‘ಸೀತಾ ರಾಮ’ (Seetha Raama Serial) ಧಾರಾವಾಹಿ ಸಂಚಿಕೆ 34: ಸಿಹಿಯ ಸಣ್ಣ ಪುಟ್ಟ ತುಂಟಾಟ ರಾಮನನ್ನು ಚಿಕ್ಕ ಮಗುವಾಗಿಸುತ್ತದೆ. ಆಕೆಯ ತುಂಟಾಟ, ಅವಳ ಮಾತು ಎಲ್ಲವೂ ಅವನಿಗೆ ಖುಷಿ ಕೊಡುತ್ತದೆ. ಇದನ್ನೆಲ್ಲಾ ನೋಡುತ್ತಿದ್ದ ಸೀತಾ, ರಾಮನಿಗೆ ಅನೇಕ ಪ್ರಶ್ನೆಗಳ ಸುರಿಮಳೆಗೈಯುತ್ತಾಳೆ. ಹಳೆಯದನ್ನೆಲ್ಲಾ ಮರೆತು ಮುಂದೆ ಸಾಗಿ ಎನ್ನುತ್ತಾಳೆ. ರಾಮ ಅದೇ ಪ್ರಶ್ನೆಯನ್ನು ಸೀತಾಳಿಗೆ ಕೇಳುತ್ತಾನೆ. ಇಬ್ಬರ ಬಳಿಯಲ್ಲಿಯೂ ಅದಕ್ಕೆ ಸರಿಯಾದ ಉತ್ತರವಿಲ್ಲ. ಆದರೆ ಅವರಿಬ್ಬರು ಮಾತನಾಡುವ ರೀತಿ ಮಾತ್ರ ಸಿಹಿಗೆ ತುಂಬಾ ಖುಷಿ ಕೊಡುತ್ತದೆ.
ಊಟವಾದ ಮೇಲೆ ರೆಸ್ಟೋರೆಂಟ್ ಬಿಲ್ ಪಾವತಿಸಲು ಕೂಡ ರಾಮ್ ಬಳಿ ಹಣವಿರುವುದಿಲ್ಲ. ಅವರ ಬಳಿ ತನ್ನದೇ ಟ್ರೀಟ್ ಅಂತಲೂ ಹೇಳಿದ್ದರಿಂದ ತುಂಬಾ ಮುಜುಗರವೆನಿಸುತ್ತದೆ. ಸೀತಾ ಮತ್ತು ಸಿಹಿಯ ಬಳಿ ಹೇಳಿಕೊಳ್ಳಲಾಗದೇ ಅಶೋಕನಿಗೆ ಬಿಲ್ ಕಟ್ಟು ಎಂದು ಸಂದೇಶ ಕಳುಹಿಸುತ್ತಾನೆ. ಜೊತೆಗೆ ಈ ಊಟ ಫ್ರೀ ಅಂತಲೂ ಹೇಳುವಂತೆ ಮಾಡು ಎನ್ನುತ್ತಾನೆ. ಅಶೋಕ್, ರಾಮ ಹೇಳಿದ ಮಾತನ್ನು ಚಾಚು ತಪ್ಪದೇ ಹಾಗೆಯೇ ಪಾಲಿಸುತ್ತಾನೆ. ಇನ್ನು ಊಟ ಮುಗಿಸಿ ಮೂವರು ಪಾರ್ಕ್ ಕಡೆ ಮುಖ ಮಾಡುತ್ತಾರೆ. ಸಿಹಿಯ ಜೊತೆ ಆಟವಾಡುತ್ತಾ ರಾಮನೂ ಅವಳ ಜೊತೆಯಲ್ಲಿಯೇ ಖುಷಿ ಪಡುತ್ತಾನೆ. ಇದಕ್ಕೆಲ್ಲಾ ಅವಕಾಶ ಮಾಡಿಕೊಟ್ಟ ಸೀತಾಳಿಗೂ ಧನ್ಯವಾದ ಹೇಳುತ್ತಾನೆ. ಇನ್ನು ಅವಳಿಗೂ ತನ್ನ ಮಗಳು ತುಂಬಾ ಖುಷಿಯಾಗಿರುವುದನ್ನು ಕಂಡು ಮನಸ್ಸು ತುಂಬಿ ಬರುತ್ತದೆ.
ಸುಲೋಚನಾ ಕೋಪದಲ್ಲಿಯೇ ಸೀತಾಳ ಮನೆಗೆ ಬರುತ್ತಾಳೆ. ಮನೆಗೆ ಬೀಗ ಹಾಕಿರುವುದನ್ನು ನೋಡಿ ಇನ್ನೂ ಸಿಡಿಮಿಡಿಗೊಳ್ಳುತ್ತಾಳೆ. ಪಕ್ಕದಲ್ಲೇ ಇದ್ದ ಶಾಂತಜ್ಜಿಯ ಮನೆಗೆ ಹೋಗಿ ವಿಚಾರಿಸುತ್ತಾಳೆ. ಅಲ್ಲಿಯೂ ಇರದುದ್ದನ್ನು ನೋಡಿ, ಅವರ ಬಳಿಯೇ ಸೀತಾಳ ಮದುವೆಯ ವಿಚಾರ ಮಾತನಾಡುತ್ತಾಳೆ. ಅಜ್ಜಿಗೆ ಇವಳ ಕಪಟ ಗೊತ್ತಿಲ್ಲದೆಯೇ, ಸೀತಾಳಿಗೆ ಹುಡುಗನ ಹುಡುಕುತ್ತಿದ್ದಾಳೆ ಎಂಬ ಸುದ್ದಿ ಕೇಳಿ ಖುಷಿಯಾಗುತ್ತದೆ. ಅವಳಿಗೆ ಒಬ್ಬ ಹುಡುಗ ಸಿಕ್ಕರೇ ಸಾಕು ಎಂದು ಮನಸ್ಸಿನಲ್ಲಿಯೇ ಬೇಡಿಕೊಳ್ಳುತ್ತಾಳೆ.
ಬೇರೆ ಬೇರೆ ವಿಷಯಗಳ ಬಗ್ಗೆ ಮಾತನಾಡುತ್ತಿದ್ದ ಶ್ರೀರಾಮ, ಸೀತಾ ಬಳಿ ಅವಳ ಗಂಡನ ಬಗ್ಗೆ ಕೇಳುತ್ತಾನೆ. ಸತ್ಯ ಏನು ಎಂಬುದನ್ನು ರಾಮನಿಗೆ ಹೇಳುತ್ತಾಳಾ ಸೀತಾ? ಹಳೆ ಕಥೆ ತಿಳಿದುಕೊಳ್ಳುವಲ್ಲಿ ರಾಮ್ ಸಫಲನಾಗುತ್ತಾನಾ? ಕಾದು ನೋಡೋಣ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