ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಹಂಸಲೇಖ ವಿಚಾರಣೆ: ಹೊರಗೆ ಪರ-ವಿರೋಧ ಪ್ರತಿಭಟನೆ

ವಿಚಾರಣೆಯ ವೇಳೆ ತನಿಖಾಧಿಕಾರಿಗಳು ಹಂಸಲೇಖ ಅವರಿಗೆ 29 ಪ್ರಶ್ನೆ ಕೇಳಿದರು. ಅಧಿಕಾರಿಗಳ ಪ್ರಶ್ನೆಗಳಿಗೆ ಹಂಸಲೇಖ ಸಾವಧಾನವಾಗಿ ಉತ್ತರಿಸಿದರು.

ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಹಂಸಲೇಖ ವಿಚಾರಣೆ: ಹೊರಗೆ ಪರ-ವಿರೋಧ ಪ್ರತಿಭಟನೆ
ಹಂಸಲೇಖ


ಬೆಂಗಳೂರು: ಪೇಜಾವರ ಅಧೋಕ್ಷಜ ಮಠದ ಹಿಂದಿನ ಮಠಾಧೀಶರಾದ ದಿವಂಗತ ವಿಶ್ವೇಶತೀರ್ಥರ ಬಗ್ಗೆ ಹಂಸಲೇಖ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ದಾಖಲಾಗಿದ್ದ ದೂರಿನ ವಿಚಾರಣೆ ನಗರದ ಬಸವನಗುಡಿ ಠಾಣೆಯಲ್ಲಿ ಗುರುವಾರ ನಡೆಯಿತು. ವಿಚಾರಣೆಯ ವೇಳೆ ತನಿಖಾಧಿಕಾರಿಗಳು ಹಂಸಲೇಖ ಅವರಿಗೆ 29 ಪ್ರಶ್ನೆ ಕೇಳಿದರು. ಅಧಿಕಾರಿಗಳ ಪ್ರಶ್ನೆಗಳಿಗೆ ಹಂಸಲೇಖ ಸಾವಧಾನವಾಗಿ ಉತ್ತರಿಸಿದರು. ಈ ಪ್ರಕರಣದ ಬಗ್ಗೆ ಹಿರಿಯ ಅಧಿಕಾರಿಗಳ ಜತೆ ಚರ್ಚಿಸಲಿರುವ ತನಿಖಾಧಿಕಾರಿಗಳು ಚರ್ಚಿಸಲಿದ್ದು, ಅವಶ್ಯಕತೆ ಇದ್ದರೆ ಮತ್ತೆ ವಿಚಾರಣೆಗೆ ಕರೆಯುವುದಾಗಿ ತಿಳಿಸಿದ್ದಾರೆ. ತನಿಖಾಧಿಕಾರಿ ರಮೇಶ್ ಈ ಪ್ರಶ್ನೆಗಳನ್ನು ಕೇಳಿದರು. ವಿಚಾರಣೆ ವೇಳೆ ಹಂಸಲೇಖ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಿದರು. ಹಿರಿಯ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ ನಂತರ ಮತ್ತೆ ಅವಶ್ಯಕತೆ ಇದ್ರೆ ಮತ್ತೊಮ್ಮೆ ನೊಟೀಸ್ ಕೊಟ್ಟು ಕರೆಸುತ್ತೇವೆ ಎಂದು ತನಿಖಾಧಿಕಾರಿಗಳು ಸ್ಪಷ್ಟಪಡಿಸಿದರು.

