ಚಿನ್ನ ಅಡವಿಟ್ಟು ಚುನಾವಣೆ ಸ್ಪರ್ಧಿಸಿ ಸೋತಿದ್ದ ಡಿ.ಕೆ.ಶಿವಕುಮಾರ್: ಎದುರಾಳಿ ಯಾರು? ಬೆಂಬಲಿಸಿದವರು ಯಾರು?
Weekend With Ramesh: ವಿಧಾನಸಭೆ ಪ್ರವೇಶಿಸಿದ ಅತ್ಯಂತ ಕಿರಿಯ ವಯಸ್ಸಿನ ಶಾಸಕ ಡಿಕೆ ಶಿವಕುಮಾರ್. ವೀಕೆಂಡ್ ವಿತ್ ರಮೇಶ್ಗೆ ಆಗಮಿಸಿದ್ದಾಗ ತಮ್ಮ ಮೊದಲ ಚುನಾವಣೆ ಬಗ್ಗೆ ಡಿಕೆಶಿ ಮಾತನಾಡಿದ್ದಾರೆ.
ಸತತ ಎಂಟು ಬಾರಿ ಶಾಸಕರಾಗಿ ಐದು ಬಾರಿ ಸಚಿವರಾಗಿ ಆಯ್ಕೆ ಆಗಿರುವ ಡಿ.ಕೆ.ಶಿವಕುಮಾರ್ (DK Shivakumar) ಅವರದ್ದು ಯಶಸ್ವಿ ರಾಜಕೀಯ ಜೀವನ. ಆದರೆ ಈ ಯಶಸ್ವಿ ರಾಜಕೀಯ ಜೀವನ ಶುರುವಾಗಿದ್ದು ಮಾತ್ರ ಸೋಲಿನಿಂದ. ಪದವಿ ಪರೀಕ್ಷೆಯ ಅಂತಿಮ ವರ್ಷದಲ್ಲಿರುವಾಗಲೇ ಡಿ.ಕೆ.ಶಿವಕುಮಾರ್ಗೆ ವಿಧಾನಸಭೆ ಚುನಾವಣೆ (Assembly election) ಟಿಕೆಟ್ ದೊರಕಿತ್ತು ಕಾಂಗ್ರೆಸ್ ಪಕ್ಷದಿಂದ. ಅದೂ ಬಹುದೊಡ್ಡ ಎದುರಾಳಿ ವಿರುದ್ಧ. ಆ ಚುನಾವಣೆಯಲ್ಲಿ ಡಿಕೆಶಿ ಸೋತರಾದರೂ ಆ ಚುನಾವಣೆ ಕಲಿಸಿದ ಪಾಠ ಮಹತ್ವದ್ದು. ಈ ಬಗ್ಗೆ ವೀಕೆಂಡ್ ವಿತ್ ರಮೇಶ್ನಲ್ಲಿ ಡಿ.ಕೆ.ಶಿವಕುಮಾರ್ ಮಾತನಾಡಿದ್ದಾರೆ.
1985ರಲ್ಲಿ ಡಿ.ಕೆ.ಶಿವಕುಮಾರ್ಗೆ ವಯಸ್ಸಿನ್ನೂ 23 ವರ್ಷ. ಆದರೆ ಆಗಲೇ ಅವರಿಗೆ ಕಾಂಗ್ರೆಸ್ ಪಕ್ಷದ ವಿಧಾನಸಭೆ ಟಿಕೆಟ್ ದೊರಕಿತ್ತು. ಅವರ ಎದುರಾಳಿ ಈ ದೇಶ ಕಂಡ ಧುರಿಣ ರಾಜಕಾರಣಿ ಎಚ್ಡಿಕೆ ದೇವೇಗೌಡ. ಅನುಭವವಿಲ್ಲದೆ ಮೊದಲ ಚುನಾವಣೆ ಎದುರಿಸಿದ ಡಿ.ಕೆ.ಶಿವಕುಮಾರ್ ಬಳಿ ಆಗ ಚುನಾವಣೆ ಎದುರಿಸಲು ಬೇಕಾಗುವಷ್ಟು ಹಣವಿರಲಿಲ್ಲ. ಅಮ್ಮನ, ಸಹೋದರಿಯ ಚಿನ್ನವನ್ನೆಲ್ಲ ಅಡವಿಟ್ಟು ಚುನಾವಣೆ ಎದುರಿಸಿದರಂತೆ. ಆಗ ಹರಿ ಕೋಡೆ ಅವರು ಸಹ ಡಿ.ಕೆ.ಶಿವಕುಮಾರ್ ಅವರಿಗೆ ಸಹಾಯ ಮಾಡಿದ್ದರಂತೆ.
