‘ಸರಿಗಮಪ’ (SaReGaMaPa) ರಿಯಾಲಿಟಿ ಶೋಗಳ ಆಡಿಷನ್ ಈ ಮೊದಲು ಬೆಂಗಳೂರಿನಲ್ಲಿ ಮಾತ್ರ ನಡೆಯುತ್ತಿತ್ತು. ಬಳಿಕ ಅದನ್ನು ರಾಜ್ಯಾದ್ಯಂತ ವಿಸ್ತರಿಸಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳಿಗೆ ತೆರಳಿ ಆಡಿಷನ್ ಮಾಡಿ ಪ್ರತಿಭೆಗಳನ್ನು ಕರೆತರುವ ಕೆಲಸ ಆಯಿತು. ಈಗ ಜೀ ಕನ್ನಡ ವಾಹಿನಿ ಮತ್ತೊಂದು ಪ್ರಯತ್ನಕ್ಕೆ ಮುಂದಾಗಿದೆ. ವಿಶ್ವಾದ್ಯಂತ ಇರುವ ಕನ್ನಡದವರಿಗಾಗಿ ಹೊಸ ರೀತಿಯಲ್ಲಿ ಆಡಿಷನ್ ಮಾಡಲು ಮುಂದಾಗಿದೆ. ವಿಶ್ವಾದ್ಯಂತ ಸಂಚಾರ ನಡೆಸಿ ಪ್ರತಿಭೆಗಳನ್ನು ಕರೆದು ತರಲು ಜೀ ಕನ್ನಡ (Zee Kannada) ವಾಹಿನಿ ಸಿದ್ಧವಾಗಿದೆ. ಈ ಪ್ರಯತ್ನಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸಿದ್ದಾರೆ.
ಜೀ ಕನ್ನಡ ವಾಹಿನಿಯಲ್ಲಿ ‘ಸರಿಗಮಪ’ ಈಗಾಗಲೇ 19 ಸೀಸನ್ಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈಗ 20ನೇ ಸೀಸನ್ಗೆ ತಯಾರಿ ನಡೆಯುತ್ತಿದೆ. ವಿವಿಧ ರಾಜ್ಯದ ಪ್ರತಿಭೆಗಳಿಗೂ ಈ ಶೋನಲ್ಲಿ ಅವಕಾಶ ಸಿಕ್ಕಿದೆ. ಈ ಶೋಗೆ ವಿಶ್ವಾದ್ಯಂತ ಅಭಿಮಾನಿಗಳಿದ್ದಾರೆ. ಈ ಕಾರಣದಿಂದಲೇ ವಿಶ್ವಾದ್ಯಂತ ಆಡಿಷನ್ ನಡೆಸುವ ನಿರ್ಧಾರಕ್ಕೆ ಬಂದಿದೆ ಜೀ ಕನ್ನಡ ವಾಹಿನಿ.
ಹೌದು, ವಿಶ್ವಾದ್ಯಂತ ಆಡಿಷನ್ ನಡೆಸುತ್ತಿರುವ ಕುರಿತು ಜೀ ಕನ್ನಡ ವಾಹಿನಿ ಪ್ರೋಮೋ ಹಂಚಿಕೊಂಡಿದೆ. ‘ಸಪ್ತ ಸಾಗರದಾಚೆ ಸ್ವರ ಸಂಚಾರ’ ಎನ್ನುವ ಕ್ಯಾಪ್ಶನ್ನೊಂದಿಗೆ ವಿಡಿಯೋ ಹಂಚಿಕೊಳ್ಳಲಾಗಿದೆ. ‘ಪ್ರಥಮ ಬಾರಿಗೆ ವಿದೇಶದಲ್ಲಿ ಆಡಿಷನ್ಸ್ ಮಾಡುತ್ತಿದ್ದೇವೆ. ಸರಿಗಮಪ ಈಗ ವಿಶ್ವಕ್ಕೆ ವಿಸ್ತರಿಸಲಿದೆ. ಕನ್ನಡದ ಸ್ವರಸಂಭ್ರಮ ಈಗ ವಿಶ್ವ ಸಂಭ್ರಮ ಆಗಲಿದೆ. ವಿಶ್ವದ ಕನ್ನಡಿಗರಿಗಾಗಿ ಜೀ ಕನ್ನಡ ಶುರು ಮಾಡ್ತಿದೆ ವರ್ಲ್ಡ್ವೈಡ್ ಆಡಿಷನ್ಸ್’ ಎಂದು ವಾಹಿನಿ ಪ್ರೋಮೋದಲ್ಲಿ ತಿಳಿಸಿದೆ.
ಇದನ್ನೂ ಓದಿ: ‘ಸರಿಗಮಪ ಲಿಟಲ್ ಚಾಂಪ್ಸ್’ ವಿನ್ನರ್ ಪ್ರಗತಿ ಬಡಿಗೇರ್ಗೆ 21 ಲಕ್ಷ ಮೌಲ್ಯದ ಸೈಟ್; ಶಿವಾನಿಗೆ ಏನು?
ಅಂದಹಾಗೆ ವಿಶ್ವದ ಯಾವ ಯಾವ ರಾಷ್ಟ್ರಗಳಲ್ಲಿ ಈ ಆಡಿಷನ್ ನಡೆಯಲಿದೆ ಎನ್ನುವ ಕುರಿತು ಮಾಹಿತಿ ಹೊರಬಿದ್ದಿಲ್ಲ. ದುಬೈ, ಅಮೆರಿಕ ಮೊದಲಾದ ಕಡೆಗಳಲ್ಲಿ ಆಡಿಷನ್ಸ್ ನಡೆಯಬಹುದು ಎಂಬುದು ವೀಕ್ಷಕರ ಊಹೆ. ಇದಕ್ಕೆ ಯಾವ ರೀತಿಯಲ್ಲಿ ಪ್ರತಿಕ್ರಿಯೆ ಸಿಗಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಈಗಾಗಲೇ ‘ಸರಿಗಮಪ’ ಶೋ ಅನೇಕ ಪ್ರತಿಭೆಗಳಿಗೆ ವೇದಿಕೆ ಆಗಿದೆ. ಅನೇಕ ಗಾಯಕರನ್ನು ಇದು ಪರಿಚಯಿಸಿದೆ. ನಾದಬ್ರಹ್ಮ ಹಂಸಲೇಖ ಅವರ ಮಾರ್ಗದರ್ಶನದಿಂದ ಅನೇಕರ ಬದುಕು ಬದಲಾಗಿದೆ. ಇದರ ವೀಕ್ಷಕರ ವರ್ಗ ಕೂಡ ದೊಡ್ಡದಿದೆ.