ಡಿಕೆ ಶಿವಕುಮಾರ್ ಎಪಿಸೋಡ್​ನಲ್ಲಿ ಕೊತ್ವಾಲನ ಉಲ್ಲೇಖ: ರೌಡಿಸಂ ಎಂಬುದೆಲ್ಲ ಸುಳ್ಳೆ?

|

Updated on: Jun 11, 2023 | 8:27 AM

Weekend With Ramesh: ವೀಕೆಂಡ್ ವಿತ್ ರಮೇಶ್​ಗೆ ಅತಿಥಿಯಾಗಿ ಡಿಕೆ ಶಿವಕುಮಾರ್ ಆಗಮಿಸಿದ್ದರು. ಎಪಿಸೋಡ್​ನಲ್ಲಿ ರೌಡಿ ಕೊತ್ವಾಲನ ಉಲ್ಲೇಖವಾಯಿತು. ಡಿಕೆ ಶಿವಕುಮಾರ್-ಕೊತ್ವಾಲನ ಗೆಳೆತನದ ಬಗ್ಗೆ ಇರುವ ಕತೆಗಳೆಲ್ಲ ಸುಳ್ಳೆ?

ಡಿಕೆ ಶಿವಕುಮಾರ್ ಎಪಿಸೋಡ್​ನಲ್ಲಿ ಕೊತ್ವಾಲನ ಉಲ್ಲೇಖ: ರೌಡಿಸಂ ಎಂಬುದೆಲ್ಲ ಸುಳ್ಳೆ?
ಡಿಕೆ ಶಿವಕುಮಾರ್-ಕೊತ್ವಾಲ
Follow us on

ವೀಕೆಂಡ್ ವಿತ್ ರಮೇಶ್​ಗೆ (Weekend With Ramesh) ರಾಜ್ಯದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ (DK Shivakumar) ಅತಿಥಿಯಾಗಿ ಆಗಮಿಸಿ ಸಾಧಕರು ಕುರ್ಚಿಯಲ್ಲಿ ಕುಳಿತಿದ್ದಾರೆ. ಡಿಕೆಶಿ ವೀಕೆಂಡ್ ವಿತ್ ರಮೇಶ್​ಗೆ ಬರಲಿದ್ದಾರೆ ಎಂದಾಗಲೇ ಡಿಕೆ ಶಿವಕುಮಾರ್ ಬಗ್ಗೆ ಈಗಾಗಲೇ ಚಾಲ್ತಿಯಲ್ಲಿರುವ ರೌಡಿಸಂ ಕತೆಗಳು ಇನ್ನಿತರೆ ಕತೆಗಳ ಕುರಿತಾಗಿ ಉಲ್ಲೇಖ ಆಗಬಹುದು ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ನಡೆದಿತ್ತು. ಕೊತ್ವಾಲನ ಶಿಷ್ಯ ಡಿಕೆ ಶಿವಕುಮಾರ್ ಎಂದು ಆಗಾಗ್ಗೆ ಸಿಟಿ ರವಿ ಸೇರಿದಂತೆ ಬಿಜೆಪಿ ಮುಖಂಡರು ಸಹ ಹೇಳುತ್ತಲೇ ಇರುತ್ತಾರೆ. ಆದರೆ ಶನಿವಾರ ಪ್ರಸಾರವಾದ ಎಪಿಸೋಡ್​ನಲ್ಲಿ ಡಿಕೆ ಶಿವಕುಮಾರ್ ಅವರ ಬಾಲ್ಯದ ಜೀವನ, ಶಾಲೆ, ಕಾಲೇಜು ಜೀವನದ ಬಗ್ಗೆಯೇ ಹೆಚ್ಚು ಚರ್ಚೆಯಾಯಿತು. ಆದರೆ ಶನಿವಾರದ ಎಪಿಸೋಡ್​ನಲ್ಲಿ ಒಮ್ಮೆ ಮಾತ್ರ ರೌಡಿ ಕೊತ್ವಾಲನ (Kothwal) ಉಲ್ಲೇಖವಾಯಿತು.

