ಈ ವಾರದ ವೀಕೆಂಡ್ ವಿತ್ ರಮೇಶ್ (Weekend With Ramesh) ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ್ದ ಲವ್ಲಿ ಸ್ಟಾರ್ ಪ್ರೇಮ್ (Lovely Star Prem) ಅವರು ಜೀವನದಲ್ಲಿ ಪಟ್ಟ ಕಷ್ಟಗಳನ್ನು ಒಂದೊಂದಾಗಿ ಹೇಳುತ್ತಲೇ ಹೋದರು. ಈಗ ಸದಾ ಹಸನ್ಮುಖಿ ಪ್ರೇಮ್ ಆಗ ಇಷ್ಟೆಲ್ಲ ಕಷ್ಟಗಳನ್ನು ಕಂಡಿದ್ದರೇ ಎಂದು ವೀಕ್ಷಕರಿಗೆ ಅನಿಸಿರಲೇ ಬೇಕು. ಪ್ರೇಮ್ ಬಾಲ್ಯ, ಶಿಕ್ಷಣ, ಬಡಕುಟುಂಬದಲ್ಲಿ ಅನುಭವಿಸಿದ ಕಷ್ಟ, ಅಪಮಾನಗಳ ಬಳಿಕ ಪ್ರೇಮ್ ತಮ್ಮ ಲವ್ಸ್ಟೋರಿಯ ಕಡೆಗೆ ಹೊರಳಿದರು. ಪ್ರೇಮ್ ತಾವು ಪ್ರೀತಿಸಿದ ಹುಡುಗಿ ಜ್ಯೂತಿಯನ್ನೇ ಮದುವೆಯಾಗಿದ್ದಾರೆ. ಇವರ ಲವ್ಸ್ಟೋರಿ ಆಸಕ್ತಿಕರವಾಗಿದೆ.
ಬಡತನದ ಕುಟುಂಬದ ಪ್ರೇಮ್, ತಂಗಿಯರ ಓದು, ಅವರ ಮದುವೆಗಾಗಿ ಹತ್ತನೇ ತರಗತಿಗೆ ಶಿಕ್ಷಣ ಮೊಟಕುಗೊಳಿಸಿ ತಮ್ಮ ಕುಲಕಸುಬಾದ ನೇಕಾರಿಕೆ ಮಾಡಲು ತೊಡಗಿದ್ದರು. ಕಾರ್ಖಾನೆಯೊಂದನ್ನು ಬಾಡಿಗೆಗೆ ಪಡೆದು ನೇಕಾರಿಕೆ ಮಾಡುತ್ತಿದ್ದರು. ಸಣ್ಣ ಮನೆಯಾದ್ದರಿಂದ ಅಲ್ಲಿ ಅವರಿಗೆ ಮಲಗಲು ಸಹ ಜಾಗವಿರಲಿಲ್ಲ. ಹಾಗಾಗಿ ಪ್ರತಿದಿನ ಕಾರ್ಖಾನೆಯಲ್ಲಿಯೇ ಮಲಗುತ್ತಿದ್ದರು, ಊಟಕ್ಕೆ ಮಾತ್ರವೇ ಮನೆಗೆ ಹೋಗುತ್ತಿದ್ದರು.
ಹೀಗೆ ಒಮ್ಮೆ ಊಟಕ್ಕೆ ಹೋಗುವಾಗ ಪ್ರಾವಿಜನ್ ಸ್ಟೋರ್ ಬಳಿ ಒಬ್ಬ ಹುಡುಗಿಯೊಬ್ಬಾಕೆಯನ್ನು ಕಂಡಿದ್ದಾರೆ. ಬಹಳ ಮುದ್ದಾಗಿದ್ದ ಆ ಹುಡುಗಿಯನ್ನು ಕಂಡು ಈಕೆಯೇ ನನ್ನ ಹೆಂಡತಿಯಾದರೆ ಎಷ್ಟು ಚೆನ್ನಾಗಿರುತ್ತದೆ ಎಂದುಕೊಂಡು ಮುಂದೆ ಹೋಗಿದ್ದಾರಷ್ಟೆ, ಅಷ್ಟರಲ್ಲಿ ಹುಡುಗನೊಬ್ಬ ಬಂದು ಅಕ್ಕ ನಿಮ್ಮ ಬಳಿ ಮಾತನಾಡಬೇಕಂತೆ ಎಂದಿದ್ದಾರೆ. ಪ್ರೇಮ್ ನಿಮಿಷದ ಹಿಂದೆ ನೋಡಿದ್ದ ಹುಡುಗಿಯೇ ಪ್ರೇಮ್ ಬಳಿ ಬಂದು ಟ್ಯೂಷನ್ ಕುರಿತಾಗಿ ಏನೋ ಮಾತನಾಡಿಸಿ ಹೆಸರು ಕೇಳಿ ಹೋಗಿದ್ದಾರೆ. ಆ ಹುಡುಗಿಯೇ ಜ್ಯೋತಿ.