ಹಂಸಲೇಖ ಹೇಳಿಕೆ ಸಂಬಂಧ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲಾಗುವುದು ಎಂದು ಡಿಸಿಪಿ ಹರೀಶ್ ಪಾಂಡೆ ಹೇಳಿದರು. ಠಾಣೆಯ ಎದುರು ಹಂಸಲೇಖ ಪರ-ವಿರುದ್ಧ ಪ್ರತಿಭಟನೆಗಳು ನಡೆದವು. ವಿಚಾರಣೆ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದರು. ನ್ಯಾಯಾಲಯಕ್ಕೆ ನಾವು ಉತ್ತರದಾಯಿಗಳು. ಪ್ರಶ್ನೆಗಳಿಗೆ ಉತ್ತರ ಪಡೆದಿದ್ದೇವೆ. ಕಾನೂನು ಪ್ರಕಾರ ತನಿಖೆ ನಡೆಸಿ ನ್ಯಾಯಾಲಯಕ್ಕೆ ವರದಿ ನೀಡುತ್ತೇವೆ ಎಂದು ದಕ್ಷಿಣ ವಿಭಾಗ ಡಿಸಿಪಿ ಹರೀಶ್ ಪಾಂಡೆ ಹೇಳಿದರು. ಠಾಣೆಯ ಎದುರು ನೆರೆದಿದ್ದ ಹಿಂದೂಪರ ಹಾಗೂ ಕನ್ನಡಪರ ಸಂಘಟನೆ ಕಾರ್ಯಕರ್ತರನ್ನು ಅವರು ಚದುರಿಸಿದರು.

ವಿಚಾರಣೆ ವೇಳೆ ಹಾಜರಿದ್ದ ಹಂಸಲೇಖ ಪರ ವಕೀಲ ಸಿ.ಎಸ್.ದ್ವಾರಕಾನಾಥ್, ಪೊಲೀಸರು ವಿಚಾರಣೆಗೆ ಕರೆದರೆ ಮತ್ತೆ ಬರಬೇಕು ಎಂದು ಹೇಳಿದ್ದಾರೆ. ನಾವು ಕಾನೂನಿನ ಹಾದಿಯಲ್ಲಿಯೇ ನಡೆಯುತ್ತೇವೆ, ಕಾನೂನು ಗೌರವಿಸುತ್ತೇವೆ ಎಂದು ಹೇಳಿದರು. ವಿಚಾರಣೆ ಮುಕ್ತಾಯವಾದ ಬಳಿಕ ಹಂಸಲೇಖ ಠಾಣೆಯಿಂದ ಹೊರ ನಡೆದರು.

ಠಾಣೆ ಎದುರು ಉದ್ವಿಗ್ನ ಸ್ಥಿತಿ
ಬಸವನಗುಡಿ ಠಾಣೆಯಲ್ಲಿ ಹಂಸಲೇಖ ವಿಚಾರಣೆ ನಡೆಯುತ್ತಿದ್ದ ಸಂದರ್ಭ ಪೊಲೀಸ್ ಠಾಣೆಯ ಎದುರು ಹಂಸಲೇಖ ಪರ-ವಿರೋಧದ ಘೋಷಣೆಗಳು ಮೊಳಗಿದವರು. ಪ್ರತಿಭಟನಾಕಾರರು ಠಾಣೆ ಆವರಣಕ್ಕೆ ಬಾರದಂತೆ ತಡೆಯಲು ಪೊಲೀಸರು ಬ್ಯಾರಿಕೇಡ್ ಹಾಕಿದ್ದರು. ಠಾಣೆ ಬಳಿ ಆಗಮಿಸಿದ ನಟ ಚೇತನ್, ರಸ್ತೆಯಲ್ಲೇ ಕುಳಿತರು. ಸುಮಾರು 1 ಗಂಟೆಗಳ ಕಾಲ ಹಂಸಲೇಖ ವಿಚಾರಣೆ ನಡೆಯಿತು. ಹಂಸಲೇಖ ಬರುವುದಕ್ಕೂ ಮೊದಲೇ ಪೊಲೀಸರು ಕೇಳಬೇಕಾದ ಪ್ರಶ್ನೆಗಳನ್ನು ಸಿದ್ಧಪಡಿಸಿಕೊಂಡಿದ್ದರು.

