೂ ಸುದೀಪ್ ಆ ಕತೆ ಹೇಳಿದ್ದು ಯಾಕೆ?

ಬಿಗ್ಬಾಸ್ ಕನ್ನಡ ಸೀಸನ್ 12ರ ದಿನಾಂಕ ಈಗಾಗಲೇ ಘೋಷಣೆ ಆಗಿದೆ. 12ನೇ ಸೀಸನ್ ಸೆಪ್ಟೆಂಬರ್ 28ರಿಂದ ಪ್ರಸಾರ ಆರಂಭಿಸಲಿದೆ. ಸ್ಪರ್ಧಿಗಳ ಆಯ್ಕೆ ಅಂತಿಮಗೊಂಡಿದೆ. ಇನ್ನೇನಿದ್ದರು ಅದ್ಧೂರಿ ಇನ್ಯಾಗುರೇಷನ್ ಕಾರ್ಯಕ್ರಮ ನಡೆಯಬೇಕು. ಬಿಗ್ಬಾಸ್ 12ಕ್ಕೆ ಸಂಬಂಧಿಸಿದಂತೆ ಪ್ರೋಮೊ ಒಂದು ಈಗಾಗಲೇ ಬಿಡುಗಡೆ ಆಗಿದೆ. ಇದೀಗ ಮತ್ತೊಂದು ಪ್ರೋಮೋ ಬಿಡುಗಡೆ ಆಗಿದ್ದು, ಪ್ರೋಮೋನಲ್ಲಿ ಬಿಗ್ಬಾಸ್ ಎಪಿಸೋಡ್ ಪ್ರಸಾರವಾಗುವ ಸಮಯ ಘೋಷಣೆ ಮಾಡಲಾಗಿದೆ. ಅಂದಹಾಗೆ ಪ್ರೋಮೋನಲ್ಲಿ ಸುದೀಪ್ ಆಸಕ್ತಿಕರವಾದ ಕತೆಯೊಂದನ್ನು ಹೇಳಿದ್ದಾರೆ.
ಎಲ್ಲರಿಗೂ ಗೊತ್ತಿರುವ ಕಾಗೆ ಮತ್ತು ನರಿಯ ಕತೆಯನ್ನು ಸುದೀಪ್ ಈ ಹೊಸ ಪ್ರೋಮೋನಲ್ಲಿ ಹೇಳಿದ್ದಾರೆ. ಕಾಗೆ ಅಜ್ಜಿಯಿಂದ ವಡೆಯೊಂದನ್ನು ಪಡೆದು, ಅದನ್ನು ಬಾಯಲ್ಲಿ ಕಚ್ಚಿಕೊಂಡು ಇನ್ನೇನು ತಿನ್ನಬೇಕು ಎಂದಿದ್ದಾಗ ನರಿ ಬಂದು, ಕಾಗೆ, ನೀನು ಚೆನ್ನಾಗಿ ಹಾಡುತ್ತೀಯ, ನನಗಾಗಿ ಹಾಡು ಹಾಡು ಎನ್ನುತ್ತದೆ. ಕಾಗೆ ವಡೆ ಕಚ್ಚಿದ ಬಾಯಿ ತೆರೆದು ಹಾಡಲು ಶುರು ಮಾಡಿದ ಕೂಡಲೇ ವಡೆ ಬಾಯಿಂದ ಜಾರಿ ಬಿದ್ದು ನರಿಯ ಬಾಯಿ ಸೇರುತ್ತದೆ.
View this post on Instagram
ಆದರೆ ಈ ಕತೆಯ ಕ್ಲೈಮ್ಯಾಕ್ಸ್ ಅನ್ನು ಬದಲಿಸಿ ಹೇಳಿದರು. ಸುದೀಪ್, ನರಿ, ಕಾಗೆಗೆ ಹಾಡು ಎಂದಾಗ, ಆ ಕಾಗೆ ಬಾಯಲ್ಲಿ ಕಚ್ಚಿಕೊಂಡಿದ್ದ ವಡೆಯನ್ನು ಕೆಳಗೆ ಇಟ್ಟು ಅದನ್ನು ಕಾಲಲ್ಲಿ ಹಿಡಿದುಕೊಂಡು ಹಾಡು ಹಾಡುತ್ತದೆಯಂತೆ. ತನ್ನ ಯೋಜನೆ ತಲೆಕೆಳಗಾಗಿದ್ದು ನೋಡಿ ನರಿ ಹೊರಟು ಹೋಗುತ್ತದೆಯಂತೆ. ಹೀಗೆಂದು ಸುದೀಪ್ ಅವರು ಕಾಗೆ-ನರಿಯ ಕತೆಯನ್ನು ಬದಲಾಯಿಸಿ ಹೇಳಿದ್ದಾರೆ.
ಆದರೆ ಹೀಗೆ ಕತೆ ಬದಲಾಯಿಸಲು ಕಾರಣವಿದೆ. ಸುದೀಪ್ ಹೇಳಿರುವಂತೆ, ಈ ವರೆಗೆ 11 ಬಿಗ್ಬಾಸ್ ಸೀಸನ್ ಪ್ರಸಾರ ಆಗಿದೆ. ನಮಗೆ ಬಿಗ್ಬಾಸ್ ಅರ್ಥವಾಗಿದೆ, ಯಾವಾಗ ಏನಾಗುತ್ತದೆ, ಹೇಗೆ ನಡೆಯುತ್ತದೆ ಎಲ್ಲವೂ ಗೊತ್ತಿದೆ, ನಾವು ನಿರೀಕ್ಷಿಸಿದಂತೆಯೇ ಮನೆಯಲ್ಲಿ ಎಲ್ಲವೂ ನಡೆಯುತ್ತದೆ ಎಂದುಕೊಂಡಿದ್ದರೆ ಅದು ತಪ್ಪಂತೆ. ಈ ವರೆಗೆ ನಡೆಯದ ರೀತಿಯಲ್ಲಿ ಈ ಬಾರಿ ನಡೆಯಲಿದೆಯಂತೆ. ನಮಗೆ ಗೊತ್ತು ಎಂದುಕೊಂಡಿರುವವರು ಶಾಕ್ ಆಗುವಂತಿರುತ್ತದೆಯಂತೆ ಬಿಗ್ಬಾಸ್ ಸೀಸನ್ 12.
ಬಿಗ್ಬಾಸ್ ಸೀಸನ್ 12ರ ಇನ್ಯಾಗುರೇಷನ್ ಕಾರ್ಯಕ್ರಮದ ಪ್ರಸಾರ ಸೆಪ್ಟೆಂಬರ್ 28, ಸಂಜೆ 6:30ಕ್ಕೆ ಆಗುತ್ತದೆ. ಪ್ರತಿ ದಿನದ ಎಪಿಸೋಡ್ಗಳ ಪ್ರಸಾರ ರಾತ್ರಿ 9:30 ರಿಂದ 10:30ರ ವರೆಗೆ ನಡೆಯಲಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