ಯೂತ್ ಕಾಂಗ್ರೆಸ್ ಅಧ್ಯಕ್ಷರಾಗಿದ್ದ ಶ್ರೀನಿವಾಸ ಪ್ರಸಾದ್, ವೀರಪ್ಪ ಮೊಯ್ಲಿ ಅವರುಗಳಿಗೆ ಡಿ.ಕೆ.ಶಿವಕುಮಾರ್ ಮೇಲೆ ನಂಬಿಕೆ ಮತ್ತು ಸಾಫ್ಟ್ ಕಾರ್ನರ್ ಇದ್ದ ಕಾರಣ ಅವರಿಗೆ ಮೊದಲ ಬಾರಿಗೆ ಟಿಕೆಟ್ ನೀಡಿದ್ದರು. ಆದರೆ ಮೊದಲ ಚುನಾವಣೆಯಲ್ಲಿ ಡಿ.ಕೆ.ಶಿವಕುಮಾರ್ ಸೋತರು. ಆದರೆ ಅದಾದ ಎರಡನೇ ವರ್ಷಕ್ಕೆ ಸಾತನೂರು ಕ್ಷೇತ್ರದಿಂದಲೇ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಸದಸ್ಯರಾಗಿ ಆಯ್ಕೆ ಆದರು. ಅದಾದ ಬಳಿಕ 1989ರಲ್ಲಿ ಮತ್ತೆ ಕಾಂಗ್ರೆಸ್ ಟಿಕೆಟ್ನಿಂದ ಸ್ಪರ್ಧಿಸಿ ಗೆದ್ದು ಅತ್ಯಂತ ಕಿರಿಯ ವಯಸ್ಸಿನ ಶಾಸಕ ಎನಿಸಿಕೊಂಡರು ಡಿ.ಕೆ.ಶಿವಕುಮಾರ್.
ಮೊದಲ ಬಾರಿ ಶಾಸಕರಾಗಿ ಆಯ್ಕೆ ಆದಾಗಲೇ ಮೊದಲ ಬಾರಿ ಸಚಿವರೂ ಆದರು ಡಿ.ಕೆ.ಶಿವಕುಮಾರ್. ಆದರೆ ಅದಾದ ಬಳಿಕ 1994 ರ ಚುನವಾಣೆಯಲ್ಲಿ ಕಾಂಗ್ರೆಸ್ನಿಂದ ಟಿಕೆಟ್ ಸಹ ಸಿಗದೆ ಸ್ವತಂತ್ರ್ಯವಾಗಿ ಸ್ಪರ್ಧಿಸಿ ಗೆದ್ದು ಬಂದರು. ಅದಾದ ಬಳಿಕ 1999 ರಲ್ಲಿ ಎಚ್ಡಿ ಕುಮಾರಸ್ವಾಮಿ ವಿರುದ್ಧ ಗೆದ್ದು, ತಂದೆಯ ಮೇಲೆ ಸೋತಿದ್ದ ಸೋಲಿನ ಸೇಡು ತೀರಿಸಿಕೊಂಡರು. ತಮ್ಮ ಚುನಾವಣಾ ರಾಜಕೀಯದಲ್ಲ ಪಿಜಿಆರ್ ಸಿಂಧ್ಯ ಅಂಥಹವರನ್ನೂ ಸೋಲಿಸಿದ್ದಾರೆ ಡಿಕೆಶಿ. ಮೊದಲ ಚುನಾವಣೆಯಲ್ಲಿ ಸೋಲಸಿದ್ದ ದೇವೇಗೌಡರಿಗೆ ತೇಜಸ್ವಿ ಅವರನ್ನು ಎದುರಿಗೆ ನಿಲ್ಲಿಸಿ ಸೋಲಿಸಿದ ಶ್ರೇಯವೂ ಡಿಕೆ ಶಿವಕುಮಾರ್ ಅವರದ್ದೇ.
ವೀಕೆಂಡ್ ವಿತ್ ರಮೇಶ್ನಲ್ಲಿ ಅವರೇ ಹೇಳಿಕೊಂಡಂತೆ ”ನನಗೆ ಚುನಾವಣಾ ರಾಜಕೀಯ ಇಷ್ಟ. ನನಗೆ ಚುನಾವಣೆ ಗೆಲ್ಲುವ ತಂತ್ರ ಗೊತ್ತಿದೆ. ಯಾವುದೇ ವಿವಾದಿತ ಕ್ಷೇತ್ರವಾದರೂ ನಾನು ಇನ್ಚಾರ್ಜ್ ತೆಗೆದುಕೊಂಡರೆ ಹೇಗೋ ಮಾಡಿ ಗೆಲುವು ಸಾಧಿಸುತ್ತೇನೆ. ಮೊದಲಿನಿಂದಲೂ ಅದನ್ನು ಮಾಡಿಕೊಂಡು ಬಂದಿದ್ದೇನೆ” ಎಂದಿದ್ದಾರೆ ಡಿ.ಕೆ.ಶಿವಕುಮಾರ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