ಅಸಲಿಗೆ ನಡೆದಿದ್ದು ಏನೆಂದರೆ ಜ್ಯೋತಿ ಸಹ ಯಾವುದೋ ಮದುವೆಯಲ್ಲಿ ಪ್ರೇಮ್ರನ್ನು ನೋಡಿದ್ದರಂತೆ. ಆ ಹುಡುಗಿಯ ಸಂಬಂಧಿಯೊಬ್ಬರು ಮದುವೆಯಲ್ಲಿ ವಧು-ವರರ ಜೊತೆ ಪ್ರೇಮ್ ತೆಗೆಸಿಕೊಂಡಿದ್ದ ಫೋಟೊ ತೋರಿಸಿ ಈ ಹುಡುಗನನ್ನು ನಾನು ಮದುವೆಯಾಗುತ್ತೀನಿ ಎಂದಿದ್ದರಂತೆ ಜ್ಯೋತಿ ಬಳಿ, ಆ ಫೋಟೊ ನೋಡಿದ ಜ್ಯೋತಿ ಸಹ ಪ್ರೇಮ್ರನ್ನು ಇಷ್ಟಪಟ್ಟಿದ್ದಾರೆ. ಹಾಗಾಗಿಯೇ ರಸ್ತೆಯಲ್ಲಿ ಪ್ರೇಮ್ರನ್ನು ಕಂಡಾಗ ಜ್ಯೋತಿಯೇ ಹೋಗಿ ಮಾತನಾಡಿಸಿದ್ದು. ಅಂದವಾಗಿದ್ದ ಪ್ರೇಮ್ರನ್ನು ನೋಡಿದ ಜ್ಯೋತಿ ಬಹಳ ಓದಿಕೊಂಡ ಹುಡುಗ ಇರಬೇಕು ಎಂದುಕೊಂಡಿದ್ದರಂತೆ.
ಇದನ್ನೂ ಓದಿ:ದಿನಗೂಲಿ, ನೇಕಾರಿಕೆ ಮಾಡಿಕೊಂಡಿದ್ದ ಪ್ರೇಮ್, ನಟನಾಗಿದ್ದು ಜೀವನದ ಸಂಕಷ್ಟದ ಸಮಯದಲ್ಲಿ
ಹೀಗೆ ಪ್ರಾವಿಜನ್ ಸ್ಟೋರ್ ಬಳಿ ಆದ ಪರಿಚಯ ಹೀಗೆ ಮುಂದುವರೆದಿದೆ. ಆಗೊಮ್ಮೆ ಪ್ರೇಮ್, ಜ್ಯೋತಿಗೆ ಪತ್ರವೊಂದನ್ನು ಬರೆದು ನನಗೆ ಜೀವನದಲ್ಲಿ ಬಹಳ ಜವಾಬ್ದಾರಿಗಳಿವೆ, ನಾನು ತಂಗಿಯರ ಮದುವೆ ಮಾಡಬೇಕು ನಾನು ಇನ್ನೊಬ್ಬರೊಟ್ಟಿಗೆ ಪ್ರೀತಿಯಲ್ಲಿದ್ದೀನಿ ನನ್ನನ್ನು ಮರೆತುಬಿಡು ಎಂದೆಲ್ಲ ಪತ್ರದಲ್ಲಿ ಬರೆದಿದ್ದರಂತೆ. ಆದರೆ ಅದರಲ್ಲಿ ಬಹಳ ತಪ್ಪುಗಳಿದ್ದಿದ್ದನ್ನು ಕಂಡು ಆ ತಪ್ಪುಗಳನ್ನೆಲ್ಲ ರೌಂಡ್ ಹಾಕಿದ್ದರಂತೆ ಜ್ಯೋತಿ. ಅದಾದ ಬಳಿಕ ಇಬ್ಬರೂ ಭೇಟಿಯಾಗಿ ಈಗಲೇ ಪ್ರೀತಿ-ಗೀತಿ ಎಲ್ಲ ಬೇಡ ಇನ್ನೆರಡು ವರ್ಷ ಹೀಗೆ ಗೆಳೆಯರಾಗಿರೋಣ ಆ ನಂತರವೂ ಪ್ರೀತಿ ಉಳಿದಿದ್ದರೆ ಮದುವೆಯಾಗೋಣ ಎಂದುಕೊಂಡಿದ್ದಾರೆ. ಆದರೆ ಆ ಪ್ರಾಮಿಸ್ ಅನ್ನು ಬಹಳ ಬೇಗ ಅವರೇ ಮುರಿಯುವ ಪರಿಸ್ಥಿತಿ ಬಂದೊದಗಿದೆ.
