ಮುಂಬೈನಲ್ಲಿ ಈ ಭೀಕರ ಘಟನೆ ನಡೆದಿದೆ. ಆಸ್ತಿಗಾಗಿ ಹಿರಿಯ ನಟಿ ವೀಣಾ ಕಪೂರ್ (Actress Veena Kapoor) ಅವರನ್ನು ಸ್ವಂತ ಮಗನೇ ಕೊಲೆ ಮಾಡಿರುವ ವಿಷಯ ಬೆಳಕಿಗೆ ಬಂದಿದೆ. ಹಿಂದಿ ಸೀರಿಯಲ್ ಹಾಗೂ ಸಿನಿಮಾಗಳಲ್ಲಿ ನಟಿಸಿ ವೀಣಾ ಕಪೂರ್ ಜನಪ್ರಿಯತೆ ಪಡೆದಿದ್ದರು. ಅವರಿಗೆ 74 ವರ್ಷ ವಯಸ್ಸಾಗಿತ್ತು. ಅವರು ಸ್ವಂತ ಮಗನಿಂದಲೇ ಹತ್ಯೆಗೀಡಾದ (Veena Kapoor Death) ಸುದ್ದಿ ಕೇಳಿ ಹಿಂದಿ ಕಿರುತೆರೆ ಮಂದಿ ಬೆಚ್ಚಿ ಬಿದ್ದಿದ್ದಾರೆ. ಘಟನೆ ಕುರಿತಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಮಗ ಸಚಿನ್ ಕಪೂರ್ (Sachin Kapoor) ಹಾಗೂ ವೀಣಾ ಕಪೂರ್ ನಡುವೆ ವಾಗ್ವಾದ ಏರ್ಪಟ್ಟಿತ್ತು. ಈ ವೇಳೆ ಪರಿಸ್ಥಿತಿ ಕೈ ಮೀರಿ ತಾಯಿಯ ಹತ್ಯೆ ಮಾಡಿರುವುದಾಗಿ ಸಚಿನ್ ಕಪೂರ್ ಒಪ್ಪಿಕೊಂಡಿದ್ದಾನೆ ಎಂದು ವರದಿ ಆಗಿದೆ.
12 ಕೋಟಿ ರೂಪಾಯಿ ಆಸ್ತಿಗಾಗಿ ಜಗಳ:
ವೀಣಾ ಕಪೂರ್ ಅವರು ನಾಪತ್ತೆ ಆಗಿದ್ದಾರೆ ಎಂದು ಕಲ್ಪತರು ಸೊಸೈಟಿಯ ಭದ್ರತಾ ಸಿಬ್ಬಂದಿಗಳು ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ವಿಚಾರಣೆ ನಡೆಸಿದಾಗ ಹತ್ಯೆ ವಿಚಾರವನ್ನು ಸಚಿನ್ ಕಪೂರ್ ಬಾಯಿ ಬಿಟ್ಟಿದ್ದಾನೆ. 12 ಕೋಟಿ ರೂಪಾಯಿ ಮೌಲ್ಯದ ಫ್ಲಾಟ್ ಕುರಿತಾಗಿ ಅಮ್ಮನ ಜೊತೆ ಜಗಳ ಆರಂಭ ಆಯಿತು ಎಂದು ಆತ ಹೇಳಿದ್ದಾನೆ.
ನದಿಗೆ ಶವ ಎಸೆದ ಹಂತಕ:
ವೀಣಾ ಕಪೂರ್ ಮತ್ತು ಸಚಿನ್ ಕಪೂರ್ ನಡುವೆ ಮಾತಿನ ಚಕಮಕಿ ನಡೆದಿತ್ತು. ಸಿಟ್ಟಿನಲ್ಲಿ ಬೇಸ್ಬಾಲ್ ಬ್ಯಾಟ್ನಿಂದ ತಲೆಗೆ ಹೊಡೆದ ಪರಿಣಾಮ ವೀಣಾ ಅವರು ಕೊನೆಯುಸಿರು ಎಳೆದರು. ಬಳಿಕ ಅವರ ಶವನನ್ನು ರಾಯಘಡ ಜಿಲ್ಲೆಯ ನದಿಯೊಂದರಲ್ಲಿ ಎಸೆದು ಬಂದಿದ್ದನ್ನು ಸಚಿನ ಕಪೂರ್ ಒಪ್ಪಿಕೊಂಡಿದ್ದಾನೆ ಎಂದು ವರದಿ ಆಗಿದೆ.
ಇದನ್ನೂ ಓದಿ: Shocking News: ಹಿಂದಿ ಸೀರಿಯಲ್ ನೋಡಿ ಆತ್ಮಹತ್ಯೆಯ ನಾಟಕವಾಡಿದ ಯುವತಿ; ಆಮೇಲೆ ಬಯಲಾಯ್ತು ಕೊಲೆ ರಹಸ್ಯ!
ವೀಣಾ ಕಪೂರ್ ಅವರ ಇನ್ನೋರ್ವ ಪುತ್ರ ಅಮೆರಿಕದಲ್ಲಿ ವಾಸವಾಗಿದ್ದಾರೆ. ಸದ್ಯ ಸಚಿನ್ ವಿರುದ್ಧ ಐಪಿಸಿ ಸೆಕ್ಷನ್ 302, 201, 31ರ ಅಡಿಯಲ್ಲಿ ಕೇಸ್ ದಾಖಲಿಸಲಾಗಿದ್ದು, ವಿಚಾರಣೆ ಪ್ರಗತಿಯಲ್ಲಿದೆ. ಟಿವಿ ನಟಿ ನೀಲೂ ಕೊಹ್ಲಿ ಅವರು ವೀಣಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಹಿರಿಯ ನಟಿಯ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಅವರು ಪ್ರಾರ್ಥಿಸಿದ್ದಾರೆ.
ಇದನ್ನೂ ಓದಿ: ಕುಡಿಯಲು ಹಣ ಕೊಡಲಿಲ್ಲವೆಂದು ಪತ್ನಿಯನ್ನು ಅಮಾನುಷವಾಗಿ ಹತ್ಯೆಗೈದ ಪತಿ: ತಂದೆ ಕೃತ್ಯಕ್ಕೆ ಕೈಜೋಡಿಸಿದ ಪಾಪಿ ಮಗ
‘ನಾನು ಮತ್ತು ವೀಣಾ ಅವರು 5 ವರ್ಷ ಜೊತೆಯಾಗಿ ಕೆಲಸ ಮಾಡಿದ್ದೆವು. ಆದರೆ ಕೊರೊನಾ ಬಳಿಕ ನಮ್ಮ ಸಂಪರ್ಕ ತಪ್ಪಿತು. ನಾನು ನನ್ನ ಪ್ರಾಜೆಕ್ಟ್ಗಳಲ್ಲಿ ಬ್ಯುಸಿ ಆದೆ. ಅವರು ನಿಧನರಾಗಿದ್ದಾರೆ ಎಂಬುದನ್ನು ನಂಬಲು ಸಾಧ್ಯವಾಗುತ್ತಿಲ್ಲ’ ಎಂದು ನೀಲೂ ಕೊಹ್ಲಿ ಹೇಳಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:57 pm, Sun, 11 December 22