ಹಂಸಲೇಖ ಹೇಳಿಕೆಯಲ್ಲಿ ತಪ್ಪಿಲ್ಲ: ಪ್ರಿಯಾಂಕ್ ಖರ್ಗೆ
ಪೇಜಾವರ ಮಠದ ಹಿಂದಿನ ಸ್ವಾಮೀಜಿ ವಿಶ್ವೇಶತೀರ್ಥರ ಬಗ್ಗೆ ಹಂಸಲೇಖ ನೀಡಿರುವ ಹೇಳಿಕೆ ರಾಜಕೀಯ ಆಯಾಮ ತಳೆದಿದೆ. ಹಂಸಲೇಖ ಪರ ಮಾತನಾಡಿರುವ ಶಾಸಕ ಪ್ರಿಯಾಂಕ್ ಖರ್ಗೆ, ನಾದಬ್ರಹ್ಮ ಹಂಸಲೇಖ ಹೇಳಿಕೆಯಲ್ಲಿ ಯಾವ ತಪ್ಪೂ ಇಲ್ಲ. ಕೆಲವು ಮನುವಾದಿಗಳು ವಿರೋಧ ಮಾಡುತ್ತಾರೆ. ಕುಲ ಕಸುಬಿನ ಪ್ರಕಾರ ಆಹಾರ ಪದ್ಧತಿ ಇರುತ್ತೆ. ಇಂಥದ್ದೇ ಆಹಾರ ಸ್ವೀಕರಿಸಿ ಎಂದು ಹೇಳಲು ಆಗುವುದಿಲ್ಲ. ಬಿಜೆಪಿಯವರು ದಲಿತರ ಮತ್ತು ಹಿಂದುಳಿದವರ ಪರವಾಗಿಲ್ಲ ಎಂದು ಹೇಳಿದರು.

ಎಷ್ಟು ಜನ ಬೇರೆ ಜನಾಂಗದದವರು ನಾನ್​ವೇಜ್ ತಿನ್ನುವುದಿಲ್ಲವೇ ಎಂದು ಪ್ರಶ್ನಿಸಿದ ಅವರು, ಇದು ಅಸಾಂವಿಧಾನಿಕ ನಡವಳಿಕೆಯೇ ಎಂದು ಕೇಳಿದರು. ಇಂಥ ಪ್ರಶ್ನೆಗಳನ್ನು ಕೆಲವು ಜನ ಒಪ್ಪದೆ ಇರಬಹುದು ಆದರೆ ಇಂದು ಸಾಂವಿಧಾನಾತ್ಮಕ ನಡವಳಿಕೆಯೇ ಅಲ್ಲವೇ? ಬಿಜೆಪಿಯವರು ದಲಿತರ ಮನೆಗೆ ಹೋಗಿ ಹೋಟೆಲ್​ನಿಂದ ತರಿಸಿ ತಿನ್ನುತ್ತಾರೆ. ದಲಿತರ ಮನೆಗೆ ಹೋಗುವುದನ್ನು ಟೂರಿಸಂ ಪ್ಯಾಕೇಜ್ ಮಾಡಿದ್ದಾರಾ ಎಂದು ವ್ಯಂಗ್ಯವಾಡಿದರು. ದಲಿತರ ಮನೆಗೆ ಹೋಗಿ‌ ಮಾಧ್ಯಮಗಳಲ್ಲಿ ಪ್ರಚಾರ ತೆಗೆದುಕೊಳ್ಳುವುದು ತಪ್ಪು ಎಂದು ನಮ್ಮ ಕಾರ್ಯಕರ್ತರಿಗೆ ಹೇಳಿದ್ದೇನೆ. ದಲಿತರ ಮನೆಗೆ ಹೋದ್ರು ವೇಜ್ ಊಟಾನೇ ತರಿಸಿ ತಿನ್ನುವ ಬಿಜೆಪಿಯವರು ದಲಿತರ ಮತ್ತು ಹಿಂದುಳಿದವರ ಪರವಾಗಿಲ್ಲ ಎಂದು ಅಭಿಪ್ರಾಯಪಟ್ಟರು.