ಪ್ರೇಮ್-ಜ್ಯೋತಿ ಆಪ್ತವಾಗಿದ್ದ ವಿಷಯ ಜ್ಯೋತಿಯವರ ಮನೆಯವರಿಗೆ ಗೊತ್ತಾಗಿ ಗಂಡು ಹುಡುಕಲು ಆರಂಭಿಸಿದ್ದಾರೆ. ಇದರಿಂದ ಆತಂಕಗೊಂಡ ಜ್ಯೋತಿ ಹಾಗೂ ಪ್ರೇಮ್ ಮನೆಯವರ ವಿರೋಧದ ನಡುವೆ ಮದುವೆ ಆಗಲು ನಿಶ್ಚಯಿಸಿ ಒಂದು ದಿನಾಂಕ ಗುರುತು ಮಾಡಿಕೊಂಡಿದ್ದಾರೆ. ಆದರೆ ಅದೇ ದಿನ ರಾಜ್ಕುಮಾರ್ ಅಪಹರಣ ಆದ ಕಾರಣ ಎಲ್ಲವೂ ಸ್ಥಬ್ಧವಾಗಿಬಿಟ್ಟಿದೆ. ಹಾಗಿದ್ದರೂ ಜ್ಯೋತಿ ತಮ್ಮನನ್ನು ಕರೆದುಕೊಂಡು ತಮ್ಮ ವಸ್ತುಗಳನ್ನು ತೆಗೆದುಕೊಂಡು ಮನೆ ಬಿಟ್ಟು ಬಂದುಬಿಟ್ಟರಂತೆ. ಪ್ರೇಮ್ ಸಹ ಗೆಳೆಯರ ಸಹಾಯದಿಂದ ಜ್ಯೋತಿಯವರನ್ನು ಮದುವೆಯೂ ಆಗಿಬಿಟ್ಟಿದ್ದಾರೆ. ಅದಾದ ಬಳಿಕ ಎರಡು ಕುಟುಂಬದವರನ್ನು ಕರೆಸಿ ಅಂದೇ ರಾಜಿ ಮಾಡಿಸಿ ಎಲ್ಲರನ್ನೂ ಒಪ್ಪಿಸಿದ್ದಾರೆ.
ಜ್ಯೋತಿಯನ್ನು ಮದೆಯಾದಾಗ ಪ್ರೇಮ್ಗೆ ಮನೆಯೂ ಇರಲಿಲ್ಲವಂತೆ ಆಗ ಅವರ ಗೆಳೆಯ ತಮ್ಮ ಮನೆ ಬಿಟ್ಟುಕೊಟ್ಟಿದ್ದಾನೆ. ಆದರೆ ಅಲ್ಲಿಂದ ಫ್ಯಾಕ್ಟರಿಗೆ ದೂರವಾಗುತ್ತಿತ್ತಂತೆ. ಆಗ ಅಳಿಯನ ಕಷ್ಟ ಗಮನಿಸಿ ಜ್ಯೋತಿಯವರ ತಾಯಿ ಮಗಳು-ಅಳಿಯನಿಗೆ ಅವರ ಮನೆಯಲ್ಲಿಯೇ ಉಳಿದುಕೊಳ್ಳಲು ಅವಕಾಶ ಮಾಡಿಕೊಟ್ಟಿದ್ದಾರೆ. ಎರಡು ವರ್ಷ ಅತ್ತೆಯ ಮನೆಯಲ್ಲಿಯೇ ವಾಸವಿದ್ದರಂತೆ ಪ್ರೇಮ್.
