‘ಸರಿಗಮಪ’ ಶೋಗೆ ಹಂಸಲೇಖ ಗೈರಾಗಿದ್ದೇಕೆ?; ವಾಹಿನಿ ಕಡೆಯಿಂದ ಸ್ಪಷ್ಟನೆ

| Updated By: ರಾಜೇಶ್ ದುಗ್ಗುಮನೆ

Updated on: Nov 28, 2021 | 1:34 PM

ದಲಿತರ ಮನೆಯಲ್ಲಿ ಸವರ್ಣೀಯರ ವಾಸ್ತವ್ಯದ ಕುರಿತಂತೆ ಹಂಸಲೇಖ ಹುಟ್ಟು ಹಾಕಿದ್ದ ವಿವಾದ ಇನ್ನೂ ತಣ್ಣಗಾಗಿಲ್ಲ. ಅನೇಕರು ಈ ಬಗ್ಗೆ ಇನ್ನೂ ವಿರೋಧ ವ್ಯಕ್ತಪಡಿಸುತ್ತಲೇ ಇದ್ದಾರೆ. ಅವರು ಈಗಾಗಲೇ ಕ್ಷಮೆ ಕೇಳಿದ್ದಾರೆ. ವಿಚಾರಣೆಯನ್ನೂ ಎದುರಿಸಿದ್ದಾರೆ.

‘ಸರಿಗಮಪ’ ಶೋಗೆ ಹಂಸಲೇಖ ಗೈರಾಗಿದ್ದೇಕೆ?; ವಾಹಿನಿ ಕಡೆಯಿಂದ ಸ್ಪಷ್ಟನೆ
ಹಂಸಲೇಖ
Follow us on

‘ಸರಿಗಮಪ’ ಸಂಗೀತ ರಿಯಾಲಿಟಿ ಶೋಗೆ ದೊಡ್ಡ ಅಭಿಮಾನಿ ಬಳಗ ಇದೆ. ಸಾಕಷ್ಟು ಮಂದಿ ಈ ವೇದಿಕೆ ಮೂಲಕ ಗುರುತಿಸಿಕೊಂಡಿದ್ದಾರೆ. ಇನ್ನು, ಈ ಕಾರ್ಯಕ್ರಮವನ್ನು ನೆಚ್ಚಿಕೊಂಡ ವೀಕ್ಷಕರ ಸಂಖ್ಯೆ ದೊಡ್ಡದಿದೆ. ‘ಸರಿಗಮಪ’ ಹೊಸ ಸೀಸನ್​ ಜೀ ಕನ್ನಡದಲ್ಲಿ ಸೆಪ್ಟೆಂಬರ್​ 18ರಿಂದ ಪ್ರಸಾರ ಆರಂಭಿಸಿದೆ. ಪ್ರತಿ ವರ್ಷದಂತೆ ಈ ಬಾರಿಯೂ ನಾದಬ್ರಹ್ಮ ಹಂಸಲೇಖ ಅವರು ಈ ಶೋನ ಮಹಾಗುರು ಆಗಿ ಕಾಣಿಸಿಕೊಂಡಿದ್ದಾರೆ. ಆದರೆ, ಅವರು ಶನಿವಾರ ಶೋನಲ್ಲಿ ಕಾಣಿಸಿಕೊಂಡಿರಲಿಲ್ಲ. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿತ್ತು. ಅಲ್ಲದೆ, ಜೀ ಕನ್ನಡ ವಾಹಿನಿ ಅವರನ್ನು ‘ಸರಿಗಮಪ’ ಶೋನಿಂದ ಹೊರಗಿಟ್ಟಿದೆ ಎಂಬ ಮಾತು ಕೇಳಿ ಬಂದಿತ್ತು. ಈ ಎಲ್ಲಾ ವಿಚಾರಕ್ಕೆ ಈಗ ಸ್ಪಷ್ಟನೆ ಸಿಕ್ಕಿದೆ.