ಎಪಿಸೋಡ್​ಗೆ ಡಿ.ಕೆ.ಶಿವಕುಮಾರ್ ಅವರ ಹಳೆಯ ಗೆಳೆಯರು, ಸೋದರ ಸಂಬಂಧಿಗಳು ಆಗಮಿಸಿ ಡಿ.ಕೆ.ಶಿವಕುಮಾರ್ ಅವರೊಟ್ಟಿಗೆ ಕಳೆದ ದಿನಗಳ ಬಗ್ಗೆ ನೆನಪು ಮಾಡಿಕೊಂಡರು. ಈ ವೇಳೆ ಮಾತನಾಡಿದ ಪರಮೇಶ್ ಎಂಬುವರು, ಡಿ.ಕೆ.ಶಿವಕುಮಾರ್ ವಿದ್ಯಾರ್ಥಿ ನಾಯಕನಾಗಿದ್ದಾಗಿನಿಂದಲೂ ನಾನು ಅವರನ್ನು ಹತ್ತಿರದಿಂದ ಬಲ್ಲೆ. ಅವರ ಬಳಿ ಲ್ಯಾಂಬ್ರೆಟಾ ಸ್ಕೂಟರ್ ಇತ್ತು ಅದಾದ ಬಳಿಕ ಯೆಜ್ಡಿ ಬೈಕ್ ಖರೀದಿಸಿದರು. ಅದರ ಪೂಜೆ ನಮ್ಮ ಮನೆಯಲ್ಲಿ ಮಾಡಿದ್ದು ಸಹ ನನಗೆ ನೆನಪಿದೆ. ಯಾರ್ಯಾರೋ ಏನೇನೋ ಹೇಳುತ್ತಾರೆ, ರೌಡಿಸಂ ಎಂದೆಲ್ಲ ಮಾತನಾಡುತ್ತಾರೆ ಅದೆಲ್ಲ ಸುಳ್ಳು ಎಂದರು.

ನಾವು ಜನರಲ್ ಹಾಸ್ಟೆಲ್​ಗೆ ಎಲ್​ಎನ್ ಮೂರ್ತಿ ಅವರನ್ನು ಭೇಟಿ ಆಗಲು ಹೋಗುತ್ತಿದ್ದೆವು. ಅವರು ನಮಗೆ ಮಾರ್ಗದರ್ಶನ ಮಾಡುತ್ತಿದ್ದರು. ಆಗೆಲ್ಲ ಅಲ್ಲಿ ಕೊತ್ವಾಲ ಆಗಾಗ್ಗೆ ಕಾಣಿಸುತ್ತಿದ್ದರು. ಅವರೂ ಸಹ ಡಿಕೆ ಶಿವಕುಮಾರ್ ಅನ್ನು ಮಾತನಾಡಿಸುತ್ತಿದ್ದರು. ನೀವೆಲ್ಲ ನಾಯಕರಾಗುವಂತವರು, ನಮ್ಮಂಥವರೊಟ್ಟಿಗೆ ಕಾಣಿಸಿಕೊಳ್ಳಬೇಡಿ ಎನ್ನುತ್ತಿದ್ದರು ಎಂದಿದ್ದಾರೆ. ಡಿ.ಕೆ.ಶಿವಕುಮಾರ್ ಅವರಿಗೆ ಆಗಿನಿಂದಲೂ ಜನರ ಬಗ್ಗೆ ಅಪಾರ ಪ್ರೀತಿ, ಜೊತೆಗೆ ಏನನ್ನಾದರೂ ಸಾಧಿಸುವ ಛಲ. ಅದೇ ಕಾರಣಕ್ಕೆ ಅವರು ಇಂದಿನ ಸ್ಥಾನಕ್ಕೆ ಏರಿದ್ದಾರೆ ಎಂದರು.