ಠಾಣೆ ಎದುರು ಮಹಿಳೆ ವಿಭಿನ್ನ ಹೋರಾಟ
ಬಸವನಗುಡಿ ಠಾಣೆಯಲ್ಲಿ ಹಂಸಲೇಖ ವಿಚಾರಣೆ ನಡೆಯುತ್ತಿದ್ದ ಠಾಣೆಯ ಎದುರು ಕುಳಿತ ಒಂಟಿ ಮಹಿಳೆ ವಿಭಿನ್ನ ರೀತಿಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಹಂಸಲೇಖ ಪರ-ವಿರೋಧ ಹೋರಾಟವನ್ನು ಖಂಡಿಸಿದ ಅವರು, ಗುರು ರಾಘವೇಂದ್ರ ಬ್ಯಾಂಕ್​ನ ಅವ್ಯವಹಾರದಿಂದ ಜನರು ಕಂಗಾಲಾಗಿದ್ದಾರೆ. ಠೇವಣೆಗಳನ್ನು ಕಳೆದುಕೊಂಡಿರುವ 100ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅವರಿಗೆ ನ್ಯಾಯ ಕೊಡಿಸಲು ಯಾರು ಬರಲಿಲ್ಲ. ಗುರುರಾಘವೇಂದ್ರ ಬ್ಯಾಂಕ್ ಅವ್ಯವಹಾರದ ವಿರುದ್ದ ಹೋರಾಡಿ, ನಮಗೆ ನ್ಯಾಯ ಕೊಡಿಸಿ ಎಂದು ಸಂಘಟನೆಗಳಲ್ಲಿ ಮನವಿ ಮಾಡಿದರು. ಸತ್ತವರೆಲ್ಲರೂ ಹಿಂದೂಗಳೇ, ಹಿಂದೂ ಹೋರಾಟಗಾರರೇ ನಮಗೆ ನ್ಯಾಯ ಕೊಡಿಸಿ. ನಾನು ಬ್ಯೂಟಿ ಪಾರ್ಲರ್ ನಡೆಸ್ತಿದ್ದೆ. ಈಗ ಲಾಸ್ ಆಗಿದೆ. ಸುಮಾರು ₹ 8 ಲಕ್ಷವನ್ನ ಗುರು ರಾಘವೇಂದ್ರ ಬ್ಯಾಂಕ್​ನಲ್ಲಿ ನಾನು ಠೇವಣಿ ಇರಿಸಿದ್ದೆ. ಇವತ್ತು ನನಗೆ ಬ್ಯುಸಿನೆಸ್​ನಲ್ಲಿ ಲಾಸ್ ಆಗಿದೆ. ಬೀದಿಗೆ ಬಂದಿದ್ದೇವೆ ಇವತ್ತು. ನ್ಯಾಯ ಕೊಡಿಸಿ ಎಂದು ವಿನಂತಿಸಿದರು.

ಇದನ್ನೂ ಓದಿ: Hamsalekha: ವಿಚಾರಣೆಗೆ ಹಾಜರಾದ ಹಂಸಲೇಖ, ಓಡೋಡಿ ಬಂದ ನಟ ಚೇತನ್; ಠಾಣೆಯ ಬಳಿ ಉದ್ವಿಗ್ನ ಪರಿಸ್ಥಿತಿ
ಇದನ್ನೂ ಓದಿ: ಹಂಸಲೇಖ ಪರವಾಗಿ ಕನ್ನಡಪರ ಸಂಘಟನೆಗಳು, ವಿರುದ್ಧ ಭಜರಂಗದಳ ಘೋಷಣೆ; ಠಾಣೆಯ ಮುಂದೆ ಹೈಡ್ರಾಮಾ

Click on your DTH Provider to Add TV9 Kannada