ದಲಿತರ ಮನೆಯಲ್ಲಿ ಸವರ್ಣೀಯರ ವಾಸ್ತವ್ಯದ ಕುರಿತಂತೆ ಹಂಸಲೇಖ ಹುಟ್ಟು ಹಾಕಿದ್ದ ವಿವಾದ ಇನ್ನೂ ತಣ್ಣಗಾಗಿಲ್ಲ. ಅನೇಕರು ಈ ಬಗ್ಗೆ ಇನ್ನೂ ವಿರೋಧ ವ್ಯಕ್ತಪಡಿಸುತ್ತಲೇ ಇದ್ದಾರೆ. ಅವರು ಈಗಾಗಲೇ ಕ್ಷಮೆ ಕೇಳಿದ್ದಾರೆ. ವಿಚಾರಣೆಯನ್ನೂ ಎದುರಿಸಿದ್ದಾರೆ. ಈ ಮಧ್ಯೆ ಹಂಸಲೇಖ ಅವರ ಆರೋಗ್ಯ ತಪ್ಪಿತ್ತು. ಈ ಬಗ್ಗೆ ಅವರು ಇತ್ತೀಚೆಗೆ ಮಾಹಿತಿ ನೀಡಿದ್ದರು. ಈ ಮಧ್ಯೆ ಅವರು ‘ಸರಿಗಮಪ’ ಶೋನಲ್ಲಿ ಕಾಣಿಸಿಕೊಳ್ಳದೇ ಇದ್ದಿದ್ದು ಅನುಮಾನ ಹುಟ್ಟು ಹಾಕಿತ್ತು. ಅವರು ಮತ್ತೆ ಶೋಗೆ ಬರುವುದಿಲ್ಲ ಎನ್ನುವ ಮಾತನ್ನು ಕೆಲವರು ಹೇಳಿದ್ದರು. ಈಗ ಇದಕ್ಕೆ ಜೀ ಕನ್ನಡ ಬಿಸ್ನೆಸ್​ ಹೆಡ್ ರಾಘವೇಂದ್ರ ಹುಣಸೂರು ಸ್ಪಷ್ಟನೆ ನೀಡಿದ್ದಾರೆ.

‘ಮಹಾಗುರುಗಳು ತಮ್ಮ ಆರೋಗ್ಯ ಮತ್ತು ವೈಯಕ್ತಿಕ ಕಾರಣಗಳಿಂದ ಒಂದು ವಾರ ಹೊರಗುಳಿಯಲು ನಿರ್ಧರಿಸಿದರು. ನಾವು ಅವರ ನಿರ್ಧಾರವನ್ನು ಗೌರವಿಸಿ, ವಿರಾಮ ತೆಗೆದುಕೊಳ್ಳಲು ಒಪ್ಪಿದ್ದೇವೆ. ಮುಂದಿನ ವಾರದಿಂದ ಎಂದಿನಂತೆ ಗುರುಗಳು ನಮ್ಮೊಂದಿಗಿರುತ್ತಾರೆ’ ಎಂದು ರಾಘವೇಂದ್ರ ಹುಣಸೂರು ಬರೆದುಕೊಂಡಿದ್ದಾರೆ.

‘ನನ್ನ ಆರೋಗ್ಯ ಸ್ಥಿರವಾಗಿದೆ. ಸರಿಗಮಪ ನನ್ನ ಪ್ರೀತಿಯ ಭೂಮಿಕೆ. ಅದು ಮನಸ್ಸು ಮನಸ್ಸುಗಳನ್ನು ನೇಯುವ ವೇದಿಕೆ. ಸುಧಾರಣೆಗಳ ಸುಂದರ ಕಥೆಗಳನ್ನು ಓದಿಕೊಳ್ಳುತ್ತಿದ್ದೇನೆ. ಬೇಗ ಬಂದು ಸೇರಿಕೊಳ್ಳುತ್ತೇನೆ’ ಎನ್ನುವ ಸಂದೇಶವೂ ಹಂಸಲೇಖ ಕಡೆಯಿಂದ ಬಂದಿದೆ.

ಇದನ್ನೂ ಓದಿ: ‘ನಾನು ಆರೋಗ್ಯವಾಗಿದ್ದೀನಿ, ಅಭಿಮಾನ ಆವೇಶವಾಗಬಾರದು; ಆವೇಶ ಅವಘಡಗಳಿಗೆ ಕಾರಣವಾಗಬಾರದು’: ಹಂಸಲೇಖ

ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಹಂಸಲೇಖ ವಿಚಾರಣೆ: ಹೊರಗೆ ಪರ-ವಿರೋಧ ಪ್ರತಿಭಟನೆ