ಇದನ್ನೂ ಓದಿ:ಡಿಕೆ ಶಿವಕುಮಾರ್ ಗೆದ್ದಾಗ ಇಡೀ ಮೆಜೆಸ್ಟಿಕ್ ಬಂದ್, ರೂಂಗೆ ಬರುತ್ತಿದ್ದು ಬಕೆಟ್​ಗಟ್ಟಲೆ ಆಹಾರ

ಅದೇ ಸಮಯದಲ್ಲಿ ಅವರ ಮತ್ತೊಬ್ಬ ಸಹೋದರ ಮಾತನಾಡಿ, 82-83 ರ ದಶಕದಲ್ಲಿ ಡಿ.ಕೆ.ಶಿವಕುಮಾರ್ ಬೇರೆಯದ್ದೇ ರೀತಿ ಇದ್ದರು. ಅವರನ್ನು ಹುಡುಕುವುದೇ ಕಷ್ಟವಾಗುತ್ತಿತ್ತು. ಆಗೆಲ್ಲ ಅವರು ಜನರಲ್ ಹಾಸ್ಟೆಲ್​ನಲ್ಲಿಯೇ ಹೆಚ್ಚಿಗೆ ಇರುತ್ತಿದ್ದರು. ಅಲ್ಲಿಂದ ಇವರು ಈ ಎತ್ತರಕ್ಕೆ ಏರಿದ್ದಾರೆ ಎಂದರು. ಡಿಕೆ ಶಿವಕುಮಾರ್ ಅವರ ಸೋದರರು ಇಂಟರ್ನೆಟ್​ನಲ್ಲಿ ವೈರಲ್ ಆಗಿದ್ದ ಏನ್ ಚಂದ ಕಾಣಿಸ್ತೀ ಕೋಡೆ ರಮ್ಮವ್ವ ಹಾಡು ಹಾಡಿದರು.

ಹಾಡಿನ ಬಳಿಕ ಕೋಡೆ ಕುಟುಂಬದ ಹರಿ ಕೋಡೆ ಅವರನ್ನು ನೆನಪು ಮಾಡಿಕೊಂಡ ಡಿಕೆ ಶಿವಕುಮಾರ್, ಶ್ರೀಹರಿ ಕೋಡೆ ಅವರಿಗೆ ನನ್ನ ಮೇಲೆ ಅಪಾರ ಪ್ರೀತಿ ಮತ್ತು ಗೌರವ. ನನ್ನ ರಾಜಕೀಯಕ್ಕೆ ಅವರು ಸಾಕಷ್ಟು ಸಹಾಯ ಮಾಡಿದ್ದಾರೆ. ಒಮ್ಮೆ ಅವರು ಕನಕಪುರ ಬಳಿ 25 ಎಕರೆ ಭೂಮಿ ಕೇಳಿದ್ದರು, ನಾನು ನಮ್ಮ ತಾತನ ಭೂಮಿ ನೀಡಿದ್ದೆ. ಅವರು ನನ್ನ ಹೆಸರಿಗೆ ಜಮೀನನ್ನು ಬರೆದಿದ್ದರು. ನನಗೆ ಜಮೀನು ಬರೆದಿರುವ ವಿಷಯವನ್ನೇ ಅವರು ಮರೆತಿದ್ದರು ಎಂಟು-ಒಂಬತ್ತು ವರ್ಷದ ಹಿಂದೆ ಅವರು ಬದುಕಿದ್ದಾಗ ಹೋಗಿ ಆ ವಿಷಯ ತಿಳಿಸಿ ಅವರ ಪತ್ನಿ ಹೆಸರಿಗೆ ಆ ಜಮೀನನ್ನು ನೊಂದಣಿ ಮಾಡಿಸಿದೆವು ಎಂದು ನೆನಪು ಮಾಡಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