ಬಿಗ್ ಬಾಸ್ (Bigg Boss) ಮನೆಯಲ್ಲಿರುವ ವಿನಯ್ ಗೌಡ (Vinay Gowda) ಅವರ ಬಗ್ಗೆ ನೆಗೆಟಿವ್ ಮಾತು ಶುರುವಾಗಿದೆ. ಅವರು ನಡೆದುಕೊಳ್ಳುತ್ತಿರುವುದು ಆ ರೀತಿಯಲ್ಲಿದೆ. ಎಲ್ಲರ ಮೇಲೆ ಏಕವಚನ ಪ್ರಯೋಗ ಮಾಡುತ್ತಾರೆ. ಆ ಬಳಿಕ ತಮಗೆ ಗೌರವ ಸಿಗಬೇಕು ಎಂದು ನಿರೀಕ್ಷೆ ಮಾಡುತ್ತಾರೆ. ಈ ಬಾರಿ ಮಹಿಳೆಯರ ಬಗ್ಗೆ ಅವರು ಬಳಕೆ ಮಾಡಿದ ಅವಾಚ್ಯ ಶಬ್ದಗಳು ಒಂದೆರಡಲ್ಲ. ಮಾಡುವುದನ್ನೆಲ್ಲ ಮಾಡಿ, ಹೇಳುವುದನ್ನೆಲ್ಲ ಹೇಳಿ ಕೊನೆಗೆ ಅವರು ಕ್ಷಮೆ ಕೇಳಿದ್ದಾರೆ. ಇದು ನಾಟಕದ ಕ್ಷಮೆ ಎಂದು ವೀಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ಮೊದಲ ವಾರ ಸಂಗೀತಾ ಹಾಗೂ ವಿನಯ್ ನಡುವೆ ಕಿತ್ತಾಟ ನಡೆಯಿತು. ಇದು ಸಾಮಾನ್ಯ ರೀತಿಯಲ್ಲೇ ಇತ್ತು. ಕಳೆದ ವಾರ ಸುದೀಪ್ ಅವರು ವಿನಯ್ ಅವರನ್ನು ಆನೆ ಎಂದು ಹೊಗಳಿದ ಬಳಿಕ ಅವರು ನಡೆದುಕೊಳ್ಳುವ ರೀತಿ ಬದಲಾಯಿತು. ಈ ವಾರ ಅವರಿಗೆ ಮಿತಿಯೇ ಇಲ್ಲ ಎಂಬ ರೀತಿಯಲ್ಲಿ ನಡೆದುಕೊಂಡರು. ಅನೇಕರ ಮನಸ್ಸನ್ನು ನೋಯಿಸಿದರು. ಅವಾಚ್ಯ ಶಬ್ದ ಬಳಕೆ ಮಾಡಿದರು.
ಕಳೆದ ವಾರ ಎಲಿಮಿನೇಟ್ ಆಗಿದ್ದರೂ ಭಾಗ್ಯಶ್ರೀ ಅವರು ಉಳಿದುಕೊಂಡರು. ಜನರ ಕೋರಿಕೆ ಮೇರೆಗೆ ಈ ವಾರ ಎಲಿಮಿನೇಷನ್ ಇರಲ್ಲ ಎಂದು ಸುದೀಪ್ ಘೋಷಿಸಿದರು. ಈ ವಿಚಾರ ಇಟ್ಟುಕೊಂಡು ಭಾಗ್ಯಶ್ರೀಗೆ ನೋಯಿಸಿದ್ದಾರೆ ವಿನಯ್. ‘ಅವರು ದಸರಾ ಹಬ್ಬದ ಕಾರಣಕ್ಕೆ ಉಳಿದುಕೊಂಡರು. ಇಲ್ಲದಿದ್ದರೆ ಎಲಿಮಿನೇಟ್ ಆಗುತ್ತಿದ್ದರು’ ಎಂದಿದ್ದರು. ಇದು ಭಾಗ್ಯಶ್ರೀಗೆ ನೋವು ತಂದಿತ್ತು. ಅವರು ಸಾಕಷ್ಟು ಕಣ್ಣೀರು ಹಾಕಿದರು.
ಇನ್ನು, ಸಂಗೀತಾ ಹಾಗೂ ತನಿಷಾ ವಿಚಾರದಲ್ಲಿ ಅವರು ಏಕವಚನ ಬಳಕೆ ಮಾಡಿದ್ದರು. ‘ಗಂಡಸರ ರೀತಿ ಆಡು, ಬಳೆ ಹಾಕಿಕೊಂಡವರ ರೀತಿ ಆಡಬೇಡ’ ಎಂದು ಮಹಿಳೆಯರಿಗೆ ಅವಮಾನ ಮಾಡಿದ್ದರು. ಈ ವಿಚಾರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಆಗಿತ್ತು.
ಇದನ್ನೂ ಓದಿ: ಬಿಗ್ ಬಾಸ್ ಎಫೆಕ್ಟ್: ‘ಸೀತಾ ರಾಮ’ ಧಾರಾವಾಹಿ ಟಿಆರ್ಪಿಯಲ್ಲಿ ಇಳಿಕೆ; ಇಲ್ಲಿದೆ ವಿವರ
ಟಾಸ್ಕ್ ಎಲ್ಲವೂ ಮುಗಿದ ಬಳಿಕ ವಿನಯ್ ಗೌಡ ಅವರು ಕ್ಷಮೆ ಕೇಳಿದರು. ‘ನನ್ನಿಂದ ತಪ್ಪಾಗಿದ್ದರೆ, ನಾನು ಕೆಟ್ಟ ಶಬ್ದ ಬಳಕೆ ಮಾಡಿದರೆ ನಮ್ಮ ಮನೆತನದವರಿಗೆ ಹಾಗೂ ಸಂಗೀತಾ ಮನೆತನದವರಿಗೆ ಕ್ಷಮೆ ಕೇಳುತ್ತೇನೆ’ ಎಂದಿದ್ದಾರೆ ವಿನಯ್. ಈ ಕ್ಷಮೆಯನ್ನು ನಾವು ಒಪ್ಪಲ್ಲ ಎಂದಿದ್ದಾರೆ ಪ್ರೇಕ್ಷಕರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:41 am, Fri, 3 November 23