
ಬಿಗ್ಬಾಸ್ (Bigg Boss) ಮನೆಯಲ್ಲಿ ಒಮ್ಮೊಮ್ಮೆ ಊಟಕ್ಕೂ ತತ್ವಾರ ಉಂಟಾಗುತ್ತದೆ. ಮನೆ ಸ್ಪರ್ಧಿಗಳು ಸಹ ಸ್ಪರ್ಧಿಗಳ ಮೊಟ್ಟೆ, ಹಣ್ಣುಗಳನ್ನು ಕದ್ದು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತಾರೆ. ಆದರೆ ಬಿಗ್ಬಾಸ್ ಮನೆಯಲ್ಲಿ ಸಿಗರೇಟಿಗೆ ಬರ ಇರುವುದಿಲ್ಲ. ಸ್ಪರ್ಧಿಗಳು ಹೊರಗಿನಿಂದ ಬಟ್ಟೆಗಳನ್ನು ತರಿಸಿಕೊಂಡಂತೆ, ಸಿಗರೇಟುಗಳನ್ನು ಸಹ ತರಿಸಿಕೊಳ್ಳುತ್ತಾರೆ. ಸಿಗರೇಟು ಸೇದವವರಿಗಾಗಿ ಒಂದು ಪ್ರತ್ಯೇಕ ಸ್ಮೋಕಿಂಗ್ ರೂಂ ಅನ್ನು ಸಹ ಬಿಗ್ಬಾಸ್ ಮನೆಯಲ್ಲಿ ಮಾಡಿರುತ್ತಾರೆ. ಅದರ ಒಳಗೂ ಕ್ಯಾಮೆರಾಗಳು ಇರುತ್ತವೆ. ಆದರೆ ಇದೀಗ ಸುದೀಪ್ ಆ ಸ್ಮೋಕಿಂಗ್ ರೂಂಗೆ ಬೀಗ ಹಾಕಿಸಿದ್ದಾರೆ.
ಸುದೀಪ್ ಅವರು ಬಿಗ್ಬಾಸ್ನ ಸ್ಮೋಕಿಂಗ್ ರೂಂಗೆ ಬೀಗ ಹಾಕಿಸಲು ಕಾರಣವಾಗಿದ್ದ ಕಾಕ್ರೂಚ್ ಸುಧಿ ಅವರು. ಈ ವಾರ ಕಳಪೆ ಪಟ್ಟ ಗಿಲ್ಲಿ ನಟನಿಗೆ ದೊರೆತಿತ್ತು. ಅಸಲಿಗೆ ಈ ವಾರ ಕಾಕ್ರೂಚ್ ಸುಧಿ ಸಹ ಮನೆಯ ಯಾವ ಪ್ರಕ್ರಿಯೆಗಳಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಬದಲಿಗೆ ಅವರಿವರ ಅಣ್ಣು ಕಳ್ಳತನ ಮಾಡಿ ತಿಂದುಕೊಂಡು ಓಡಾಡಿಕೊಂಡು ಇದ್ದರು. ಸುದೀಪ್ ಅವರು, ಸುಧಿ, ಹಣ್ಣು ಕದ್ದು ತಿಂದ ವಿಡಿಯೋ ಅನ್ನು ಸಹ ಪ್ಲೇ ಮಾಡಿದರು.
ಬಳಿಕ ಕಾಕ್ರೂಚ್ ಸುಧಿ ಜೊತೆಗೆ ಮಾತನಾಡಿದ ಸುದೀಪ್, ‘ಏನು ಸುಧಿ, ಗಿಲ್ಲಿ ನಟ ಕಳಪೆಗೆ ಅರ್ಹನಾಗಿದ್ದನಾ? ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಸುಧಿ, ಖಂಡಿತ ಇಲ್ಲ ಅಣ್ಣ. ಪಾಪ ಗಿಲ್ಲಿ ಕಳಪೆ ಹುಡುಗ ಅಲ್ಲ, ಅವ ಎಂದೂ ಕಳಪೆ ಆಗುವ ಕೆಲಸ ಮಾಡಲ್ಲ’ ಎಂದರು. ಹಾಗಿದ್ದರೆ ನೀವೇಕೆ ಗಿಲ್ಲಿಗೆ ಕಳಪೆ ಎಂಬ ಪಟ್ಟ ಕೊಟ್ಟೆ ಎಂದು ಸುದೀಪ್ ಕೇಳಿದರು. ಅದಕ್ಕೆ ಸುಧಿ ನೀಡಿದ ಉತ್ತರ ಮಜವಾಗಿತ್ತು, ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು.