ಆದರೆ ಜೀವನದ ಒಂದು ಹಂತದಲ್ಲಿ ಉದ್ದಿಮೆಯಲ್ಲಿ ಬಹಳ ನಷ್ಟವಾಗಿ ಸುಮಾರು ಏಳೆಂಟು ಲಕ್ಷ ಸಾಲ ಮಾಡಿಬಿಟ್ಟರಂತೆ ಪ್ರೇಮ್. ಆಗ ಜ್ಯೋತಿ ಕೆಲಸಕ್ಕೆ ಹೋಗುತ್ತಿದ್ದರಂತೆ. ವರಮಹಾಲಕ್ಷ್ಮಿ ಹಬ್ಬದ ದಿನ ತಮಗೆ ಸಾಲ ಕೊಟ್ಟಿದ್ದ ಗೆಳೆಯ ಸಾಲವನ್ನು ತೀರಿಸುವಂತೆ ಒತ್ತಾಯಿಸಿದ್ದಾನೆ. ಆಗ ಪ್ರೇಮ್ ಪತ್ನಿಯ ಕಚೇರಿ ಬಳಿ ಹೋಗಿ ಪರಿಸ್ಥಿತಿ ವಿವರಿಸಿದ್ದಾರೆ. ಆಗ ಜ್ಯೋತಿ ತಮ್ಮ ಚಿನ್ನದ ತಾಳ ಬಿಚ್ಚಿಕೊಟ್ಟುಬಿಟ್ಟರಂತೆ. ಆ ದಿನ ನನ್ನ ಜೀವನದ ಅತ್ಯಂತ ಕೆಟ್ಟ ದಿನ ಎಂದು ಕಣ್ಣೀರು ಹಾಕಿದರು ಪ್ರೇಮ್. ನಾನು ಸತ್ತು ಹೋಗಬಾರದ ಎಂದು ಎನಿಸಿತು ನನಗೆ. ಆ ದಿನ ನನ್ನ ಜೀವನದಲ್ಲಿ ಮತ್ತೆಂದೂ ಬರಬಾರದು ಎಂದರು ಪ್ರೇಮ್. ಆದರೆ ಆ ಸಂಕಷ್ಟದ ಸಮಯದಲ್ಲಿ, ಅದೂ ವರಮಹಾಲಕ್ಷ್ಮಿ ಹಬ್ಬದ ದಿನ ತಾಳಿ ನೀಡಿದ ಪತ್ನಿ ನನಗೆ ಎರಡನೇ ತಾಯಿಯಂತೆ ಎಂದರು.
ಆದರೆ ಆ ತಾಳಿಯನ್ನು ಪ್ರೇಮ್ ಉಳಿಸಿಕೊಳ್ಳಲಿಲ್ಲವಂತೆ, ಸಾಲ ಕೊಟ್ಟ ಗೆಳೆಯನಿಗೆ ತಾಳಿಯನ್ನು ಕೊಟ್ಟ ಪ್ರೇಮ್, ಅದನ್ನು ಅಡವಿಡು ಎಂದಿದ್ದರಂತೆ ಆದರೆ ಆತ ತಾಳಿಯನ್ನು ಮಾರಿಯೇ ಬಿಟ್ಟಿದ್ದಾನೆ. ಆದರೆ ಆ ಘಟನೆ ಬಳಿಕ ಪ್ರೇಮ್ ಜೀವನದಲ್ಲಿ ಮತ್ತೆಂದೂ ಆ ಸ್ಥಿತಿ ಬರಲೇ ಇಲ್ಲ. ನಟನೆ ಪ್ರೇಮ್ರ ಕೈಹಿಡಿಯಿತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