ಇದನ್ನೂ ಓದಿ:ಬಿಗ್ಬಾಸ್ ಮನೆಯಲ್ಲಿ ಗಿಲ್ಲಿ ಮತ್ತು ಧನುಶ್ ಗೆಳೆತನ ನೋಡಿ: ವಿಡಿಯೋ
ಅಸಲಿಗೆ ಕಳಪೆ ಆಯ್ಕೆ ನಡೆಯುವಾಗ ಒಂದು ಹಂತದಲ್ಲಿ ಗಿಲ್ಲಿ ಮತ್ತು ಸುಧಿ ಅವರಿಗೆ ಸಮಬಲದ ಮತಗಳು ಬಿದ್ದಿದ್ದವು. ಸುಧಿಗೆ ಆರು ಓಟು, ಗಿಲ್ಲಿಯೂ ಆರು ಓಟು ಬಿದ್ದಿತ್ತು. ಹಾಗಾಗಿ ಜಾಣತನ ಮೆರೆದ ಸುಧಿ, ತನ್ನ ಓಟನ್ನು ಗಿಲ್ಲಿಗೆ ಹಾಕಿ ಗಿಲ್ಲಿಯನ್ನು ಜೈಲಿಗೆ ಕಳಿಸಿದ. ಈ ವಿಷಯವನ್ನು ಸುದೀಪ್ ಎದುರು ಸುಧಿ ಒಪ್ಪಿಕೊಂಡರು. ಆದರೆ ಸುದೀಪ್, ‘ಕಳೆದ ವಾರ ನಿಮ್ಮ ಆಪ್ತ ಮೇಡಂ (ಅಶ್ವಿನಿ) ಅವರೇ ಜೈಲಿಗೆ ಹೋಗಿ ಬಂದಿದ್ದರು ಎಂದಮೇಲೆ, ನೀವು ಜೈಲಿಗೆ ಹೋಗಲು ಹಿಂದೇಟು ಏಕೆ? ಎಂದು ಪ್ರಶ್ನಿಸಿದರು.
ಅದಕ್ಕೆ ಸುಧಿ, ಜೈಲಿಗೆ ಹೋಗಲು ಭಯ ಏನೂ ಇಲ್ಲ ಅಣ್ಣ, ಆದರೆ ಜೈಲಿಗೆ ಹೋದವರಿಗೆ ಬಾತ್ರೂಂಗೆ ಬಿಟ್ಟರೆ ಇನ್ಯಾವುದಕ್ಕೂ ಹೊರಕ್ಕೆ ಬಿಡುವುದಿಲ್ಲ ಎಂದು ಕ್ಯಾಪ್ಟನ್ ಮಾಳು ಹೇಳಿದ್ದ, ಜೈಲಿಗೆ ಹೋದರೆ ಅಗ್ನಿ ಮೂಲೆಗೆ ಹೋಗಲು ಆಗಲ್ಲ (ಅಗ್ನಿ ಮೂಲೆ ಎಂದರೆ ಸಿಗರೇಟು ಸೇದಲು ಇರುವ ಸ್ಮೋಕಿಂಗ್ ರೂಂ), ಅದಿಲ್ಲದಿದ್ದರೆ ನನಗೆ ಕಷ್ಟ, ಹಾಗಾಗಿ ನಾನು ಗಿಲ್ಲಿಗೆ ಓಟು ಹಾಕಿ, ಅವರನ್ನು ಜೈಲಿಗೆ ಕಳಿಸಿದೆ’ ಎಂದರು.
ಸುಧಿ ಉತ್ತರ ಕೇಳಿ ನಕ್ಕ ಸುದೀಪ್, ಆ ಬಳಿಕ ಬಿಗ್ಬಾಸ್ ಬಳಿ ಮನವಿ ಮಾಡಿಕೊಂಡು, ಬಿಗ್ಬಾಸ್ ಅವರೇ ದಯವಿಟ್ಟು ಎರಡು ವಾರಗಳ ಕಾಲ ಆದರೂ ಸಹ ಅಗ್ನಿ ಮೂಲೆಗೆ ಬೀಗ ಹಾಕಿಸಿ, ಇದು ನಿಮ್ಮ ಮೂಲಕ ಜನರ ಹಿತಕ್ಕಾಗಿ ನಾನು ಮಾಡುತ್ತಿರುವ ಮನವಿ’ ಎಂದು ಸುದೀಪ್ ಹೇಳಿದರು. ಆ ಮೂಲಕ ಸ್ಮೋಕಿಂಗ್ ರೂಂಗೆ ಎರಡು ವಾರ ರಜೆ ಹಾಕಿಸಿದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